ಹೊಸದಿಗಂತ ಡಿಜಿಟೆಲ್ ಡೆಸ್ಕ್:
ಸ್ಯಾಂಡಲ್ವುಡ್ನ ಪ್ರತಿಭಾವಂತ ನಟಿ ರುಕ್ಮಿಣಿ ವಸಂತ್ ಹೆಸರಿನಲ್ಲಿ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಆಕ್ಷೇಪಾರ್ಹ ವಿಡಿಯೋವೊಂದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಬಿಕಿನಿ ಧರಿಸಿರುವ ಮಹಿಳೆಯೊಬ್ಬರ ವಿಡಿಯೋಗೆ ಎಐ ಡೀಪ್ಫೇಕ್ (AI Deepfake) ತಂತ್ರಜ್ಞಾನದ ಮೂಲಕ ನಟಿಯ ಮುಖವನ್ನು ದುರ್ಬಳಕೆ ಮಾಡಿಕೊಂಡಿರುವುದು ಸಾರ್ವಜನಿಕರಲ್ಲಿ ಹಾಗೂ ಚಿತ್ರರಂಗದಲ್ಲಿ ಆಕ್ರೋಶ ಮೂಡಿಸಿದೆ. ತಂತ್ರಜ್ಞಾನದ ಈ ಕರಾಳ ಮುಖದ ಬಗ್ಗೆ ಸ್ವತಃ ನಟಿ ಸೋಷಿಯಲ್ ಮೀಡಿಯಾದಲ್ಲಿ ಅಧಿಕೃತ ಪ್ರಕಟಣೆ ಹೊರಡಿಸಿ, ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದಾರೆ.
ವೈರಲ್ ಆಗಿರುವ ವಿಡಿಯೋದಲ್ಲಿ ಮಹಿಳೆಯೊಬ್ಬರು ಹಸಿರು ಬಣ್ಣದ ಬಿಕಿನಿ ಧರಿಸಿ ಸ್ವಿಮ್ಮಿಂಗ್ ಪೂಲ್ಗೆ ಇಳಿಯುವ ದೃಶ್ಯವಿದೆ. ಆದರೆ ಇದನ್ನು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಮತ್ತು ಡೀಪ್ಫೇಕ್ ತಂತ್ರಜ್ಞಾನ ಬಳಸಿ ರುಕ್ಮಿಣಿ ವಸಂತ್ ಮುಖವನ್ನು ಕೃತಕವಾಗಿ ಜೋಡಿಸಿ ಸೃಷ್ಟಿಸಲಾಗಿದೆ.
ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ನಟಿ ರುಕ್ಮಿಣಿ ವಸಂತ್ ತಮ್ಮ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಪ್ರಕಟಣೆ ಹೊರಡಿಸಿದ್ದಾರೆ. ನನ್ನ ಹೆಸರಿನಲ್ಲಿ ಹರಿದಾಡುತ್ತಿರುವ ಎಐ ಜನರೇಟೆಡ್ ಚಿತ್ರ ಮತ್ತು ವಿಡಿಯೋಗಳು ಸಂಪೂರ್ಣ ನಕಲಿ ಹಾಗೂ ಕಲ್ಪಿತವಾಗಿವೆ. ಇಂತಹ ಮಾರ್ಪಡಿಸಿದ ವಿಷಯಗಳನ್ನು ಹಂಚಿಕೊಳ್ಳುವುದು ವೈಯಕ್ತಿಕ ಗೌಪ್ಯತೆಯ ಗಂಭೀರ ಉಲ್ಲಂಘನೆಯಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿರುವ ನಟಿ, ಈ ನಕಲಿ ವಿಡಿಯೋವನ್ನು ಸೃಷ್ಟಿಸಿದವರು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರುವವರ ವಿರುದ್ಧ ಸೈಬರ್ ಕ್ರೈಮ್ (Cyber Crime) ಇಲಾಖೆಗೆ ಅಧಿಕೃತ ದೂರು ನೀಡಿ, ಕಾನೂನು ಹೋರಾಟ ಆರಂಭಿಸಿದ್ದಾರೆ. ಇಂತಹ ಕೃತಕ ಹಾಗೂ ನಕಲಿ ವಿಡಿಯೋಗಳನ್ನು ಯಾರೂ ಫಾರ್ವರ್ಡ್ ಮಾಡಬಾರದು ಮತ್ತು ಶೇರ್ ಮಾಡಬಾರದು ಎಂದು ನಟಿ ವಿನಂತಿಸಿಕೊಂಡಿದ್ದಾರೆ.



