June 16, 2026
Tuesday, June 16, 2026
spot_img

ಸಿಹಿ ಹಂಚುವಾಗ ಯಡವಟ್ಟು: ಕೇರಳ ಸಚಿವೆ ಬಿಂದುಕೃಷ್ಣ ತಲೆಯ ಮೇಲೆ ಬಿತ್ತು ಬಿಸಿ ಬಿಸಿ ಪಾಯಸ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇರಳ ಸರ್ಕಾರದ ಮಹತ್ವಾಕಾಂಕ್ಷೆಯ ‘ಪ್ರಿಯದರ್ಶಿನಿ’ ಉಚಿತ ಬಸ್ ಪ್ರಯಾಣ ಯೋಜನೆ ಉದ್ಘಾಟನಾ ಕಾರ್ಯಕ್ರಮದ ವೇಳೆ ಅನಿರೀಕ್ಷಿತ ಅವಘಡವೊಂದು ನಡೆದಿದೆ. ಕಾರ್ಯಕ್ರಮದ ಅಂಗವಾಗಿ ವಿತರಿಸಲಾಗುತ್ತಿದ್ದ ಬಿಸಿ ಪಾಯಸದ ಪಾತ್ರೆ ಆಕಸ್ಮಿಕವಾಗಿ ಸಚಿವೆ ಬಿಂದುಕೃಷ್ಣ ಅವರ ತಲೆಯ ಮೇಲೆ ಬಿದ್ದಿದೆ.

ಕೊಲ್ಲಂ ಕೆಎಸ್‌ಆರ್‌ಟಿಸಿ ಡಿಪೋದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವರು ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ಯೋಜನೆಗೆ ಸ್ವಾಗತ ಸೂಚಿಸುವ ಸಲುವಾಗಿ ಯೂತ್ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷರ ನೇತೃತ್ವದಲ್ಲಿ ಸಾರ್ವಜನಿಕರಿಗೆ ಪಾಯಸ ವಿತರಣೆ ಏರ್ಪಡಿಸಲಾಗಿತ್ತು. ಇದೇ ವೇಳೆ ಬಸ್ ಒಳಗೆ ಪಾಯಸ ಹಂಚುವಾಗ ಈ ಅವಾಂತರ ಸಂಭವಿಸಿದೆ. ಪಾತ್ರೆಯಲ್ಲಿದ್ದ ಬಿಸಿ ಪಾಯಸ ಸಚಿವೆ ಬಿಂದುಕೃಷ್ಣ ಅವರ ತಲೆ ಮತ್ತು ಮುಖದ ಭಾಗಕ್ಕೆ ಬಿದ್ದಿದ್ದು, ಸ್ಥಳದಲ್ಲಿದ್ದ ಸಿಬ್ಬಂದಿ ಮತ್ತು ಬೆಂಬಲಿಗರು ತಕ್ಷಣವೇ ಶಾಲು ಹಾಗೂ ಇತರ ಬಟ್ಟೆಗಳನ್ನು ಬಳಸಿ ಅವರನ್ನು ಸ್ವಚ್ಛಗೊಳಿಸಿದರು.

ಇದನ್ನೂ ಓದಿ:

ಘಟನೆಯಿಂದ ಕೆಲಕಾಲ ಗೊಂದಲ ಉಂಟಾದರೂ, ಸಚಿವೆ ಕಾರ್ಯಕ್ರಮವನ್ನು ಅರ್ಧದಲ್ಲೇ ನಿಲ್ಲಿಸಲಿಲ್ಲ. ಬಳಿಕ ಅವರು ನಿಗದಿಯಂತೆ ಬಸ್‌ನಲ್ಲಿ ಚಿನ್ನಕ್ಕಡವ್‌ವರೆಗೆ ಪ್ರಯಾಣಿಸಿ, ನಂತರ ಅಲ್ಲಿಂದ ತೆರಳಿದರು. ಈ ಘಟನೆ ಹೇಗೆ ನಡೆಯಿತು ಎಂಬುದರ ಕುರಿತು ಪರಿಶೀಲನೆ ನಡೆಸುವಂತೆ ಸೂಚಿಸಲಾಗಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ ಇದು ಆಕಸ್ಮಿಕ ಘಟನೆ ಎನ್ನಲಾಗುತ್ತಿದ್ದು, ನಿರ್ಲಕ್ಷ್ಯ ಅಥವಾ ಬೇರೆ ಕಾರಣಗಳಿವೆಯೇ ಎಂಬುದನ್ನು ಅಧಿಕಾರಿಗಳು ಪರಿಶೀಲಿಸಲಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !