June 13, 2026
Saturday, June 13, 2026
spot_img

ಕೇನ್ ವಿಲಿಯಮ್ಸನ್‌ಗೆ ವಿರಾಟ್ ಭಾವನಾತ್ಮಕ ವಿದಾಯ: ಸ್ನೇಹದ ನೆನಪು ಹಂಚಿಕೊಂಡ ಕಿಂಗ್ ಕೊಹ್ಲಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನ್ಯೂಜಿಲೆಂಡ್‌ನ ಮಾಜಿ ನಾಯಕ ಹಾಗೂ ವಿಶ್ವ ಕ್ರಿಕೆಟ್‌ನ ಶ್ರೇಷ್ಠ ಬ್ಯಾಟರ್‌ಗಳಲ್ಲಿ ಒಬ್ಬರಾಗಿರುವ ಕೇನ್ ವಿಲಿಯಮ್ಸನ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿರುವುದು ಅಭಿಮಾನಿಗಳಿಗೆ ಭಾವುಕ ಕ್ಷಣವಾಗಿದೆ. ಈ ನಿರ್ಧಾರದ ಬೆನ್ನಲ್ಲೇ ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ತಮ್ಮ ಆಪ್ತ ಸ್ನೇಹಿತನಿಗೆ ವಿಶೇಷ ಸಂದೇಶದ ಮೂಲಕ ಶುಭ ಹಾರೈಸಿದ್ದಾರೆ.

ಎದುರಾಳಿಯಿಂದ ಆತ್ಮೀಯ ಗೆಳೆಯನಾದ ಕೇನ್

ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ವಿರಾಟ್ ಕೊಹ್ಲಿ, ಕಠಿಣ ಎದುರಾಳಿಯಾಗಿ ಆರಂಭವಾದ ಪರಿಚಯ ವರ್ಷಗಳ ಬಳಿಕ ಆತ್ಮೀಯ ಸ್ನೇಹವಾಗಿ ಬದಲಾಗಿದೆ ಎಂದು ತಿಳಿಸಿದ್ದಾರೆ. ಕೇನ್ ಜೊತೆ ಕಳೆದ ನೆನಪುಗಳು ಜೀವನಪೂರ್ತಿ ತಮ್ಮೊಂದಿಗೆ ಉಳಿಯಲಿವೆ ಎಂದೂ ಹೇಳಿದ್ದಾರೆ.

ಇದನ್ನೂ ಓದಿ:

16 ವರ್ಷಗಳ ಪೈಪೋಟಿಯ ಪಯಣ

2008ರ ಅಂಡರ್-19 ವಿಶ್ವಕಪ್‌ನಿಂದ ಆರಂಭವಾದ ವಿರಾಟ್ ಮತ್ತು ಕೇನ್ ನಡುವಿನ ಪೈಪೋಟಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹಲವು ವರ್ಷಗಳ ಕಾಲ ಮುಂದುವರಿದಿತ್ತು. ಮೈದಾನದಲ್ಲಿ ಪ್ರತಿಸ್ಪರ್ಧಿಗಳಾಗಿದ್ದರೂ, ಇಬ್ಬರ ನಡುವಿನ ಸ್ನೇಹ ಮತ್ತು ಪರಸ್ಪರ ಗೌರವ ಕ್ರಿಕೆಟ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿತ್ತು.

ನಾಯಕನಾಗಿ ಕೇನ್ ಸಾಧನೆ

ಕೇನ್ ವಿಲಿಯಮ್ಸನ್ ನಾಯಕತ್ವದಲ್ಲಿ ನ್ಯೂಜಿಲೆಂಡ್ ತಂಡ 2021ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪ್ರಶಸ್ತಿ ಗೆದ್ದಿತ್ತು. 2019ರ ಏಕದಿನ ವಿಶ್ವಕಪ್‌ನಲ್ಲಿ ತಂಡವನ್ನು ಫೈನಲ್‌ಗೆ ಮುನ್ನಡೆಸಿದ ಅವರು ಟೂರ್ನಿಯ ಶ್ರೇಷ್ಠ ಆಟಗಾರ ಪ್ರಶಸ್ತಿಯನ್ನೂ ತಮ್ಮದಾಗಿಸಿಕೊಂಡಿದ್ದರು.

ಶಾಂತ ಸ್ವಭಾವ ಮತ್ತು ಕ್ರೀಡಾ ಮನೋಭಾವದಿಂದ ವಿಶ್ವದಾದ್ಯಂತ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದ ಕೇನ್ ವಿಲಿಯಮ್ಸನ್‌ಗೆ ಇದೀಗ ಕ್ರಿಕೆಟ್ ಜಗತ್ತು ಭಾವುಕ ವಿದಾಯ ಹೇಳುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !