ಹೊಸದಿಗಂತ ಡಿಜಿಟಲ್ ಡೆಸ್ಕ್:
ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್, ತಮ್ಮ ಹಾಗೂ ತಮ್ಮ ಅತ್ತಿಗೆಯ ಬಗ್ಗೆ ಬಾಡಿ ಶೇಮಿಂಗ್ ಮಾಡುವಂತಹ ವೀಡಿಯೊವನ್ನು ಪೋಸ್ಟ್ ಮಾಡಿದ್ದ ಪಾಪರಾಜಿ ಸಾಮಾಜಿಕ ಮಾಧ್ಯಮ ಪೇಜ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೇ 21 ರಂದು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಈ ಕುರಿತು ಬರೆದುಕೊಂಡಿರುವ ಅವರು, ಪತ್ರಿಕೋದ್ಯಮದ ಹೆಸರಿನಲ್ಲಿ ಎಲ್ಲಾ ಮಿತಿಗಳನ್ನು ಮೀರಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ.
ತೀವ್ರ ಆಕ್ರೋಶ ವ್ಯಕ್ತಪಡಿಸಿದ ಸಾರಾ
ಈಗಾಗಲೇ ಡಿಲೀಟ್ ಮಾಡಲಾಗಿರುವ ಆ ವೀಡಿಯೊದ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿರುವ ಸಾರಾ, ಪಾಪರಾಜಿ ಪೇಜ್ ಅನ್ನು ಟ್ಯಾಗ್ ಮಾಡಿ, “ನೀವು ಅಸಹ್ಯಕರವಾಗಿದ್ದೀರಿ. ಇದು ಪತ್ರಿಕೋದ್ಯಮ ಖಂಡಿತ ಅಲ್ಲ. ನಮ್ಮನ್ನು ಏಕಾಂಗಿಯಾಗಿ ಬಿಟ್ಟುಬಿಡಿ” ಎಂದು ಬರೆದಿದ್ದಾರೆ.
ಅಷ್ಟಕ್ಕೇ ನಿಲ್ಲದ ಸಾರಾ, ಮತ್ತೊಂದು ಪೋಸ್ಟ್‌ನಲ್ಲಿ ತೀವ್ರ ಆಸಹ್ಯ ವ್ಯಕ್ತಪಡಿಸುವ ಎಮೋಜಿಗಳೊಂದಿಗೆ, “ನೀವು ನಿಮ್ಮ ಪೋಸ್ಟ್ ಅನ್ನು ಡಿಲೀಟ್ ಮಾಡಿರಬಹುದು, ಆದರೆ ಅದು ನಿಮ್ಮ ಅಸಹ್ಯ ಬುದ್ಧಿಯನ್ನೇನೂ ಕಡಿಮೆ ಮಾಡುವುದಿಲ್ಲ” ಎಂದು ಆ ಪೇಜ್‌ಗೆ ನೇರವಾಗಿ ಚಾಟಿ ಬೀಸಿದ್ದಾರೆ.
ಸಹೋದರನ ಮದುವೆ ಫೋಟೋ ಹಂಚಿಕೊಂಡ ಸಾರಾ
ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ಸಾರಾ ತೆಂಡೂಲ್ಕರ್, ಇತ್ತೀಚೆಗಷ್ಟೇ ನಡೆದ ತಮ್ಮ ಸಹೋದರ ಹಾಗೂ ಕ್ರಿಕೆಟಿಗ ಅರ್ಜುನ್ ತೆಂಡೂಲ್ಕರ್ ಮತ್ತು ಉದ್ಯಮಿ ಸಾನಿಯಾ ಚಾಂಧೋಕ್ ಅದ್ಧೂರಿ ವಿವಾಹ ಮಹೋತ್ಸವದ ಸುಂದರ ಕ್ಷಣಗಳನ್ನು ಹಂಚಿಕೊಂಡಿದ್ದರು. ಅರ್ಜುನ್ ಮತ್ತು ಸಾನಿಯಾ ವಿವಾಹವು ಮಾರ್ಚ್ 5 ರಂದು ಮುಂಬೈನಲ್ಲಿ ನಡೆದಿತ್ತು. ಈ ಮದುವೆಯ ಕಾರ್ಯಕ್ರಮದಲ್ಲಿ ಸಾರಾ ಶಾರುಖ್ ಖಾನ್ ‘ಚಲೇಯಾ’ ಹಾಡಿಗೆ ಹೆಜ್ಜೆ ಹಾಕಿದ್ದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು.
ಜಾಲತಾಣಗಳಲ್ಲಿ ಸಾರಾಗೆ ಭಾರಿ ಬೆಂಬಲ
ಸಾರಾ ಈ ಖಡಕ್ ಪ್ರತಿಕ್ರಿಯೆಯ ನಂತರ ಸದರಿ ಪಾಪರಾಜಿ ಪುಟವು ಆಕ್ಷೇಪಾರ್ಹ ಪೋಸ್ಟ್ ಅನ್ನು ಡಿಲೀಟ್ ಮಾಡಿದೆ. ಇತ್ತೀಚಿನ ದಿನಗಳಲ್ಲಿ ಸೆಲೆಬ್ರಿಟಿಗಳ ವೈಯಕ್ತಿಕ ಜೀವನದಲ್ಲಿ ಅನಗತ್ಯವಾಗಿ ಮೂಗು ತೂರಿಸುವ ಮತ್ತು ಸಾರ್ವಜನಿಕ ವ್ಯಕ್ತಿಗಳು ಹಾಗೂ ಅವರ ಕುಟುಂಬದವರನ್ನು ಗುರಿಯಾಗಿಸಿಕೊಂಡು ಇಂತಹ ಸೂಕ್ಷ್ಮತೆಯಿಲ್ಲದ ಕಮೆಂಟ್‌ಗಳನ್ನು ಮಾಡುವ ಸಂಸ್ಕೃತಿಯ ವಿರುದ್ಧ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಸಾರಾ ತೆಂಡೂಲ್ಕರ್ ಪರವಾಗಿ ಬ್ಯಾಟ್ ಬೀಸಿದ್ದಾರೆ.



