ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಪಶ್ಚಿಮ ಬಂಗಾಳದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಸಿಎಂ ಸುವೇಂದು ಅಧಿಕಾರಿ, ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾದೇಶಿ ನುಸುಳುಕೋರರು ಮತ್ತು ರೋಹಿಂಗ್ಯಾಗಳ ವಿರುದ್ಧ ಕಾರ್ಯಚರಣೆಯನ್ನು ಶುರು ಮಾಡಿಕೊಂಡಿದ್ದು, ಈ ಬೆನ್ನೆಲ್ಲೆ ಅಕ್ರಮ ವಲಸಿಗರು ಬಂಗಾಳ ಬಿಟ್ಟು ಓಡಿಹೋಗುತ್ತಿದ್ದಾರೆ.
ಕಳೆದ ಕೆಲವು ದಿನಗಳ ಹಿಂದೆ ಸಿಎಂ ಸುವೇಂದು ಅವರು,ರಾಜ್ಯದಾದ್ಯಂತ ಹೋಲ್ಡಿಂಗ್ ಸೆಂಟರ್’ಗಳನ್ನು ಸ್ಥಾಪಿಸುವುದಾಗಿ ಘೋಷಿಸಿದ ಬೆನ್ನಲ್ಲೇ ಅಕ್ರಮ ವಲಸಿಗರಲ್ಲಿ ಭೀಕರ ನಡುಕ ಶುರುವಾಗಿದ್ದು, ಕಾನೂನು ಕ್ರಮದಿಂದ ತಪ್ಪಿಸಿಕೊಳ್ಳಲು ಸಹಸ್ರಾರು ನುಸುಳುಕೋರರು ಗಡಿ ಭಾಗದತ್ತ ಮುಖ ಮಾಡಿದ್ದಾರೆ.
ಗಡಿ ಪ್ರದೇಶಗಳಲ್ಲಿ ಬಾಂಗ್ಲಾ ಪ್ರಜೆಗಳು ಜಮಾ
ಭಾರತ-ಬಾಂಗ್ಲಾದೇಶ ಗಡಿಯ ಬಿತ್ರಿ ಹಕಿಂಪುರ್ ಚೆಕ್‌ಪೋಸ್ಟ್ ಸೇರಿದಂತೆ ವಿವಿಧ ಗಡಿ ಪ್ರದೇಶಗಳಲ್ಲಿ ಬಾಂಗ್ಲಾ ಪ್ರಜೆಗಳು ಜಮಾಯಿಸುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಪಶ್ಚಿಮ ಬಂಗಾಳದಲ್ಲಿ ಜಾರಿಗೆ ತರಲಾಗಿದ್ದ SIR ಪ್ರಕ್ರಿಯೆಯ ಸಂದರ್ಭದಲ್ಲೂ ಉತ್ತರ 24 ಪರಗಣ ಜಿಲ್ಲೆಯ ಸ್ವರೂಪನಗರದ ಬಿತ್ರಿ ಹಕಿಂಪುರ್ ಗಡಿ ಮೂಲಕ ಸಾವಿರಾರು ಅಕ್ರಮ ವಲಸಿಗರು ದೇಶ ಬಿಟ್ಟು ಓಡಿಹೋಗಿದ್ದರು. ಇದೀಗ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದು ಬೆನ್ನಲ್ಲೇ ಆಡಳಿತಾತ್ಮಕ ತನಿಖೆ ಚುರುಕುಗೊಳಿಸಿದ್ದು, ಮತ್ತ ಬಾಂಗ್ಲಾ ಪ್ರಜೆಗಳು ತಮ್ಮ ದೇಶದತ್ತ ಮುಖಮಾಡಿದ್ದಾರೆ.
ಹೋಲ್ಡಿಂಗ್ ಸೆಂಟರ್ ಓಪನ್
ಪಶ್ಚಿಮ ಬಂಗಾಳ ಗೃಹ ಇಲಾಖೆಯ ಕಟ್ಟುನಿಟ್ಟಿನ ಅಧಿಸೂಚನೆಯ ಮೇರೆಗೆ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು ಅಕ್ರಮವಾಗಿ ಬಂಧಿತರಾಗುವ ಬಾಂಗ್ಲಾದೇಶಿಯರು ಮತ್ತು ರೋಹಿಂಗ್ಯಾಗಳನ್ನು ಇರಿಸಲು ಪ್ರತ್ಯೇಕ ಹೋಲ್ಡಿಂಗ್ ಸೆಂಟರ್ ಸ್ಥಾಪಿಸುತ್ತಿದ್ದಾರೆ. ಮಾಲ್ಡಾ ಜಿಲ್ಲೆಯ ಇಂಗ್ಲಿಷ್‌ಬಜಾರ್‌ನ ಬಾಗ್‌ಬಾರಿ ಪ್ರದೇಶದಲ್ಲಿ ಹೋಲ್ಡಿಂಗ್ ಸೆಂಟರ್ ಅನ್ನು ಸೋಮವಾರ ಅಧಿಕೃತವಾಗಿ ತೆರೆಯಲಾಗಿದೆ. ಈ ಕೇಂದ್ರದ ಭದ್ರತೆಗೆ ಹೈ-ರೆಸಲ್ಯೂಷನ್ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ರಕ್ಷಣೆಗಾಗಿ ಸಶಸ್ತ್ರ ಪೊಲೀಸರನ್ನು ನಿಯೋಜಿಸಲಾಗಿದೆ.
ಪೊಲೀಸರ ಭರ್ಜರಿ ಕಾರ್ಯಾಚರಣೆ
ಇದರ ಬೆನ್ನಲ್ಲೇ ಮಾಲ್ಡಾ ಜಿಲ್ಲೆಯ ಗಾಜೋಲ್ ಪೊಲೀಸ್ ಠಾಣಾ ವ್ಯಾಪ್ತಿಯ ಪಾಂಡುವಾ ಪ್ರದೇಶದಲ್ಲಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಈ ವೇಳೆ ಸೂಕ್ತ ದಾಖಲೆಗಳಿಲ್ಲದೆ ವಾಸಿಸುತ್ತಿದ್ದ ಒಂಬತ್ತು ಮಂದಿ ಬಾಂಗ್ಲಾ ಪ್ರಜೆಗಳನ್ನು ಹೆಡೆಮುರಿ ಕಟ್ಟಲಾಗಿದೆ. ಇವರನ್ನು ಹೊಸದಾಗಿ ಆರಂಭಿಸಲಾದ ಬಾಗ್‌ಬಾರಿ ಹೋಲ್ಡಿಂಗ್ ಸೆಂಟರ್‌ಗೆ ತರಲಾಗಿದೆ.



