ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಫಾಲ್ಟಾ ವಿಧಾನಸಭಾ ಮರುಚುನಾವಣೆಯ ಮತದಾನ ಶಾಂತಿಯುತವಾಗಿ ನಡೆದಿದೆ. 87.73% ಮತದಾನ ದಾಖಲಾಗಿದೆ.
ಇದರ ನಡುವೆ ಚುನಾವಣಾ ಅಧಿಕಾರಿಗಳು ಆಘಾತಕಾರಿ ಮಾಹಿತಿಯನ್ನು ಬಹಿರಂಗಪಡಿಸಿದ್ದು, ಬಂಗಾಳ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ಮರು ಮತದಾನದ ವೇಳೆ ಫಾಲ್ಟಾ ಕ್ಷೇತ್ರದ ಟಿಎಂಸಿ ಅಭ್ಯರ್ಥಿ ಜಹಾಂಗೀರ್ ಖಾನ್ ಅವರು ತಮ್ಮ ಮತವನ್ನೇ ಚಲಾಯಿಸಿಲ್ಲ ಎಂದು ಚುನಾವಣಾ ಅಧಿಕಾರಿಗಳು ಘೋಷಿಸಿದ್ದಾರೆ.
ಟಿಎಂಸಿಗೆ ದೊಡ್ಡ ಆಘಾತ
ಫಾಲ್ಟಾ ಕ್ಷೇತ್ರದ ಪಾರ್ಟ್ ನಂಬರ್ 190ರ ಮತಗಟ್ಟೆಯಲ್ಲಿ ಮತದಾರರ ಪಟ್ಟಿಯನ್ನು ಪರಿಶೀಲಿಸಿದ ಪ್ರಿಸೈಡಿಂಗ್ ಆಫೀಸರ್, ಮತದಾರರಾಗಿ ನೋಂದಾಯಿಸಿಕೊಂಡಿದ್ದ ಟಿಎಂಸಿ ನಾಯಕ ಜಹಾಂಗೀರ್ ಖಾನ್ ಮತದಾನ ಮಾಡಲು ಬಾರದೇ ಗೈರಾಗಿದ್ದಾರೆ. ಈ ಮೂಲಕ ಟಿಎಂಸಿಗೆ ದೊಡ್ಡ ಆಘಾತವನ್ನೇ ನೀಡಿದ್ದಾರೆ.
ಈಗಾಗಲೇ ಜಹಾಂಗೀರ್ ಖಾನ್ ಅವರು ಮರು ಚುನಾವಣೆಯಲ್ಲಿ ಸ್ಪರ್ಧಿಸಿಲ್ಲ ಎಂದು ಘೋಷಿಸಿದ್ದರು. ಇದರ ನಡುವೆ ಜಹಾಂಗೀರ್ ಖಾನ್ ಅವರ ಈ ನಿಗೂಢ ನಡೆಗೆ ಟಿಎಂಸಿ
ಹೈಕಮಾಂಡ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಬಿಜೆಪಿ ಮೇಲೆ ಗೂಬೆ ಕೂರಿಸಿದ ಟಿಎಂಸಿ
ಈ ಕುರಿತು ಟಿಎಂಸಿ ಪಕ್ಷ ಪ್ರಕಟಣೆ ಹೊರಡಿಸಿದ್ದು, ಖಾನ್ ಅವರ ನಿರ್ಧಾರ ವೈಯಕ್ತಿಕವಾಗಿದ್ದು, ಪಕ್ಷಕ್ಕೂ ಅದಕ್ಕೂ ಸಂಬಂಧವಿಲ್ಲ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದ ಬಳಿಕ ಫಾಲ್ಟಾ ಒಂದರಲ್ಲೇ 100 ಕ್ಕೂ ಹೆಚ್ಚು ಟಿಎಂಸಿ ಕಾರ್ಯಕರ್ತರನ್ನು ಬಂಧಿಸಲಾಗಿದೆ. ಕೆಲವರು ಆಡಳಿತ ವ್ಯವಸ್ಥೆಯ ಇಂತಹ ಭೀಕರ ಒತ್ತಡಕ್ಕೆ ಮಣಿದು ಕಣದಿಂದ ಹಿಂದೆ ಸರಿಯುತ್ತಿದ್ದಾರೆ ಎಂದು ಆರೋಪಿಸಿದೆ.



