September 28, 2026
Monday, September 28, 2026
spot_img

ಪ್ರಧಾನಿ ಮೋದಿ ಸಾಗುವ ಮಾರ್ಗದ ಬಳಿ ಸ್ಫೋಟಕ ಪತ್ತೆ ಪ್ರಕರಣ: 6 ಪೊಲೀಸ್ ಸಿಬ್ಬಂದಿಗಳು ಅಮಾನತು

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರಿನಲ್ಲಿ ಪ್ರಧಾನಿ ಮೋದಿ ಸಾಗುವ ಮಾರ್ಗದಲ್ಲಿ ಜಿಲೆಟಿನ್ ಬಾಕ್ಸ್ ಪತ್ತೆ ಪ್ರಕರಣಕ್ಕೆ ಸಂಬಂಧಿಸಿ ಕರ್ತವ್ಯ ಲೋಪದ ಹಿನ್ನೆಲೆ ಪೊಲೀಸ್ ಅಧಿಕಾರಿ ಸೇರಿ ಒಟ್ಟು ಆರು ಮಂದಿ ಸಿಬ್ಬಂದಿಯನ್ನು ಅಮಾನತು ಮಾಡಿ ಬೆಂಗಳೂರು ದಕ್ಷಿಣ ಜಿಲ್ಲೆಯ ಪೊಲೀಸ್ ಅಧೀಕ್ಷಕ ಶ್ರೀನಿವಾಸ ಗೌಡ ಅವರು ಆದೇಶ ಹೊರಡಿಸಿದ್ದಾರೆ.

ಮೇ 10ರಂದು ಬೆಂಗಳೂರು ದಕ್ಷಿಣ ತಾಲೂಕಿನ ವಡೇರಹಳ್ಳಿ ಗೇಟ್ ಸಮೀಪ, ಪ್ರಧಾನಿ ಮೋದಿ ಅವರು ಆರ್ಟ್ ಆಫ್ ಲಿವಿಂಗ್ ಆಶ್ರಮಕ್ಕೆ ತೆರಳುವ ಕೆಲವೇ ಗಂಟೆಗಳ ಮೊದಲು ಮಾರ್ಗದ ಬಳಿ ಸ್ಫೋಟಕ ವಸ್ತುಗಳು ಪತ್ತೆಯಾಗಿತ್ತು.

ಪಿಎಸ್‌ಐ ಸಹಿತ ಆರು ಮಂದಿ ಅಮಾನತು

ಈ ಕುರಿತು ತನಿಖೆ ಚುರುಕುಗೊಳಿಸಿದ ಪೊಲೀಸ್ ಇಲಾಖೆ, ಭದ್ರತೆ ಮತ್ತು ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟಿದ್ದ ಪಿಎಸ್‌ಐ, ಒಬ್ಬ ಸಹಾಯಕ ಉಪನಿರೀಕ್ಷಕ ಮತ್ತು ನಾಲ್ವರು ಪೊಲೀಸ್ ಕಾನ್ಸ್‌ಟೇಬಲ್‌ಗಳನ್ನು ಅಮಾನತುಗೊಳಿಸಲಾಗಿದೆ.

ಕರ್ತವ್ಯ ಲೋಪ

ಪ್ರಾಥಮಿಕ ತನಿಖೆಯಲ್ಲಿ, ಪ್ರಧಾನಿ ಅವರ ಆಗಮನದ ಸಮಯದಲ್ಲಿ ಅತ್ಯಂತ ಸೂಕ್ಷ್ಮ ಭದ್ರತಾ ಕಾರ್ಯಾಚರಣೆಗೆ ನಿಯೋಜನೆಗೊಂಡಿದ್ದರೂ, ಸಿಬ್ಬಂದಿಗಳು ಕರ್ತವ್ಯ ಲೋಪ ಎಸಗಿದ್ದಾರೆ ಎಂದು ಅಮಾನತು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸ್ಫೋಟಕ ವಸ್ತುಗಳು ಪತ್ತೆ

ಪ್ರಧಾನಿ ಬೆಂಗಳೂರು ನಗರಕ್ಕೆ ಆಗಮಿಸುವ ಸುಮಾರು ಎರಡು ಗಂಟೆಗಳ ಮೊದಲು, ರಸ್ತೆ ಬದಿಯಲ್ಲಿ ಅನುಮಾನಾಸ್ಪದ ಪೆಟ್ಟಿಗೆಯನ್ನು ಅಧಿಕಾರಿಗಳು ಪತ್ತೆಹಚ್ಚಿದ್ದರಿಂದ ಪೊಲೀಸ್ ಇಲಾಖೆ ಮತ್ತು ಭದ್ರತಾ ಸಂಸ್ಥೆಗಳಲ್ಲಿ ಆತಂಕ ಉಂಟಾಗಿತ್ತು. ಮಾಹಿತಿ ತಿಳಿದ ಕೂಡಲೇ ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿತು. ಈ ವೇಳೆ ಜೆಲಟಿನ್ ಕಡ್ಡಿಗಳಂತಿರುವ ಸ್ಫೋಟಕ ವಸ್ತುಗಳು ಪತ್ತೆಯಾಗಿತ್ತು.

Must Read