October 22, 2026
Thursday, October 22, 2026
spot_img

ಟೀ ಟೈಂಗೆ ಸೂಪರ್ ಸ್ನ್ಯಾಕ್ಸ್: ಮನೆಯಲ್ಲೇ ಮಾಡಿ ಗರಿಗರಿಯಾದ ರಾಗಿ ಚಿಪ್ಸ್

ಸಂಜೆ ಸಮಯದಲ್ಲಿ ಟೀ ಅಥವಾ ಕಾಫಿ ಜೊತೆ ತಿನ್ನಲು ರುಚಿಕರವಾದ ಮತ್ತು ಆರೋಗ್ಯಕರ ಸ್ನ್ಯಾಕ್ಸ್ ಬೇಕೆಂದರೆ ರಾಗಿ ಚಿಪ್ಸ್ ಬೆಸ್ಟ್. ಮನೆಯಲ್ಲೇ ಸುಲಭವಾಗಿ ಮಾಡಬಹುದಾದ ಈ ಚಿಪ್ಸ್ ಮಕ್ಕಳಿಂದ ದೊಡ್ಡವರವರೆಗೂ ಎಲ್ಲರಿಗೂ ಇಷ್ಟವಾಗುತ್ತದೆ. ರಾಗಿ ಇರುವುದರಿಂದ ಇದು ಪೌಷ್ಟಿಕಾಂಶದಲ್ಲೂ ಸಮೃದ್ಧವಾಗಿದೆ.

ಬೇಕಾಗುವ ಸಾಮಗ್ರಿಗಳು

ರಾಗಿ ಹಿಟ್ಟು – 1 ಕಪ್
ಅಕ್ಕಿ ಹಿಟ್ಟು – 2 ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಖಾರದ ಪುಡಿ – ½ ಚಮಚ
ಓಂಕಾಳು – ½ ಚಮಚ
ಚಾಟ್ ಮಸಾಲಾ – ½ ಚಮಚ
ಎಣ್ಣೆ – ಕರಿಯಲು ಅಗತ್ಯವಿರುವಷ್ಟು
ಬಿಸಿ ನೀರು – ಅಗತ್ಯಕ್ಕೆ ತಕ್ಕಷ್ಟು

ಮಾಡುವ ವಿಧಾನ

ಮೊದಲು ಒಂದು ದೊಡ್ಡ ಬಟ್ಟಲಿನಲ್ಲಿ ರಾಗಿ ಹಿಟ್ಟು, ಅಕ್ಕಿ ಹಿಟ್ಟು, ಓಂಕಾಳು ಮತ್ತು ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಒಂದು ಚಮಚ ಎಣ್ಣೆ ಸೇರಿಸಿ ಬಿಸಿ ನೀರಿನಿಂದ ಚಪಾತಿ ಹಿಟ್ಟಿನಂತೆ ನಾದಿಕೊಳ್ಳಿ. ಹಿಟ್ಟನ್ನು 10 ನಿಮಿಷ ಮುಚ್ಚಿಡಿ.

ಆಮೇಲೆ ಸಣ್ಣ ಉಂಡೆ ಮಾಡಿಕೊಂಡು ತುಂಬಾ ತೆಳುವಾಗಿ ಲಟ್ಟಿಸಿ. ನಂತರ ಚಾಕುವಿನಿಂದ ತ್ರಿಕೋನ ಅಥವಾ ಡೈಮಂಡ್ ಆಕಾರದಲ್ಲಿ ಕತ್ತರಿಸಿ.

ಬಾಣಲೆಯಲ್ಲಿ ಎಣ್ಣೆ ಕಾಯಿಸಿ ಮಧ್ಯಮ ಉರಿಯಲ್ಲಿ ಚಿಪ್ಸ್ ಅನ್ನು ಗೋಲ್ಡನ್ ಬಣ್ಣ ಬರುವವರೆಗೆ ಕರಿಯಿರಿ. ತುಂಬಾ ಹೆಚ್ಚು ಉರಿಯಲ್ಲಿ ಕರಿದರೆ ಚಿಪ್ಸ್ ಸುಟ್ಟುಹೋಗುವ ಸಾಧ್ಯತೆ ಇರುತ್ತದೆ.

ಕೊನೆಯಲ್ಲಿ ಖಾರದ ಪುಡಿ ಮತ್ತು ಚಾಟ್ ಮಸಾಲಾ ಚಿಮುಕಿಸಿ ಮಿಕ್ಸ್ ಮಾಡಿದರೆ ರಾಗಿ ಚಿಪ್ಸ್ ಇನ್ನಷ್ಟು ಟೇಸ್ಟಿಯಾಗುತ್ತದೆ. ಟೊಮ್ಯಾಟೋ ಸಾಸ್ ಅಥವಾ ಮಿಂಟ್ ಚಟ್ನಿ ಜೊತೆ ಸವಿದರೆ ಸೂಪರ್!

Must Read