ಪರಿಸರ ಸಂರಕ್ಷಣೆ ಎಂದರೆ ಕೇವಲ ದೊಡ್ಡ ದೊಡ್ಡ ಸಭೆ-ಸಮಾರಂಭಗಳನ್ನು ಮಾಡುವುದಲ್ಲ ಅಥವಾ ಭಾರಿ ಪ್ರಮಾಣದ ಹಣವನ್ನು ವ್ಯಯಿಸುವುದಲ್ಲ. ಅದು ನಮ್ಮ ಮನೆಯ ಸಣ್ಣ ಸಣ್ಣ ದಿನಚರಿಗಳಿಂದಲೇ ಆರಂಭವಾಗುತ್ತದೆ. ಇಂದು ಹೆಚ್ಚುತ್ತಿರುವ ಜಾಗತಿಕ ತಾಪಮಾನ ಮತ್ತು ಮಾಲಿನ್ಯಕ್ಕೆ ಬ್ರೇಕ್ ಹಾಕಲು ‘ಹಸಿರು ಮನೆ’ ಅಥವಾ ಪರಿಸರ ಸ್ನೇಹಿ ಜೀವನಶೈಲಿ ಅತ್ಯಂತ ಅನಿವಾರ್ಯವಾಗಿದೆ. ಅತ್ಯಂತ ಕಡಿಮೆ ವೆಚ್ಚದಲ್ಲಿ, ನಮ್ಮ ಜೇಬಿಗೆ ಕತ್ತರಿ ಬೀಳದಂತೆ ಮನೆಯಲ್ಲೇ ಪರಿಸರ ಸ್ನೇಹಿ ಬದಲಾವಣೆಗಳನ್ನು ತರುವುದು ಹೇಗೆ ಎಂಬುದರ ಬಗ್ಗೆ ತಿಳಿಯೋಣ.
ವಿದ್ಯುತ್ ಮತ್ತು ಇಂಧನ ಉಳಿತಾಯ
ಸಾಮಾನ್ಯ ಬಲ್ಬ್‌ಗಳ ಬದಲಿಗೆ ಎನರ್ಜಿ ಸ್ಟಾರ್ ರೇಟಿಂಗ್ ಇರುವ LED ಬಲ್ಬ್‌ಗಳನ್ನು ಬಳಸಿ. ಇವು ಶೇ. 80 ರಷ್ಟು ವಿದ್ಯುತ್ ಉಳಿಸುತ್ತವೆ ಮತ್ತು ದೀರ್ಘಕಾಲ ಬಾಳಿಕೆ ಬರುತ್ತವೆ. ಹಗಲಿನ ವೇಳೆಯಲ್ಲಿ ಕೃತಕ ಲೈಟ್ ಹಾಗೂ ಫ್ಯಾನ್‌ಗಳ ಬಳಕೆಯನ್ನು ಕಡಿಮೆ ಮಾಡಿ, ಕಿಟಕಿಗಳನ್ನು ತೆರೆದಿಡುವ ಮೂಲಕ ನೈಸರ್ಗಿಕ ಗಾಳಿ-ಬೆಳಕನ್ನು ಆಸ್ವಾದಿಸಬೇಕು.
ಟಿವಿ, ಕಂಪ್ಯೂಟರ್ ಅಥವಾ ಮೊಬೈಲ್ ಚಾರ್ಜರ್‌ಗಳನ್ನು ಬಳಸದಿದ್ದಾಗ ಕೇವಲ ರಿಮೋಟ್‌ನಿಂದ ಆಫ್ ಮಾಡದೆ, ಮುಖ್ಯ ಸ್ವಿಚ್ ಬೋರ್ಡ್‌ನಿಂದಲೇ ಆಫ್ ಮಾಡಿ. ಇದರಿಂದ ‘ಫ್ಯಾಂಟಮ್ ಲೋಡ್’ ತಡೆಯಬಹುದು.
ನೀರಿನ ಮಿತ ಬಳಕೆ ಮತ್ತು ಮರುಬಳಕೆ
ಮನೆಯಲ್ಲಿ ತೊಟ್ಟಿಕ್ಕುವ ನಲ್ಲಿಗಳು ಅಥವಾ ಪೈಪ್‌ಗಳನ್ನು ತಕ್ಷಣ ರಿಪೇರಿ ಮಾಡಿ. ಒಂದು ಸಣ್ಣ ಸೋರಿಕೆಯಿಂದಲೂ ದಿನಕ್ಕೆ ನೂರಾರು ಲೀಟರ್ ನೀರು ವ್ಯರ್ಥವಾಗುತ್ತದೆ. ಶವರ್ ಬಳಸಿ ಸ್ನಾನ ಮಾಡುವ ಬದಲು ಬಕೆಟ್ ಮತ್ತು ಮಗ್ ಬಳಸಿ ಸ್ನಾನ ಮಾಡುವುದರಿಂದ ಶೇ. 50 ಕ್ಕಿಂತ ಹೆಚ್ಚು ನೀರು ಉಳಿಯುತ್ತದೆ. ಅಡುಗೆಮನೆಯಲ್ಲಿ ಅಕ್ಕಿ, ಬೇಳೆ ಅಥವಾ ತರಕಾರಿ ತೊಳೆದ ನೀರನ್ನು ಚರಂಡಿಗೆ ಬಿಡುವ ಬದಲಿಗೆ ಮನೆಯ ಗಿಡಗಳಿಗೆ ಹಾಕಬಹುದು.
ಕಸದ ವಿಂಗಡಣೆ ಮತ್ತು ಮನೆ ಗೊಬ್ಬರ
ಮನೆಯಲ್ಲೇ ಕಸವನ್ನು ಎರಡು ಪ್ರತ್ಯೇಕ ಡಬ್ಬಿಗಳಲ್ಲಿ ಸಂಗ್ರಹಿಸಿ. ಪ್ಲಾಸ್ಟಿಕ್, ಪೇಪರ್‌ಗಳನ್ನು ಒಣ ಕಸದ ಡಬ್ಬಿಗೂ, ಆಹಾರದ ಉಳಿಕೆಗಳನ್ನು ಹಸಿ ಕಸದ ಡಬ್ಬಿಗೂ ಹಾಕಬೇಕು. ತರಕಾರಿ ಸಿಪ್ಪೆ, ಹಣ್ಣಿನ ತ್ಯಾಜ್ಯ, ಟೀ ಪುಡಿ ಮತ್ತು ಒಣ ಎಲೆಗಳನ್ನು ಬಳಸಿ ಮನೆಯ ಸಣ್ಣ ಬಕೆಟ್‌ನಲ್ಲೇ ಸುಲಭವಾಗಿ ಕಂಫೋಸ್ಟ್ (ಗೊಬ್ಬರ) ತಯಾರಿಸಬಹುದು. ಇದು ಹೊರಗಿನ ರಾಸಾಯನಿಕ ಗೊಬ್ಬರಗಳಿಗಿಂತ ಶ್ರೇಷ್ಠ ಮತ್ತು ಸಂಪೂರ್ಣ ಉಚಿತ.
ಇದನ್ನೂ ಓದಿ:
ಕಿಚನ್ ಗಾರ್ಡನ್ ಮತ್ತು ಹಸಿರು ಪರಿಸರ
ಮನೆಯ ಬಾಲ್ಕನಿ ಅಥವಾ ಟೆರೇಸ್‌ನಲ್ಲಿ ಸಣ್ಣ ಸಣ್ಣ ಕುಂಡಗಳಲ್ಲಿ ಕೊತ್ತಂಬರಿ, ಪುದೀನಾ, ಮೆಣಸಿನಕಾಯಿ ಮತ್ತು ಟೊಮೆಟೊದಂತಹ ನಿತ್ಯ ಬಳಕೆಯ ಗಿಡಗಳನ್ನು ಬೆಳೆಸಬಹುದು. ಇದು ನಿಮಗೆ ವಿಷಮುಕ್ತ ತಾಜಾ ತರಕಾರಿಗಳನ್ನು ನೀಡುವುದಲ್ಲದೆ, ಮನೆಯ ಸುತ್ತಮುತ್ತಲಿನ ಗಾಳಿಯನ್ನು ಶುದ್ಧವಾಗಿಡಲು ಮತ್ತು ಮನೆಯ ತಾಪಮಾನವನ್ನು ತಂಪಾಗಿಸಲು ಸಹಾಯ ಮಾಡುತ್ತದೆ.
ಪ್ಲಾಸ್ಟಿಕ್ ಬಳಕೆಗೆ ಕಡಿತ
ಮಾರುಕಟ್ಟೆಗೆ ಹೋಗುವಾಗ ಮನೆಯಿಂದಲೇ ಬಟ್ಟೆಯ ಬ್ಯಾಗ್ ಅಥವಾ ಸೆಣಬಿನ ಚೀಲವನ್ನು ಕೊಂಡೊಯ್ಯುವುದನ್ನು ರೂಢಿಸಿಕೊಳ್ಳಬೇಕು. ಪ್ಲಾಸ್ಟಿಕ್ ಬಾಟಲಿಗಳು ಮತ್ತು ಡಬ್ಬಿಗಳ ಬದಲಿಗೆ ದೀರ್ಘಕಾಲ ಬಾಳಿಕೆ ಬರುವ ಸ್ಟೀಲ್ ಅಥವಾ ಗಾಜಿನ ಪಾತ್ರೆಗಳನ್ನು ಅಡುಗೆಮನೆಯಲ್ಲಿ ಬಳಸಿ. ಇದು ಪರಿಸರಕ್ಕೂ ಹಾಗೂ ಆರೋಗ್ಯಕ್ಕೂ ಅತ್ಯಂತ ಒಳ್ಳೆಯದು.



