ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಜೂನ್ 3ರಂದು ವಿಧಾನಸೌಧದ ಮೆಟ್ಟಿಲುಗಳ ಮೇಲೆ ನಡೆಯಬೇಕಿದ್ದ ಮುಖ್ಯಮಂತ್ರಿ ಪ್ರಮಾಣ ವಚನ ಕಾರ್ಯಕ್ರಮವನ್ನು ಲೋಕಭವನಕ್ಕೆ ಸ್ಥಳಾಂತರಿಸಲಾಗಿದೆ.
ಈ ಕುರಿತು ಮಾತನಾಡಿದ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಡಿ.ಕೆ. ಶಿವಕುಮಾರ್, ಬೆಂಗಳೂರಿನ ನಾಗರಿಕರಿಗೆ ತೊಂದರೆಯಾಗಬಾರದು. ಈ ಕಾರ್ಯಕ್ರಮಕ್ಕೆ ಹೊರಗಡೆಯಿಂದ ಹೆಚ್ಚಿನ ವಾಹನ ಆಗಮಿಸಿ ಸಂಚಾರ ದಟ್ಟಣೆ ಆಗಬಾರದು ಎಂಬ ಕಾರಣಕ್ಕೆ ಲೋಕಭವನದಲ್ಲಿ ಪ್ರಮಾಣ ವಚನ ಕಾರ್ಯಕ್ರಮ ಆಯೋಜನೆ ಮಾಡಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಸರಳವಾಗಿ ಮಾಡಲು ನಿರ್ಧರಿಸಲಾಗಿದ್ದು, ಹೆಚ್ಚಿನ ಜನ ಸೇರಲು ಆಗುವುದಿಲ್ಲ. ಹೀಗಾಗಿ ನಮ್ಮ ಕಾರ್ಯಕರ್ತರು ಕ್ಷಮಿಸಬೇಕು ಎಂದು ಕೇಳಿಕೊಂಡರು.
ಎಲ್‌ಇಡಿ ಪರದೆಗಳಲ್ಲಿ ವೀಕ್ಷಣೆಗೆ ಅವಕಾಶ
ಇನ್ನು ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಪಕ್ಷದ ಎಲ್ಲಾ ನಾಯಕರು ಹಾಗೂ ಪದಾಧಿಕಾರಿಗಳಿಗೆ ಆಹ್ವಾನ ನೀಡಲು ಅಸಾಧ್ಯವಾಗಿದ್ದು, ಹೀಗಾಗಿ ಎಲ್‌ಇಡಿ ಪರದೆಗಳಲ್ಲಿ ಕಾರ್ಯಕ್ರಮ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ನಮಗಾಗಿ ಹೋರಾಟ ಮಾಡಿ, ಶ್ರಮಿಸಿದ ನಾಯಕರಿಗೆ ನಾವು ಇಷ್ಟಾದರೂ ಅವಕಾಶ ಮಾಡಿಕೊಡುವುದು ಕರ್ತವ್ಯ ಎಂದು ತಿಳಿಸಿದರು.
ಸಾರ್ವಜನಿಕರಿಗೆ ಅವಕಾಶ ಇಲ್ಲ
ಕಾರ್ಯಕ್ರಮದಲ್ಲಿ ಪಕ್ಷದ ಎಲ್ಲಾ ಬ್ಲಾಕ್ ಹಾಗೂ ಜಿಲ್ಲಾ ಅಧ್ಯಕ್ಷರು, ಶಾಸಕರು ಹಾಗೂ ಮಾಜಿ ಶಾಸಕರು, ಪಕ್ಷದ ವಿವಿಧ ಮುಂಚೂಣಿ ಘಟಕಗಳ ಅಧ್ಯಕ್ಷರು, ಸಂಸದರು, ವಿವಿಧ ನಿಗಮ, ಮಂಡಳಿಗಳ ಅಧ್ಯಕ್ಷರಿಗೆ ಆಹ್ವಾನ ನೀಡಲಾಗುವುದು. ಸಾರ್ವಜನಿಕರಿಗೆ ಅವಕಾಶ ಇರುವುದಿಲ್ಲ. ಜಾಗದ ಕೊರತೆ ಇರುವುದರಿಂದ ಆಹ್ವಾನಿತರಿಗೆ ಮಾತ್ರ ಅವಕಾಶ ಕಲ್ಪಿಸಲಾಗುವುದು ಎಂದು ಹೇಳಿದರು.



