ಹೊಸದಿಗಂತ ವರದಿ ವಿಜಯನಗರ:
ಕಳೆದ ಎರಡ್ಮೂರು ದಿನಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ನಡೆಯುತ್ತಿರುವ ಆಂತರಿಕ ವಿದ್ಯಮಾನಗಳನ್ನು ಗಮನಿಸಿದರೆ ಸಿದ್ದರಾಮಯ್ಯ ರಾಜೀನಾಮೆ ಬಳಿಕ ಸಿಎಂ ಯಾರು ಆಗುತ್ತಾರೆ ಎಂಬ ಯಕ್ಷಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ಬಿಜೆಪಿ ಜಿಲ್ಲಾ ಘಟಕದಿಂದ ಹೊಸಪೇಟೆಯಲ್ಲಿ ಆಯೋಜಿಸಿರುವ ದೀನ್ ದಯಾಲ್ ಉಪಾಧ್ಯಾಯ ಪ್ರಶಿಕ್ಷಣ ವರ್ಗದ ಸಮಾರೋಪದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದು ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿದ ನಂತರ ಮುಂದಿನ ಸಿಎಂ ಯಾರು ಎಂಬುದು ಅಷ್ಟು ಬೇಗ ಇತ್ಯರ್ಥ ಆಗದು. ಮುಂದಿನ ಮುಖ್ಯಮಂತ್ರಿ ಯಾರು ಎಂಬ ಪ್ರಶ್ನೆಗೆ ತಕ್ಷಣಕ್ಕೆ ಉತ್ತರ ಕಂಡುಕೊಳ್ಳುವಷ್ಟು ಶಕ್ತಿ ಕಾಂಗ್ರೆಸ್ ಪಕ್ಷಕ್ಕಿಲ್ಲ. ಹೀಗಾಗಿ ಈ ಗೊಂದಲ ಇನ್ನೂ ಕೆಲ ದಿನಗಳ ಕಾಲ ಮುಂದುವರಿಯುತ್ತದೆ ಎಂದರು.
ಇದನ್ನೂ ಓದಿ:
ಕಾಂಗ್ರೆಸ್ ಸರ್ಕಾರದಲ್ಲಿರುವ ಆಂತರಿಕ ಕಚ್ಚಾಟದ ಪರಿಣಾಮ ರಾಜ್ಯದಲ್ಲಿ ಆಡಳಿತ, ಆರ್ಥಿಕತೆ ಸಂಪೂರ್ಣ ನೆಲಕ್ಕಚ್ಚಿದೆ. ಕಳೆದ ಮೂರು ವರ್ಷಗಳಲ್ಲಿ ಉಂಟಾಗಿರುವ ಆರ್ಥಿಕ ಕುಸಿತವನ್ನು ಮುಂದೆ ಯಾರೇ ಮುಖ್ಯಮಂತ್ರಿಯಾದರೂ ಸುಧಾರಿಸಲು ಸಾಧ್ಯವಿಲ್ಲ. ಇಂತಹ ಸಂಕಷ್ಟದ ಸ್ಥಿತಿಯಲ್ಲಿ ರೈತರು, ಬಡವರ ಕಲ್ಯಾಣ ಹಾಗೂ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡುವುದು ಹೇಗೆ ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ರೈತರ ಸಮಸ್ಯೆ ಕೇಳುವವರಿಲ್ಲ. ವಿವಿಧ ಜಿಲ್ಲೆಗಳಲ್ಲಿ ಕೃತಕ ರಸಗೊಬ್ಬರದ ಸಮಸ್ಯೆ ಸೃಷ್ಟಿಸುವ ಷಡ್ಯಂತ್ರ ನಡೆದಿದೆ. ರಾಜ್ಯದ ಪಾಲಿಗೆ ಕಾಂಗ್ರೆಸ್ ಸರ್ಕಾರ ಶಾಪವಾಗಿದೆ. ಕಾಂಗ್ರೆಸ್ ಸರ್ಕಾರದ ಮೇಲಿನ ವಿಶ್ವಾಸವನ್ನು ರಾಜ್ಯದ ಜನತೆ ಯಾವತ್ತೋ ಕಳೆದುಕೊಂಡಿದ್ದಾರೆ. ಜನಸಾಮಾನ್ಯರ ಪಾಲಿಗೆ ಶಾಪವಾಗಿ ಪರಿಣಮಿಸಿದೆ ಎಂದು ಕಿಡಿಕಾರಿದರು.
ರಾಜ್ಯಪಾಲರ ಭೇಟಿಗೆ ಸಿಎಂ ಸಿದ್ದರಾಮಯ್ಯ ಸಮಯ ಕೇಳ ಬೇಕಿತ್ತು. ಆದರೆ, ಇಂದಿನ ಟಿಪಿಯಲದಲ್ಲಿ ಆ ಬಗ್ಗೆ ಉಲ್ಲೇಖವಿಲ್ಲ ಮತ್ತು ರಾಜ್ಯಪಾಲರು ದೆಹಲಿಗೆ ತೆರಳಿರುವ ಬಗ್ಗೆ ನನಗೆ ಮಾಹಿತಿಯಿಲ್ಲ. ಕಾಂಗ್ರೆಸ್ ಗೆ ೧೩೮ ಶಾಸಕರ ಸ್ಪಷ್ಟ ಬೆಂಬಲ ಇರುವಾಗ ಬಿಜೆಪಿ ಹಸ್ತಕ್ಷೇಪ ಹೇಗೆ ಸಾಧ್ಯ? ರಾಜ್ಯ ಜನರು ಕಾಂಗ್ರೆಸ್‌ಗೆ ಆಶೀರ್ವಾದ ಮಾಡಿದ್ದಾರೆ, ಅವರು ಆಡಳಿತ ನಡೆಸಲಿ. ನಾವು ವಿಪಕ್ಷದಲ್ಲಿದ್ದು ಕೆಲಸ ಮಾಡುತ್ತೇವೆ ಎಂದು ಪ್ರತಿಕ್ರಿಯಿಸಿದರು.
ಈ ಸಂದರ್ಭದಲ್ಲಿ ಹೂವಿನಹಡಗಲಿ ಶಾಸಕ ಕೃಷ್ಣ ನಾಯ್ಕ, ಬಿಜೆಪಿ ಜಿಲ್ಲಾಧ್ಯಕ್ಷ ಚನ್ನಬಸವನಗೌಡ, ಪಕ್ಷದ ಒಬಿಸಿ ಮೋರ್ಚಾ ರಾಜ್ಯಾಧ್ಯಕ್ಷ ಅಯ್ಯಾಳಿ ತಿಮ್ಮಪ್ಪ ಉಪಸ್ಥಿತರಿದ್ದರು.



