ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಶ್ವದ ಹೆಮ್ಮೆಯ ‘ಕಿಂಗ್ ಆಫ್ ಪಾಪ್’ ಮೈಕಲ್ ಜಾಕ್ಸನ್ ಇಹಲೋಕ ತ್ಯಜಿಸಿ ಬರೋಬ್ಬರಿ 17 ವರ್ಷಗಳೇ ಕಳೆದಿವೆ. ಆದರೂ ಜಗತ್ತಿನಾದ್ಯಂತ ಅವರ ಹಾಡುಗಳು ಮತ್ತು ಅದ್ಭುತ ನೃತ್ಯ ಶೈಲಿಗೆ ಇರುವ ಕ್ರೇಜ್ ಮಾತ್ರ ಕಿಂಚಿತ್ತೂ ಕಡಿಮೆಯಾಗಿಲ್ಲ. ಇತ್ತೀಚೆಗಷ್ಟೇ ತೆರೆಕಂಡ ಅವರ ಬಯೋಪಿಕ್ ಸಿನಿಮಾ ‘ಮೈಕಲ್’ ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿತ್ತು. ಆದರೆ, ಈ ಸಿನಿಮಾ ಮೈಕಲ್ ಅವರ ಯಶಸ್ಸಿನ ದಿನಗಳನ್ನಷ್ಟೇ ತೋರಿಸಿತ್ತು. ಇದೀಗ ಅವರ ಬದುಕಿನ ಅತ್ಯಂತ ಕರಾಳ ಮತ್ತು ವಿವಾದಾತ್ಮಕ ಅಧ್ಯಾಯವನ್ನು ಬಿಚ್ಚಿಡಲು ಪ್ರಸಿದ್ಧ ಒಟಿಟಿ ಸಂಸ್ಥೆ ನೆಟ್‌ಫ್ಲಿಕ್ಸ್ ಸಜ್ಜಾಗಿದೆ.
‘ಮೈಕಲ್ ಜಾಕ್ಸನ್: ದಿ ವರ್ಡಿಕ್ಟ್’ ಟ್ರೈಲರ್ ಔಟ್
ಮೈಕಲ್ ಜಾಕ್ಸನ್ ಜೀವನದ ಅತಿ ದೊಡ್ಡ ವಿವಾದವನ್ನು ಆಧರಿಸಿ ‘ಮೈಕಲ್ ಜಾಕ್ಸನ್: ದಿ ವರ್ಡಿಕ್ಟ್’ ಎಂಬ ಮೂರು ಭಾಗಗಳ ಸ್ಫೋಟಕ ಸಾಕ್ಷ್ಯಚಿತ್ರ ಸರಣಿ ಸಿದ್ಧವಾಗಿದೆ. ಇದರ ಅಧಿಕೃತ ಟ್ರೈಲರ್ ಇತ್ತೀಚೆಗೆ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಈ ಡಾಕ್ಯು-ಸೀರೀಸ್ ಜೂನ್ 3 ರಂದು ನೆಟ್‌ಫ್ಲಿಕ್ಸ್‌ನಲ್ಲಿ ವಿಶ್ವಾದ್ಯಂತ ಸ್ಟ್ರೀಮಿಂಗ್ ಆಗಲಿದೆ.
ಈ ಸಾಕ್ಷ್ಯಚಿತ್ರವು ಪ್ರಮುಖವಾಗಿ 2003 ರಲ್ಲಿ ಮೈಕಲ್ ಜಾಕ್ಸನ್ ವಿರುದ್ಧ ಕೇಳಿಬಂದಿದ್ದ ಅಪ್ರಾಪ್ತರ ಮೇಲಿನ ಲೈಂಗಿಕ ದೌರ್ಜನ್ಯದ ಆರೋಪದ ಸುತ್ತ ಸಾಗುತ್ತದೆ. ಅಂದು ಇಡೀ ವಿಶ್ವ ಮಾಧ್ಯಮಗಳು ಈ ಪ್ರಕರಣವನ್ನು ತೀವ್ರವಾಗಿ ಚರ್ಚಿಸಿದ್ದವು. ದೀರ್ಘಾವಧಿಯ ಕಾನೂನು ಹೋರಾಟದ ನಂತರ, 2005 ರಲ್ಲಿ ನ್ಯಾಯಾಲಯವು ಮೈಕಲ್ ಜಾಕ್ಸನ್ ಅವರನ್ನು ನಿರ್ದೋಷಿ ಎಂದು ಘೋಷಿಸಿತು. ಆದರೆ, ಈ ಸುದೀರ್ಘ ಪ್ರಕರಣವು ಜಾಕ್ಸನ್ ಅವರನ್ನು ಮಾನಸಿಕವಾಗಿ ಮತ್ತು ದೈಹಿಕವಾಗಿ ಜರ್ಜರಿತರನ್ನಾಗಿಸಿತ್ತು. ಅವರು ನಿರಪರಾಧಿ ಎಂದು ಸಾಬೀತಾದರೂ, ಆ ಪ್ರಕರಣದ ಹಿಂದಿನ ರಹಸ್ಯಗಳ ಬಗ್ಗೆ ಇಂದಿಗೂ ಜನರಲ್ಲಿ ಕುತೂಹಲವಿದೆ.
ವಿಶೇಷತೆ ಏನು?
ಅಂದು ನ್ಯಾಯಾಲಯದ ಒಳಗೆ ಕ್ಯಾಮೆರಾಗಳಿಗೆ ಅನುಮತಿ ಇರಲಿಲ್ಲ. ಹಾಗಾಗಿ ಈ ಸರಣಿಯಲ್ಲಿ ಅಂದಿನ ನೈಜ ಘಟನೆಗಳು, ಕೋರ್ಟ್‌ನಲ್ಲಿದ್ದ ಪತ್ರಕರ್ತರು, ಜ್ಯೂರಿ ಸದಸ್ಯರು, ವಕೀಲರು ಹಾಗೂ ಪ್ರತ್ಯಕ್ಷದರ್ಶಿಗಳ ವಿಶೇಷ ಸಂದರ್ಶನಗಳನ್ನು ಒಳಗೊಂಡ ಆರ್ಕೈವ್ ದೃಶ್ಯಗಳನ್ನು ಬಳಸಿಕೊಳ್ಳಲಾಗಿದೆ.
ನಿರ್ದೇಶನ ಮತ್ತು ಬಿಡುಗಡೆ ದಿನಾಂಕ
‘ಕ್ಯಾಂಡಲ್ ಟ್ರೂ ಸ್ಟೋರೀಸ್’ ಸಂಸ್ಥೆ ನಿರ್ಮಿಸಿರುವ ಈ ಬಿಗ್ ಬಜೆಟ್ ಸಾಕ್ಷ್ಯಚಿತ್ರವನ್ನು ಪ್ರಸಿದ್ಧ ನಿರ್ದೇಶಕ ನಿಕ್ ಗ್ರೀನ್ ನಿರ್ದೇಶಿಸಿದ್ದಾರೆ. ಬಯೋಪಿಕ್ ಸಿನಿಮಾ ಮೈಕಲ್ ಅವರ ಕರಾಳ ಮುಖಗಳನ್ನು ತೋರಿಸದ ಕೊರತೆಯನ್ನು ಈ ನೆಟ್‌ಫ್ಲಿಕ್ಸ್ ಸರಣಿ ನೀಗಿಸಲಿದೆ. ಜೂನ್ 3 ರಿಂದ ಪ್ರೇಕ್ಷಕರು ಅಂದಿನ ಕೋರ್ಟ್ ರೂಂನಲ್ಲಿ ನಡೆದ ಅಸಲಿ ಸತ್ಯವನ್ನು ಕಣ್ಣಾರೆ ವೀಕ್ಷಿಸಬಹುದಾಗಿದೆ.



