July 14, 2026
Tuesday, July 14, 2026
spot_img

‘ನೀವು ಡಿಜಿಟಲ್ ಅರೆಸ್ಟ್ ನಲ್ಲಿದ್ದೀರ…’: ಬೆದರಿಸಿ ನಿವೃತ್ತ ಶಿಕ್ಷಕಿಯ ‘ಕಮಾಯಿ’ ದೋಚಿದ ಸೈಬರ್ ಗ್ಯಾಂಗ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರು ನಗರದಲ್ಲಿ ಬೆಚ್ಚಿಬೀಳಿಸುವ ಸೈಬರ್ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. 74 ವರ್ಷದ ನಿವೃತ್ತ ಶಿಕ್ಷಕಿಯೊಬ್ಬರನ್ನು “ಡಿಜಿಟಲ್ ಅರೆಸ್ಟ್” ಹೆಸರಿನಲ್ಲಿ ತಿಂಗಳುಗಳ ಕಾಲ ಮಾನಸಿಕ ಒತ್ತಡಕ್ಕೆ ಒಳಪಡಿಸಿ, ಸುಮಾರು 24 ಕೋಟಿ ರೂಪಾಯಿ ವಂಚಿಸಲಾಗಿದೆ. ಪ್ರಕರಣ ಸಂಬಂಧ ದೇಶದ ವಿವಿಧ ರಾಜ್ಯಗಳಿಂದ ಆರು ಮಂದಿಯನ್ನು ಬಂಧಿಸಲಾಗಿದೆ.

‘CBI-ED ಅಧಿಕಾರಿಗಳು’ ಎಂದು ಕರೆ ಮಾಡಿ ಬೆದರಿಕೆ

ಶಿವಾಜಿನಗರ ನಿವಾಸಿಯಾಗಿರುವ ಲಕ್ಷ್ಮಿ ರಾಮಮೂರ್ತಿ ಎಂಬ ಮಹಿಳೆಗೆ ಆರೋಪಿಗಳು ಕರೆ ಮಾಡಿ, ತಾವು ಸಿಬಿಐ ಹಾಗೂ ಇಡಿ ಅಧಿಕಾರಿಗಳು ಎಂದು ನಂಬಿಸಿದ್ದರು. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನಿಮ್ಮ ಹೆಸರು ಬಂದಿದೆ ಎಂದು ಹೇಳಿ, ನಿರಂತರವಾಗಿ ವೀಡಿಯೊ ಕಾಲ್ ಮತ್ತು ಫೋನ್ ಮೂಲಕ ಭಯ ಹುಟ್ಟಿಸಿದ್ದರು. ಕಾನೂನು ಕ್ರಮದ ಆತಂಕದಿಂದ ಮಹಿಳೆ ಹಲವು ಹಂತಗಳಲ್ಲಿ ಹಣ ವರ್ಗಾವಣೆ ಮಾಡಿದ್ದಾರೆ.

ಬ್ಯಾಂಕ್ ಮ್ಯಾನೇಜರ್ ಜಾಗರೂಕತೆಯಿಂದ ಬಯಲಾಯ್ತು ಸತ್ಯ

ಹೆಚ್ಚುವರಿ ಹಣಕ್ಕಾಗಿ ಮಹಿಳೆ ಮನೆಯಲ್ಲಿದ್ದ 1.3 ಕೆಜಿ ಚಿನ್ನವನ್ನು ಅಡವಿಡಲು ಬ್ಯಾಂಕ್‌ಗೆ ಬಂದಾಗ, ಅನುಮಾನಗೊಂಡ ಬ್ಯಾಂಕ್ ವ್ಯವಸ್ಥಾಪಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ವಿಚಾರಣೆ ನಡೆಸಿದ ಪೊಲೀಸರಿಗೆ “ಡಿಜಿಟಲ್ ಬಂಧನ” ವಂಚನೆ ಬೆಳಕಿಗೆ ಬಂದಿದೆ.

ಇದನ್ನೂ ಓದಿ:

4 ಕೋಟಿ ರೂ. ಹಣ ಸೀಜ್ ಮಾಡಿದ ಪೊಲೀಸರು

ತನಿಖೆಯಲ್ಲಿ ಮಹಿಳೆ 23 ಬ್ಯಾಂಕ್ ಖಾತೆಗಳಿಗೆ 26 ಬಾರಿ ಹಣ ವರ್ಗಾವಣೆ ಮಾಡಿರುವುದು ಪತ್ತೆಯಾಗಿದೆ. ರಾಜ್ಯ ಸೈಬರ್ ಕಮಾಂಡ್ ಪೊಲೀಸರು ವಿವಿಧ ರಾಜ್ಯಗಳಲ್ಲಿ ಕಾರ್ಯಾಚರಣೆ ನಡೆಸಿ ಆರು ಆರೋಪಿಗಳನ್ನು ಬಂಧಿಸಿದ್ದು, 4 ಕೋಟಿ ರೂ.ಕ್ಕೂ ಹೆಚ್ಚು ಹಣವನ್ನು ಸ್ಥಗಿತಗೊಳಿಸಿ, 1.46 ಕೋಟಿ ರೂ. ವಶಪಡಿಸಿಕೊಂಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !