ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ 2026ರ ನಿರ್ಣಾಯಕ ಲೀಗ್ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ್ದು, ಪಂಜಾಬ್ ಕಿಂಗ್ಸ್ ಎದುರು 197 ರನ್‌ಗಳ ಗುರಿ ನಿಗದಿಪಡಿಸಿದೆ.
ಲಖನೌನ ಏಕಾನಾ ಕ್ರೀಡಾಂಗಣದಲ್ಲಿ ನಡೆದ ಈ ಹೈವೋಲ್ಟೇಜ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಲಖನೌ, 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 196 ರನ್ ಕಲೆಹಾಕಿತು.
ಆರಂಭದಲ್ಲೇ ಡಬಲ್ ಶಾಕ್
ಲಖನೌ ತಂಡಕ್ಕೆ ಆರಂಭವೇ ಆಘಾತಕರವಾಗಿತ್ತು. ಆರಂಭಿಕ ಆಟಗಾರ ಅರ್ಶಿನ್ ಕುಲಕರ್ಣಿ ಖಾತೆ ತೆರೆಯುವ ಮುನ್ನವೇ ಪೆವಿಲಿಯನ್ ಸೇರಿದರು. ಬಳಿಕ ನಿಕೋಲಸ್ ಪೂರನ್ ಕೂಡ ವೇಗವಾಗಿ ರನ್ ಸೇರಿಸಲು ವಿಫಲವಾಗಿ ಕೇವಲ 2 ರನ್ ಗಳಿಸಿ ಔಟಾದರು. 20 ರನ್ ಆಗುವಷ್ಟರಲ್ಲಿ ಎರಡು ಪ್ರಮುಖ ವಿಕೆಟ್ ಕಳೆದುಕೊಂಡ ಲಖನೌ ಒತ್ತಡಕ್ಕೆ ಸಿಲುಕಿತು.
ಇದನ್ನೂ ಓದಿ:
ಇಂಗ್ಲಿಸ್-ಬದೋನಿ ಜೋಡಿ ರಕ್ಷಣೆ
ಸಂಕಷ್ಟದ ಕ್ಷಣದಲ್ಲಿ ಜೋಶ್ ಇಂಗ್ಲಿಸ್ ಹಾಗೂ ಆಯುಷ್ ಬದೋನಿ ತಂಡಕ್ಕೆ ಆಸರೆಯಾದರು. ಬದೋನಿ ಕೇವಲ 18 ಎಸೆತಗಳಲ್ಲಿ 43 ರನ್ ಸಿಡಿಸಿ ಪಂದ್ಯದ ಗತಿಯನ್ನು ಬದಲಿಸಿದರು. ಇತ್ತ ಇಂಗ್ಲಿಸ್ ಅದ್ಭುತ ಬ್ಯಾಟಿಂಗ್ ನಡೆಸಿ 44 ಎಸೆತಗಳಲ್ಲಿ 72 ರನ್ ಗಳಿಸಿದರು. ಅವರ ಇನ್ನಿಂಗ್ಸ್‌ನಲ್ಲಿ 9 ಬೌಂಡರಿ ಹಾಗೂ 2 ಸಿಕ್ಸರ್‌ಗಳಿದ್ದವು.
ಕೊನೆಯಲ್ಲಿ ಸಮದ್ ಸ್ಫೋಟ
ಕೊನೆಯ ಓವರ್‌ಗಳಲ್ಲಿ ಅಬ್ದುಲ್ ಸಮದ್ ದಿಟ್ಟ ಆಟವಾಡಿ ಪಂಜಾಬ್ ಬೌಲರ್‌ಗಳಿಗೆ ಬೆವರಿಳಿಸಿದರು. ಸಮದ್ 20 ಎಸೆತಗಳಲ್ಲಿ ಅಜೇಯ 37 ರನ್ ಸಿಡಿಸಿ ತಂಡದ ಮೊತ್ತವನ್ನು 190ರ ಗಡಿ ದಾಟಿಸಿದರು. ಪಂಜಾಬ್ ಪರ ಯಾನ್ಸನ್ ಮತ್ತು ಚಹಲ್ ತಲಾ ಎರಡು ವಿಕೆಟ್ ಪಡೆದರು. ಇದೀಗ ಪ್ಲೇಆಫ್ ಕನಸು ಉಳಿಸಿಕೊಳ್ಳಲು ಪಂಜಾಬ್ ಕಿಂಗ್ಸ್ 197 ರನ್ ಬೆನ್ನಟ್ಟಬೇಕಿದೆ.



