ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಿಮ್‌ನಲ್ಲಿ ವರ್ಕೌಟ್ ಮುಗಿಸಿಕೊಂಡು ಮನೆಗೆ ಬರ್ತಿದ್ದಂತೆಯೇ ಕುಸಿದು ಬಿದ್ದು ಬಾಡಿ ಬಿಲ್ಡರ್ ಒಬ್ಬರು ಮೃತಪಟ್ಟ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ಕೆಟಿಜೆ ನಗರದ ನಿವಾಸಿ, ಅಂತಾರಾಷ್ಟ್ರೀಯ ಮಟ್ಟದ ಬಾಡಿ ಬಿಲ್ಡಿಂಗ್ ಕಾಂಪಿಟೇಷನ್‌ಗೆ ರೆಡಿಯಾಗುತ್ತಿದ್ದ 26 ವರ್ಷದ ಸುಶೀಲ್ ಕುಮಾರ್ ಮೃತರು.
ರಾತ್ರಿ ಎಂಟೂವರೆಗೆ ಜಿಮ್ ಮುಗಿಸಿ ಮನೆಗೆ ಬಂದಿದ್ದ, ತಲೆ ಸುತ್ತುತ್ತಿದೆ ಅಮ್ಮಾ ಎಂದು ಹೇಳುತ್ತಲೇ ಕುಸಿದು ಬಿದ್ದಿದ್ದ. ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯ್ತು. ಆದರೆ ಮಾರ್ಗಮಧ್ಯದಲ್ಲಿಯೇ ಸುಶೀಲ್ ಪ್ರಾಣಹೋಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಲೋ ಬಿಪಿಯಿಂದ ಹೃದಯಾಘಾತವಾಗಿರಬಹುದು ಎಂದು ಹೇಳಲಾಗುತ್ತಿದೆ.
ರಾಷ್ಟ್ರೀಯ ಮಟ್ಟದ ಬಾಡಿ ಬಿಲ್ಡಿಂಗ್‌ನಲ್ಲಿ ಹೆಸರು ಮಾಡಿ ಅಂತಾರಾಷ್ಟ್ರೀಯ ಮಟ್ಟಕ್ಕೆ ಕಾಲಿಡಬೇಕಿದ್ದ ಸುಶೀಲ್ ಕಳೆದುಕೊಂಡು ಕುಟುಂಬದವರಿಗೆ ದಿಕ್ಕು ತೋಚದಂತಾಗಿದೆ. ನಾವೆಲ್ಲ ಸಾಧನೆ ಮಾಡಬೇಕು, ಹೆಚ್ಚು ಬೆಳೆಯಬೇಕು ಎಂದು ಜಿಮ್‌ನಲ್ಲಿ ಯುವಕರಿಗೆ ಪ್ರೇರೇಪಿಸುತ್ತಿದ್ದ ಸುಶೀಲ್ ನಿಧನಕ್ಕೆ ಸ್ನೇಹಿತರು, ಆತ್ಮೀಯರು ಕಣ್ಣೀರಿಟ್ಟಿದ್ದಾರೆ.



