ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಶ್ಚಿಮ ಬಂಗಾಳದ ಫಾಲ್ಟಾ ವಿಧಾನಸಭಾ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ದೇಬಾಂಶು ಪಾಂಡಾ ಭರ್ಜರಿ ಮುನ್ನಡೆ ಸಾಧಿಸಿದ್ದು, ಕ್ಷೇತ್ರದ ರಾಜಕೀಯ ವಾತಾವರಣವನ್ನು ಸಂಪೂರ್ಣವಾಗಿ ಬದಲಾಯಿಸಿದ್ದಾರೆ.
ಮತ ಎಣಿಕೆಯ ಆರಂಭಿಕ ಹಂತಗಳಿಂದಲೇ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದ್ದು, ಎದುರಾಳಿಗಳಿಗೆ ತೀವ್ರ ಹಿನ್ನಡೆ ಉಂಟಾಗಿದೆ.
8 ಸುತ್ತುಗಳಲ್ಲೇ ಭರ್ಜರಿ ಅಂತರ
ಇದುವರೆಗೆ ಪೂರ್ಣಗೊಂಡಿರುವ ಎಂಟು ಸುತ್ತಿನ ಮತ ಎಣಿಕೆಯಲ್ಲಿ ದೇಬಾಂಶು ಪಾಂಡಾ ಸುಮಾರು 51 ಸಾವಿರಕ್ಕೂ ಅಧಿಕ ಮತಗಳನ್ನು ಪಡೆದಿದ್ದಾರೆ. ಸಿಪಿಎಂ ಅಭ್ಯರ್ಥಿ ಶಂಭುನಾಥ್ ಕುರ್ಮಿ ಎರಡನೇ ಸ್ಥಾನದಲ್ಲಿದ್ದರೆ, ಕಾಂಗ್ರೆಸ್ ಮತ್ತು ಟಿಎಂಸಿ ಅಭ್ಯರ್ಥಿಗಳು ಬಹಳ ಹಿಂದೆ ಉಳಿದಿದ್ದಾರೆ. ಪ್ರಸ್ತುತ ಬಿಜೆಪಿ ಅಭ್ಯರ್ಥಿ ಸುಮಾರು 31 ಸಾವಿರ ಮತಗಳ ಅಂತರದಲ್ಲಿ ಮುನ್ನಡೆ ಸಾಧಿಸಿರುವುದು ಗಮನಸೆಳೆಯುತ್ತಿದೆ.
ಇದನ್ನೂ ಓದಿ:
ಮರುಮತದಾನದ ಬಳಿಕ ರಾಜಕೀಯ ಚಿತ್ರಣ ಬದಲಾವಣೆ
ಈ ಕ್ಷೇತ್ರದಲ್ಲಿ ಏಪ್ರಿಲ್ ತಿಂಗಳಲ್ಲಿ ನಡೆದ ಮೊದಲ ಹಂತದ ಮತದಾನ ವೇಳೆ ಇವಿಎಂ ಅಕ್ರಮಗಳ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಸಂಪೂರ್ಣ ಮತದಾನವನ್ನು ರದ್ದುಗೊಳಿಸಿತ್ತು. ಬಳಿಕ ಮೇ 21ರಂದು ಕಠಿಣ ಭದ್ರತೆಯ ನಡುವೆ ಮರುಮತದಾನ ನಡೆಸಲಾಗಿತ್ತು. ಈ ಬೆಳವಣಿಗೆ ಕ್ಷೇತ್ರದ ರಾಜಕೀಯ ಸಮೀಕರಣಗಳನ್ನೇ ಬದಲಿಸಿತು.
ಟಿಎಂಸಿ ಅಭ್ಯರ್ಥಿ ಹಿಂದೆ ಸರಿದ ಪರಿಣಾಮ?
ಮರುಮತದಾನಕ್ಕೂ ಮುನ್ನ ಟಿಎಂಸಿ ಅಭ್ಯರ್ಥಿ ಜಹಾಂಗೀರ್ ಖಾನ್ ಸ್ಪರ್ಧೆಯಿಂದ ಹಿಂದೆ ಸರಿದದ್ದು ಚುನಾವಣೆಯಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿತ್ತು. ಈ ನಿರ್ಧಾರ ಮತದಾರರ ಮನೋಭಾವದ ಮೇಲೆ ಪರಿಣಾಮ ಬೀರಿದಂತೆ ಕಾಣುತ್ತಿದೆ. ಸದ್ಯದ ಟ್ರೆಂಡ್ ನೋಡಿದರೆ ಫಾಲ್ಟಾ ಕ್ಷೇತ್ರದಲ್ಲಿ ಬಿಜೆಪಿ ಗೆಲುವಿನತ್ತ ದಾಪುಗಾಲಿಟ್ಟಿದೆ.



