ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಯಚೂರು ಜಿಲ್ಲೆ ಹಾಗೂ ಮಂತ್ರಾಲಯ ಪುಣ್ಯಕ್ಷೇತ್ರದ ಸುತ್ತಮುತ್ತ ಶನಿವಾರ ತಡರಾತ್ರಿ ಗುಡುಗು, ಮಿಂಚು ಹಾಗೂ ಬಿರುಗಾಳಿ ಸಹಿತ ಭೀಕರ ಮಳೆಯಾಗಿದೆ. ರಾತ್ರಿಯಿಡೀ ಸುರಿದ ಅಕಾಲಿಕ ಧಾರಾಕಾರ ಮಳೆಯಿಂದಾಗಿ ಮಂತ್ರಾಲಯಕ್ಕೆ ಆಗಮಿಸಿದ್ದ ದೇಶದ ವಿವಿಧ ಭಾಗಗಳ ನೂರಾರು ಭಕ್ತರು ತಂಗಲು ಸೂಕ್ತ ಜಾಗವಿಲ್ಲದೆ ಮತ್ತು ಗಾಳಿ-ಮಳೆಗೆ ಸಿಲುಕಿ ತೀವ್ರ ಸಂಕಷ್ಟ ಎದುರಿಸುವಂತಾಯಿತು.
ಕಲ್ಯಾಣ ಮಂಟಪಗಳ ಬಾಗಿಲು ಮುಕ್ತ
ಮಳೆಯ ಆರ್ಭಟಕ್ಕೆ ಸಿಲುಕಿ ಭಕ್ತರು ಪಡುತ್ತಿದ್ದ ತೊಂದರೆಯನ್ನು ಗಮನಿಸಿದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿ ಅವರು ತಕ್ಷಣವೇ ಕಾರ್ಯಪ್ರವೃತ್ತರಾದರು. ಮಠದ ಅಧೀನದಲ್ಲಿರುವ ಎಲ್ಲಾ ಕಲ್ಯಾಣ ಮಂಟಪಗಳ ಬಾಗಿಲುಗಳನ್ನು ತಕ್ಷಣವೇ ತೆರೆಯುವಂತೆ ಸಿಬ್ಬಂದಿಗೆ ತುರ್ತು ಆದೇಶ ನೀಡಿದರು. ಮಳೆಯಲ್ಲಿ ನೆನೆಯುತ್ತಿದ್ದ ಭಕ್ತರನ್ನು ಸುರಕ್ಷಿತವಾಗಿ ಕಲ್ಯಾಣ ಮಂಟಪಗಳಿಗೆ ಕರೆತಂದು, ಅವರಿಗೆ ಉಚಿತವಾಗಿ ಉಳಿದುಕೊಳ್ಳಲು ವ್ಯವಸ್ಥೆ ಕಲ್ಪಿಸುವ ಮೂಲಕ ಶ್ರೀಗಳು ಭಕ್ತರ ಪಾಲಿಗೆ ರಕ್ಷಕರಾಗಿ ನಿಂತಿದ್ದಾರೆ.
ಇದನ್ನೂ ಓದಿ:
ಬಿಸಿ ಬಿಸಿ ಉಪಾಹಾರದ ವ್ಯವಸ್ಥೆ
ಕೇವಲ ಆಶ್ರಯ ನೀಡುವುದಷ್ಟೇ ಅಲ್ಲದೆ, ಚಳ ಹಾಗೂ ಮಳೆಯಿಂದ ನಡುಗುತ್ತಿದ್ದ ಭಕ್ತರಿಗೆ ಇಂದು ಬೆಳ್ಳಂಬೆಳಗ್ಗೆಯೇ ಮಠದ ವತಿಯಿಂದ ಬಿಸಿಬಿಸಿ ಕಾಫಿ, ಟೀ ಹಾಗೂ ಅತ್ಯುತ್ತಮ ಉಪಾಹಾರದ (ಟಿಫಿನ್) ವ್ಯವಸ್ಥೆಯನ್ನು ಕಲ್ಪಿಸಲಾಯಿತು. ರಾಯರ ದರ್ಶನಕ್ಕೆ ಬಂದು ಪ್ರಕೃತಿ ವಿಕೋಪಕ್ಕೆ ಸಿಲುಕಿದ್ದ ತಮಗೆ ಮಠವು ಸಕಾಲದಲ್ಲಿ ನೀಡಿದ ಈ ಆಶ್ರಯಕ್ಕೆ ಭಕ್ತ ಮಹಾಶಯರು ಶ್ರೀಗಳ ವಿರುದ್ಧ ಮತ್ತು ಮಠದ ಆಡಳಿತ ಮಂಡಳಿಗೆ ಮನಸಾರ ಕೃತಜ್ಞತೆ ಸಲ್ಲಿಸಿದ್ದಾರೆ.
ಜಿಲ್ಲೆಯಲ್ಲಿ ಸಿಡಿಲಿನ ಆರ್ಭಟ: ತೆಂಗಿನಮರ ಭಸ್ಮ
ಇನ್ನು ರಾಯಚೂರು ಜಿಲ್ಲೆಯಾದ್ಯಂತ ಮಳೆಯ ಆರ್ಭಟ ಜೋರಾಗಿದ್ದು, ಅರಕೇರಾ ತಾಲೂಕಿನ ಮುಕ್ಕಲಗುಡ್ಡ ತಾಂಡಾದಲ್ಲಿ ಭೀಕರ ಸಿಡಿಲು ಬಡಿದಿದೆ. ತಾಂಡಾದ ನಿವಾಸಿ ಮನೋಹರ್ ನಾಯ್ಕ್ ಎಂಬುವವರ ಮನೆ ಮುಂದೆ ಇದ್ದ ಬೃಹತ್ ತೆಂಗಿನಮರಕ್ಕೆ ಏಕಾಏಕಿ ಸಿಡಿಲು ಬಡಿದ ಪರಿಣಾಮ, ಇಡೀ ಮರ ಹೊತ್ತಿ ಉರಿದು ಸಂಪೂರ್ಣವಾಗಿ ಭಸ್ಮವಾಗಿದೆ. ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ



