ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಮುಂಗಾರು ಅಧಿಕೃತವಾಗಿ ಆರಂಭವಾದರೂ, ಬಹುತೇಕ ಭಾಗಗಳಲ್ಲಿ ಮಳೆ ಚುರುಕು ಪಡೆದುಕೊಂಡಿಲ್ಲ. ಜೂ.15ರ ಬೆಳಿಗ್ಗೆ 8 ಗಂಟೆಯವರೆಗಿನ ಹವಾಮಾನ ಮುನ್ಸೂಚನೆಯ ಪ್ರಕಾರ, ಜೂ.20ರವರೆಗೂ ಇದೇ ರೀತಿಯ ವಾತಾವರಣ ಮುಂದುವರಿಯುವ ಸಾಧ್ಯತೆ ಇದೆ. ಈ ನಡುವೆ ಎಲ್ ನಿನೊ ಆತಂಕ ಹೆಚ್ಚಳವಾಗಿದ್ದು, ಹವಾಮಾನ ತಜ್ಞರ ಪ್ರಕಾರ, ಜೂನ್ ಅಂತ್ಯದ ವೇಳೆಗೆ ಎಲ್ ನಿನೊ ತನ್ನ ಪ್ರಭಾವ ಬೀರಲು ಆರಂಭಿಸಲಿದೆ. ನವೆಂಬರ್ ವೇಳೆಗೆ ಅದು ಮಧ್ಯಮ ತೀವ್ರತೆ ಪಡೆಯುವ ಸಾಧ್ಯತೆ ಇದ್ದು, ಇದರಿಂದ ಈ ಬಾರಿಯ ಮುಂಗಾರು ದುರ್ಬಲವಾಗುವ ಸಾಧ್ಯತೆಯೂ ಹೆಚ್ಚಿದೆ.
ಕೃಷಿಕರು, ರೈತರಿಗೆ ಮುನ್ನೆಚ್ಚರಿಕೆ
ಈ ಬಾರಿಯ ಮಳೆ ಕೊರತೆಯ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು, ಈಗ ಸುರಿಯುವ ಮಳೆನೀರನ್ನು ಸಂಗ್ರಹಿಸುವುದು, ಕೆರೆ-ಕಟ್ಟೆಗಳನ್ನು ಭರ್ತಿ ಮಾಡುವುದು ಹಾಗೂ ನೀರಿನ ಸಂರಕ್ಷಣಾ ಕ್ರಮಗಳನ್ನು ಕೈಗೊಳ್ಳುವುದು ಕೃಷಿಕರಿಗೆ ಅನುಕೂಲಕರವಾಗಲಿದೆ ಎಂದು ಹವಾಮಾನ ತಜ್ಞರು ಮುನ್ನೆಚ್ಚರಿಕೆ ನೀಡಿದ್ದಾರೆ.
ಕರಾವಳಿ ಭಾಗದಲ್ಲಿ ಸಾಧಾರಣ ಮಳೆ
ಮುಂದಿನ ೪೮ ತಾಸುಗಳಲ್ಲಿ ಕಾಸರಗೋಡು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ. ಪಶ್ಚಿಮ ಘಟ್ಟದ ಕೆಳಭಾಗದ ಪ್ರದೇಶಗಳಲ್ಲಿ ಸ್ವಲ್ಪ ಹೆಚ್ಚು ಮಳೆಯಾಗಬಹುದು. ಉತ್ತರ ಕನ್ನಡ ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣದೊಂದಿಗೆ ಅಲ್ಲಲ್ಲಿ ತುಂತುರು ಮಳೆಯಾಗುವ ಸಾಧ್ಯತೆ ಇದೆ.
ಇದನ್ನೂ ಓದಿ:
ಮಲೆನಾಡಿನಲ್ಲಿ ಮೋಡ-ತುಂತುರು ಮಳೆ
ಕೊಡಗು, ಹಾಸನ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಮುಂದುವರಿಯಲಿದ್ದು, ಅಲ್ಲಲ್ಲಿ ತುಂತುರು ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.
ಉತ್ತರ ಕರ್ನಾಟಕದಲ್ಲಿ ಇನ್ನೂ ಬಿಸಿಲಿನ ವಾತಾವರಣ
ಉತ್ತರ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಬಿಸಿಲು ಹಾಗೂ ಮೋಡದ ವಾತಾವರಣ ಮುಂದುವರಿಯಲಿದ್ದು, ಜೂ.18ರ ಬಳಿಕ ಕೆಲವೆಡೆ ಮಳೆ ಆರಂಭವಾಗುವ ಸಾಧ್ಯತೆ ಇದೆ.
ದಕ್ಷಿಣ ಒಳನಾಡಿನಲ್ಲಿ ಚದುರಿದ ಮಳೆ
ಮೈಸೂರು, ಮಂಡ್ಯ, ರಾಮನಗರ, ಬೆಂಗಳೂರು ನಗರ ಮತ್ತು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಹಾಗೂ ಚಿತ್ರದುರ್ಗ ಜಿಲ್ಲೆಗಳಲ್ಲಿ ಅಲ್ಲಲ್ಲಿ ಮಳೆಯಾಗಬಹುದು. ಚಾಮರಾಜನಗರ, ದಾವಣಗೆರೆ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಬಿಸಿಲಿನ ವಾತಾವರಣ ಹೆಚ್ಚಾಗುವ ನಿರೀಕ್ಷೆ ಇದೆ.



