ಹೊಸದಿಗಂತ ವರದಿ ಬೀದರ್:
ಮೇ.8ರಂದು ಜಿಲ್ಲೆಯ ಕಮಲನಗರ ತಾಲೂಕಿನ ಬೆಳಕುಣಿ ಗ್ರಾಮದಲ್ಲಿ ಅಪ್ರಾಪ್ತ ವಯಸ್ಕ ಬಾಲಕಿಯ ಹತ್ಯೆ ಪ್ರಕರಣವನ್ನು ಎಸ್.ಐ.ಟಿಗೆ ವಹಿಸಬೇಕೆಂದು ಖ್ಯಾತ ಚಿತ್ರನಟ ಹಾಗೂ ಹೋರಾಟಗಾರ ಚೇತನ ಅಹಿಂಸಾ ಆಗ್ರಹಿಸಿದರು.
ಶನಿವಾರ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಟಿ ಉದ್ದೇಶಿಸಿ ಮಾತನಾಡಿರುವ ಅವರು, 16 ವರ್ಷದ ಅಪ್ರಾಪ್ತ ಬಾಲಕಿಯು ಒರ್ವ ಕ್ರೀಡಾಪಟು. ಈ ಪ್ರಕರಣ ಎಸಗಿದ ಲಖನ ಬಾಬುರಾವ ಪವಾರ ಇವನನ್ನು ಬಚಾವ್ ಮಾಡಲು ಕಾಣದ ಕೈಗಳು ಕೆಲಸ ಮಾಡುತ್ತಿವೆ ಎಂಬುದು ನಿಧಾನಗತಿಯ ತನಿಖೆಯಿಂದ ಗೊತ್ತಾಗುತ್ತಿದೆ. ಮೊದಲಂತೂ ಈಕೆ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಕೇಸ್ ದಾಖಲಾಗಿತ್ತು. ಹಲವಾರು ಸಂಘಟಕರ ಹೋರಾಟದ ಪ್ರತಿಫಲ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಸತ್ಯ ಬಹಿರಂಗವಾಗುತ್ತಿದ್ದಂತೆ ಪೋಕ್ಸೊ ಪ್ರಕರಣ ದಾಖಲಿಸಿದ್ದರೂ ಅಪರಾಧಿಗೆ ಇನ್ನು ಶಿಕ್ಷೆಯಾಗಿಲ್ಲ ಎಂದರು.
ತನಿಖೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಚೇತನ
ಈ ಪ್ರಕರಣದಲ್ಲಿ ಜಿಲ್ಲಾಡಳಿತ ಹಾಗೂ ಪೋಲಿಸ್ ಇಲಾಖೆ ಎಲ್ಲೊ ಸತ್ಯ ಮರೆಮಾಚುತ್ತಿರಬಹುದು ಎಂದೆನಿಸುತ್ತಿದೆ. ಘಟನೆ ನಡೆದು 15 ದಿನಗಳು ಕಳೆದರೂ ಇಲ್ಲಿಗೆ ಐಜಿಪಿಯಾಗಲಿ ಅಥವಾ ಇತರೆ ಹಿರಿಯ ಪೋಲಿಸ್ ಅಧಿಕಾರಿಗಳು ಬರದೆ ಇರುವುದಕ್ಕೆ ಪ್ರಭಾವಿಗಳ ಒತ್ತಡ ಇರಬಹುದು ಅಥವಾ ಆರೋಪಿಯನ್ನು ಈ ಪ್ರಕರಣದಿಂದ ಬಚಾವ್ ಮಾಡಲು ಎಲ್ಲೊ ಒಳಗೊಳಗೆ ಮಸಲತ್ತು ನಡೆಯುತ್ತಿದೆ ಎಂಬ ಅನುಮಾನ ಮೂಡುತ್ತಿದೆ. ಆದ್ದರಿಂದ ಈ ಪ್ರಕರಣ ನಿಸ್ಪಕ್ಷಪಾತವಾಗಿ ತನಿಖೆಯಾಗಲು ಹೊರಗಿನ ಪೋಲಿಸ್ ಅಧಿಕಾರಿಗಳಿಗೆ ಈ ಪ್ರಕರಣದ ಜವಾಬ್ದಾರಿ ವಹಿಸಬೇಕೆಂದು ಅವರು ಒತ್ತಾಯಿಸಿದರು.
ಮತ್ತೊಮ್ಮೆ ಶವಪರೀಕ್ಷೆಗೆ ಒತ್ತಾಯ
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಮ್ಮೆ ಶವ ಪರಿಕ್ಷೆ ನಡೆಸಿ, ಅದರ ವರದಿ ಬಹಿರಂಗಗೊಳಿಸಬೇಕು ಹಾಗೂ ಈ ವಿಚಾರವಾಗಿ ಹೋರಾಟ ಮಾಡುತ್ತಿರುವವರ ವಿರುದ್ಧ ಪ್ರಕರಣ ದಾಖಲಿಸಿ ಅವರ ಧ್ವನಿ ಹತ್ತಿಕ್ಕುವ ಕಾರ್ಯ ನಡೆಯುತ್ತಿದ್ದು, ಅದನ್ನು ಕೈ ಬಿಡಬೇಕು. ಒಟ್ಟಾರೆ ನಿಸ್ಪಕ್ಷಪಾತ ತನಿಖೆಯಾಗಿ ತಪ್ಪಿತಸ್ಥರು ಎಷ್ಟೆ ಪ್ರಭಾವಿಗಳಾಗಿರಲಿ ಅವರಿಗೆ ಶಿಕ್ಷೆ ಆಗಬೇಕು ಹಾಗೂ ನೊಂದ ಕುಟುಂಬಕ್ಕೆ ಪ್ರಾಮಾಣಿಕ ನ್ಯಾಯ ಒದಗಿಸುವ ಜವಾಬ್ದಾರಿ ಜಿಲ್ಲಾಡಳಿತ ಹಾಗೂ ಪೋಲಿಸ್ ಇಲಾಖೆ ಮೇಲಿದೆ. ಈ ವಿಚಾರವಾಗಿ ರಾಜ್ಯದ ಗೃಹ ಸಚಿವರೊಂದಿಗೆ ಮಾತನಾಡುವೆ ಎಂದವರು ತಿಳಿಸಿದರು.
ಇದನ್ನೂ ಓದಿ:
ರಾಜಕೀಯ ಹಾಗೂ ದರ್ಶನ ಪ್ರಕರಣದ ಬಗ್ಗೆ ಪ್ರತಿಕ್ರಿಯೆ
ನಾನು ಸದಾ ಹೋರಾಟಗಾರನೇ ಹೊರತು ರಾಜಕಾರಣಿ ಆಗಲು ಇಷ್ಟ ಪಡುವುದಿಲ್ಲ. ಆದರೆ ರಾಜ್ಯದಲ್ಲಾಗಲಿ ಹಾಗೂ ದೇಶದಲ್ಲಾಗಲಿ ಬದಲಾವಣೆ ಅಗತ್ಯ. ಇತ್ತೀಚೆಗೆ ಜಿರಳೆ ಜನತಾ ಪಾರ್ಟಿ ಎಂಬ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್ ಆಗುತ್ತಿರುವುದಕ್ಕೆ ಪ್ರತಿಕ್ರಿಯಿಸಿದ ಚೇತನ ಅವರು, ಬರೀ ಸಾಮಾಜಿಕ ಮಾಧ್ಯಮಗಳಲ್ಲಿ ಗುರುತಿಸಿಕೊಂಡರೆ ಜನಪ್ರಿಯತೆ ಬರಲ್ಲ. ಬದಲಿಗೆ ಜನರ ಹತ್ತಿರ ಹೋಗಿ ಅವರ ದುಃಖ ದುಮ್ಮಾನ ಆಲಿಸುವ ಕೆಲಸ ಆಗಬೇಕು. ಅಂದಾಗ ಬದಲಾವಣೆ ಸಾಧ್ಯ. ಎಲ್ಲ ಸಂದರ್ಭಗಳಲ್ಲಿ ತಮಿಳುನಾಡು ಮಾದರಿ ಆಗುತ್ತದೆ ಎಂಬುದು ಬರೀ ಭ್ರಮೆ ಮಾತ್ರ ಎಂದರು.
ನಟ ದರ್ಶನ ವಿಚಾರವಾಗಿ ಮಾತನಾಡಿದ ಚೇತನಕುಮಾರ, ಅವರು ಆದಷ್ಟು ಬೇಗ ಹೊರ ಬರುತ್ತಾರೆಂಬ ವಿಶ್ವಾಸ ಇದೆ. ಹಾಗೆ ಹೊರ ಬಂದರೂ ಉತ್ತಮ ಜೀವನಶೈಲಿ ರೂಪಿಸಿಕೊಂಡು ಸಾಮಾನ್ಯರಂತೆ ಬದುಕುವಂತಾಗಲಿ ಎಂದರು.
ಬಿಎಸ್‌ಪಿ ಜಿಲ್ಲಾಧ್ಯಕ್ಷ ಕಪಿಲ ಗೋಡಬೊಲೆ, ದಲಿತ ಮುಖಂಡರಾದ ರಾಜಕುಮಾರ್ ಮೂಲಭಾರತಿ, ಹರ್ಷಿತ್ ದಾಂಡೇಕರ್, ಹನುಮಂತ್ ಮಟ್ಟೆ, ಅಂಬಾದಾಸ್ ಚಕ್ರವರ್ತಿ, ಸಂತೋಷ ಶಿಂದೆ, ಉತ್ತಮ ಸುತಾರ, ರಜನಿಶ ಎಮ್ ಹಾಗೂ ಇತರರು ಪತ್ರಿಕಾಗೋಷ್ಟಿಯಲ್ಲಿದ್ದರು.



