ಹೊಸ ದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡು ರಾಜಕಾರಣದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದ್ದು, ಒಬ್ಬರ ಹಿಂದೆ ಒಬ್ಬರು ಎಐಎಡಿಎಂಕೆ ಪಕ್ಷಕ್ಕೆ ರಾಜೀನಾಮೆ ನೀಡುತ್ತಿದ್ದಾರೆ. ಇದೀಗ ಪಕ್ಷದ ಉಪ ಪ್ರಚಾರ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದ ನಟಿ ಗೌತಮಿ ತಡಿಮಲ್ಲ ಅವರು ರಾಜೀನಾಮೆ ನೀಡುವುದಾಗಿ ಭಾನುವಾರ ಘೋಷಿಸಿದ್ದಾರೆ.
ಎಐಎಡಿಎಂಕೆಗೆ ರಾಜೀನಾಮೆ
ಈ ಕುರಿತು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರಿಗೆ ಪತ್ರ ಬರೆದ ಅವರು, ಪ್ರಸುತ್ತ ರಾಜಕೀಯ ಪರಿಸ್ಥಿತಿಯನ್ನು ಪರಿಗಣಿಸಿ ಭಾರವಾದ ಹೃದಯದಿಂದ ಪ್ರಾಥಮಿಕ ಸದಸ್ಯತ್ವ ಮತ್ತು ಪಕ್ಷದ ಪ್ರಚಾರ ಉಪ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಉಲ್ಲೇಖಿಸಿದ್ದಾರೆ. ಈ ವೇಳೆ ಎಲ್ಲ ರೀತಿಯಲ್ಲೂ ಸಹಕರಿಸಿದ ಮಾಜಿ ಎಐಎಡಿಎಂಕೆ ಸಚಿವರು, ಪಕ್ಷದ ಕಾರ್ಯಕರ್ತರಿಗೆ ಅವರು ಧನ್ಯವಾದ ಅರ್ಪಿಸಿದರು.
25 ವರ್ಷಗಳ ಕಾಲ ಬಿಜೆಪಿಯಲ್ಲಿದ್ದ ಗೌತಮಿ
ಈ ಹಿಂದೆ ಸುಮಾರು 25 ವರ್ಷಗಳ ಕಾಲ ಬಿಜೆಪಿಯಲ್ಲಿದ್ದ ಗೌತಮಿ ಅವರು 2023ರ ಅಕ್ಟೋಬರ್‌ನಲ್ಲಿ ಬಿಜೆಪಿ ತೊರೆದರು. ಬಳಿಕ 2024ರ ಫೆಬ್ರವರಿಯಲ್ಲಿ ಎಐಎಡಿಎಂಕೆ ಪಕ್ಷಕ್ಕೆ ಸೇರಿದ್ದರು. 2026ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಟಿಕೆಟ್ ಸಿಗಲಿಲ್ಲ. ಆದರೂ,ರಾಜ್ಯದಾದ್ಯಂತ ಎಐಎಡಿಎಂಕೆ ಮತ್ತು ಎನ್‌ಡಿಎ ಮೈತ್ರಿಕೂಟಕ್ಕಾಗಿ ಸಕ್ರಿಯವಾಗಿ ಪ್ರಚಾರ ಮಾಡಿದ್ದರು.



