ಆಧುನಿಕ ಯುಗದಲ್ಲಿ ತಂತ್ರಜ್ಞಾನ ಬೆಳೆದಂತೆ ಮನುಷ್ಯನ ದೈಹಿಕ ಶ್ರಮ ಕಡಿಮೆಯಾಗುತ್ತಿದೆ. ಇಂದು ನಮ್ಮ ಯುವ ಪೀಳಿಗೆಯ ದಿನಚರಿ ಹವಾನಿಯಂತ್ರಿತ (AC) ಕೊಠಡಿಗಳು, ಲ್ಯಾಪ್‌ಟಾಪ್ ಸ್ಕ್ರೀನ್‌ಗಳು ಮತ್ತು ಕೃತಕ ಬೆಳಕಿನ ನಡುವೆ ಕಳೆದುಹೋಗುತ್ತಿದೆ. ಇದರ ನೇರ ಪರಿಣಾಮ ನಮ್ಮ ಆರೋಗ್ಯದ ಮೇಲಾಗುತ್ತಿದ್ದು, ಇತ್ತೀಚಿನ ದಿನಗಳಲ್ಲಿ 20 ರಿಂದ 30 ವರ್ಷದ ಯುವಕ-ಯುವತಿಯರು ಕೂಡ ತೀವ್ರ ಮೂಳೆನೋವು, ಕೀಲುನೋವು ಮತ್ತು ಅತಿಯಾದ ಆಯಾಸದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ವೈದ್ಯಕೀಯ ತಪಾಸಣೆ ನಡೆಸಿದಾಗ ಶೇ. 80 ಕ್ಕೂ ಹೆಚ್ಚು ಜನರಲ್ಲಿ ಕಂಡುಬರುತ್ತಿರುವ ಪ್ರಮುಖ ಲೋಪವೆಂದರೆ ವಿಟಮಿನ್ ಡಿ ಮತ್ತು ವಿಟಮಿನ್ ಬಿ12 ಕೊರತೆ.
ವಿಟಮಿನ್ ಡಿ ಮತ್ತು ಸೂರ್ಯನ ಬೆಳಕಿನ ಮಹತ್ವ
ವಿಟಮಿನ್ ಡಿ ಅನ್ನು ‘ಸನ್‌ಶೈನ್ ವಿಟಮಿನ್’ ಎಂದು ಕರೆಯಲಾಗುತ್ತದೆ. ನಮ್ಮ ದೇಹವು ಕ್ಯಾಲ್ಸಿಯಂ ಅನ್ನು ಹೀರಿಕೊಳ್ಳಲು ವಿಟಮಿನ್ ಡಿ ಅತ್ಯಗತ್ಯ. ದೇಹದಲ್ಲಿ ಎಷ್ಟೇ ಕ್ಯಾಲ್ಸಿಯಂ ಇದ್ದರೂ, ವಿಟಮಿನ್ ಡಿ ಇಲ್ಲದಿದ್ದರೆ ಮೂಳೆಗಳು ಅದನ್ನು ಬಳಸಿಕೊಳ್ಳಲು ಸಾಧ್ಯವಿಲ್ಲ.
ಮುಂಜಾನೆಯ ಸೂರ್ಯನ ಬಿಸಿಲಿಗೆ ಮೈಯೊಡ್ಡದೆ ಇರುವುದು. ಕಚೇರಿಗಳಲ್ಲಿ ದಿನವಿಡೀ ಒಳಗೆ ಕುಳಿತು ಕೆಲಸ ಮಾಡುವುದು ಮತ್ತು ಹೊರಗೆ ಹೋಗುವಾಗ ಅತಿಯಾಗಿ ಸನ್‌ಸ್ಕ್ರೀನ್ ಲೋಶನ್‌ಗಳನ್ನು ಬಳಸುವುದು.
ವಿಟಮಿನ್ ಡಿ ಕೊರತೆಯಿಂದಾಗಿ ಮೂಳೆಗಳು ತಾವಾಗಿಯೇ ದುರ್ಬಲಗೊಳ್ಳುತ್ತವೆ. ಇದನ್ನು ‘ಆಸ್ಟಿಯೋಮಲೇಶಿಯಾ’ ಅಥವಾ ‘ಆಸ್ಟಿಯೋಪೊರೋಸಿಸ್’ ಎನ್ನಲಾಗುತ್ತದೆ. ಇದರಿಂದಾಗಿ ಸಣ್ಣ ಪೆಟ್ಟಾದರೂ ಮೂಳೆ ಮುರಿತ ಉಂಟಾಗುವ ಅಪಾಯ ಹೆಚ್ಚಿರುತ್ತದೆ.
ವಿಟಮಿನ್ ಬಿ12 ಕೊರತೆ ಮತ್ತು ನರಗಳ ದೌರ್ಬಲ್ಯ
ವಿಟಮಿನ್ ಬಿ12 ನಮ್ಮ ದೇಹದಲ್ಲಿ ಕೆಂಪು ರಕ್ತಕಣಗಳ (RBC) ಉತ್ಪಾದನೆಗೆ ಮತ್ತು ನರಮಂಡಲದ ಸುಗಮ ಕಾರ್ಯನಿರ್ವಹಣೆಗೆ ಅತ್ಯಂತ ಪ್ರಮುಖವಾಗಿದೆ. ವಿಟಮಿನ್ ಬಿ12 ನೈಸರ್ಗಿಕವಾಗಿ ಕೇವಲ ಪ್ರಾಣಿಜನ್ಯ ಆಹಾರಗಳಲ್ಲಿ ಮಾತ್ರ ಹೆಚ್ಚಾಗಿ ಸಿಗುತ್ತದೆ. ಹೀಗಾಗಿ ಕಟ್ಟುನಿಟ್ಟಾದ ಸಸ್ಯಾಹಾರಿಗಳಲ್ಲಿ ಇದರ ಕೊರತೆ ಅತಿ ಹೆಚ್ಚ. ಇತ್ತೀಚಿನ ದಿನಗಳಲ್ಲಿ ಯುವಕರು ಜಂಕ್ ಫುಡ್‌ಗಳಿಗೆ ಮೊರೆ ಹೋಗುತ್ತಿರುವುದು ಮತ್ತು ಕರುಳಿನ ಜೀರ್ಣಕ್ರಿಯೆಯ ದೋಷದಿಂದಾಗಿ ದೇಹವು ಬಿ12 ಅನ್ನು ಹೀರಿಕೊಳ್ಳಲು ವಿಫಲವಾಗುತ್ತಿರುವುದು ಪ್ರಮುಖ ಕಾರಣಗಳಾಗಿವೆ.
ಇದನ್ನೂ ಓದಿ:
ಯಾವುದೇ ಕೆಲಸ ಮಾಡದಿದ್ದರೂ ತೀವ್ರ ಆಯಾಸ, ಕೈಕಾಲುಗಳಲ್ಲಿ ಸೂಜಿ ಚುಚ್ಚಿದಂತಾಗುವುದು, ಮರೆಗುಳಿತನ, ಮೂಡ್ ಸ್ವಿಂಗ್ಸ್ ಮತ್ತು ರಕ್ತಹೀನತೆ ಕಾರನವಾಗಿದೆ.
ಪರಿಹಾರದ ಮಾರ್ಗಗಳು
ಉಚಿತವಾಗಿ ಸಿಗುವ ಸೂರ್ಯನ ಬೆಳಕನ್ನು ಬಳಸಿ:
ಪ್ರತಿದಿನ ಬೆಳಿಗ್ಗೆ 7 ರಿಂದ 9 ಗಂಟೆಯ ನಡುವಿನ ಎಳೆಯ ಸೂರ್ಯನ ಬಿಸಿಲಿಗೆ ಕನಿಷ್ಠ 15 ರಿಂದ 20 ನಿಮಿಷಗಳ ಕಾಲ ಮುಖ, ಕೈ ಮತ್ತು ಕಾಲುಗಳನ್ನು ಒಡ್ಡಬೇಕು. ವಾರಕ್ಕೆ 3-4 ಬಾರಿಯಾದರೂ ಹೀಗೆ ಮಾಡುವುದರಿಂದ ದೇಹಕ್ಕೆ ಅಗತ್ಯವಿರುವ ವಿಟಮಿನ್ ಡಿ ನೈಸರ್ಗಿಕವಾಗಿ ಸಿಗುತ್ತದೆ.
ಆಹಾರ ಪದ್ಧತಿಯಲ್ಲಿ ಬದಲಾವಣೆ:
ಅಣಬೆ, ಹಾಲು, ಗಟ್ಟಿ ಮೊಸರು, ಚೀಸ್, ಮೊಟ್ಟೆಯ ಹಳದಿ ಲೋಳೆ ಮತ್ತು ಒಣಹಣ್ಣುಗಳನ್ನು ಸೇವಿಸಬೇಕು. ಸಸ್ಯಾಹಾರಿಗಳು ಕಡ್ಡಾಯವಾಗಿ ಪ್ರತಿದಿನ ಹಾಲು, ಮಜ್ಜಿಗೆ, ಮೊಸರು ಮತ್ತು ಮೊಳಕೆ ಬರಿಸಿದ ಕಾಳುಗಳನ್ನು ಸೇವಿಸಬೇಕು. ಮಾಂಸಾಹಾರಿಗಳು ಮೀನು, ಚಿಕನ್ ಮತ್ತು ಮೊಟ್ಟೆಯನ್ನು ಮಿತವಾಗಿ ಬಳಸಬಹುದು.
ವೈದ್ಯರ ಸಲಹೆ ಮತ್ತು ಸಪ್ಲಿಮೆಂಟ್ಸ್:
ಕೊರತೆ ತೀವ್ರವಾಗಿದ್ದಾಗ ಕೇವಲ ಆಹಾರದಿಂದ ಗುಣಪಡಿಸಲು ಸಾಧ್ಯವಿಲ್ಲ. ವರ್ಷಕ್ಕೆ ಒಮ್ಮೆಯಾದರೂ ರಕ್ತ ತಪಾಸಣೆ ಮಾಡಿಸಿಕೊಳ್ಳಬೇಕು. ವೈದ್ಯರ ಮಾರ್ಗದರ್ಶನದಲ್ಲಿ ವಿಟಮಿನ್ ಡಿ ಮಾತ್ರೆಗಳು ಅಥವಾ ಬಿ12 ಇಂಜೆಕ್ಷನ್‌ಗಳನ್ನು ಪಡೆದುಕೊಳ್ಳುವುದು ಉತ್ತಮ.



