ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಳುಗಡೆ ಭೂಮಿಗೆ ವರ್ಷಗಳೇ ಕಳೆದರೂ ಸೂಕ್ತ ಪರಿಹಾರ ನೀಡದೆ ಸತಾಯಿಸುತ್ತಿದ್ದ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ BTDA ಅಧಿಕಾರಿಗಳ ನಡೆಗೆ ಬೇಸತ್ತ ರೈತರೊಬ್ಬರು ಕಚೇರಿಯಲ್ಲೇ ಸಿಬ್ಬಂದಿಗೆ ಚಪ್ಪಲಿಯಿಂದ ಹೊಡೆದಿರುವ ಘಟನೆ ನವನಗರದಲ್ಲಿ ನಡೆದಿದೆ.
ಕಳೆದ ಹಲವು ವರ್ಷಗಳಿಂದ ಕಚೇರಿಗೆ ಅಲೆದಾಡಿ ಬೇಸತ್ತಿದ್ದ ರೈತನ ಆಕ್ರೋಶದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.
20 ವರ್ಷಗಳ ಕಾಯುವಿಕೆ:
ಸಂತ್ರಸ್ತ ರೈತ ಬಸವರಾಜ್ ದೊಡ್ಡಮನಿ, ಕೃಷ್ಣಾ ನದಿ ಮುಳುಗಡೆ ಪ್ರದೇಶದ ಸುಮಾರು 4 ಎಕರೆ ಕೃಷಿ ಭೂಮಿಯನ್ನು ರಸ್ತೆ ನಿರ್ಮಾಣ ಮತ್ತು ಅಭಿವೃದ್ಧಿ ಯೋಜನೆಗಾಗಿ ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಆದರೆ, ಎರಡು ದಶಕಗಳು (20 ವರ್ಷ) ಕಳೆದರೂ ಅವರಿಗೆ ಬಿಟಿಡಿಎ ಕಡೆಯಿಂದ ಸೂಕ್ತ ಪರಿಹಾರ ಸಿಕ್ಕಿರಲಿಲ್ಲ.
ತಾರತಮ್ಯದ ಆರೋಪ:
ಬೇರೆ ರೈತರಿಗೆ ಪರಿಹಾರ ಬಿಡುಗಡೆ ಮಾಡಲಾಗಿದ್ದರೂ, ತಮಗೆ ಮಾತ್ರ ಅಧಿಕಾರಿಗಳು ವಿನಾಕಾರಣ ವಿಳಂಬ ಮಾಡುತ್ತಿದ್ದಾರೆ ಮತ್ತು ಕಚೇರಿಗೆ ಅಲೆದಾಡಿಸುತ್ತಿದ್ದಾರೆ ಎಂದು ರೈತ ಬಸಪ್ಪ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ:
ಕಚೇರಿಯಲ್ಲಿ ನಡೆದಿದ್ದೇನು?
ಸಫಾಯಿ ಕರ್ಮಚಾರಿಗಳಿಗೆ ನಿವೇಶನ ಮಂಜೂರು ಮಾಡದ ಹಿನ್ನೆಲೆಯಲ್ಲಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಬಿಟಿಡಿಎ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುತ್ತಿದ್ದರು. ಇದೇ ವೇಳೆ ಕಚೇರಿಗೆ ಬಂದಿದ್ದ ರೈತ, ಅಲ್ಲಿನ ಪ್ರಥಮ ದರ್ಜೆ ಸಹಾಯಕ ನೀಲಕಂಠ ಅಂಕದ ಎಂಬುವವರೊಂದಿಗೆ ಪರಿಹಾರದ ಕುರಿತು ಮಾತನಾಡುತ್ತಾ ತೀವ್ರ ವಾಗ್ವಾದಕ್ಕಿಳಿದಿದ್ದಾರೆ. ಮಾತಿಗೆ ಮಾತು ಬೆಳೆದು ಇಬ್ಬರ ನಡುವೆ ನೂಕಾಟ ನಡೆದಾಗ, ತಾಳ್ಮೆ ಕಳೆದುಕೊಂಡ ರೈತ ತಮ್ಮ ಕಾಲಲ್ಲಿದ್ದ ಚಪ್ಪಲಿಯನ್ನು ತೆಗೆದು ಅಧಿಕಾರಿಗೆ ಹೊಡೆದಿದ್ದಾರೆ.
ಮುಂದಿನ ಕ್ರಮ
ಘಟನೆಯಿಂದ ಕಚೇರಿಯಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ತಕ್ಷಣವೇ ಮಧ್ಯಪ್ರವೇಶಿಸಿದ ಬಿಟಿಡಿಎ ಅಧ್ಯಕ್ಷ ಪ್ರಕಾಶ್ ತಪಶೆಟ್ಟಿ, ರೈತನನ್ನು ಸಮಾಧಾನಪಡಿಸಲು ಯತ್ನಿಸಿದರು. ಇತ್ತ ಕರ್ತವ್ಯಕ್ಕೆ ಅಡ್ಡಿಪಡಿಸಿದ ಮತ್ತು ಹಲ್ಲೆ ನಡೆಸಿದ ಆರೋಪದ ಮೇಲೆ ನೌಕರ ನೀಲಕಂಠ ನವನಗರ ಠಾಣೆಯಲ್ಲಿ ರೈತನ ವಿರುದ್ಧ ದೂರು ದಾಖಲಿಸಿದ್ದು, ಬಾಗಲಕೋಟೆ ಎಸ್ಪಿ ಸಿದ್ದಾರ್ಥ್ ಗೋಯಲ್ ನೇತೃತ್ವದಲ್ಲಿ ತನಿಖೆ ಮುಂದುವರಿದಿದೆ.



