ಹೊಸದಿಗಂತ ಡಿಜಿಟಲ್ ಡೆಸ್ಕ್:
ಭ್ರಾಮರೀ ಯಕ್ಷಮಿತ್ರರು ಮಂಗಳೂರು ಟ್ರಸ್ಟ್ ವತಿಯಿಂದ ನೀಡಲಾಗುವ ಭ್ರಾಮರೀ ಯಕ್ಷಮಣಿ ಪ್ರಶಸ್ತಿಗೆ ಹಿರಿಯ ಯಕ್ಷಗಾನ ಕಲಾವಿದ ಕೆ.ಎಚ್. ದಾಸಪ್ಪ ರೈ ಆಯ್ಕೆಯಾಗಿದ್ದಾರೆ.
ಪ್ರಶಸ್ತಿಯು ಹದಿನೈದು ಸಾವಿರ ರೂ. ನಗದು, ಪ್ರಶಸ್ತಿ ಪತ್ರ, ಬೆಳ್ಳಿಯ ಪದಕವನ್ನು ಒಳಗೊಂಡಿರುತ್ತದೆ.
ಆಗಸ್ಟ್ 1 ರಂದು ಸಂಜೆ 7 ರಿಂದ ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯುವ ಭ್ರಾಮರೀ ಯಕ್ಷವೈಭವ 2026ರಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ತನ್ನ 15ನೇ ವಯಸ್ಸಿನಲ್ಲಿ ಯಕ್ಷಗಾನ ರಂಗವನ್ನು ಪ್ರವೇಶ ಮಾಡಿದ ಕೆ.ಎಚ್. ದಾಸಪ್ಪ ರೈ ಅವರು ಆರು ದಶಕಗಳಿಂದಲೂ ಅಽಕ ವರ್ಷಗಳಿಂದ ಯಕ್ಷಗಾನ ಕ್ಷೇತ್ರದಲ್ಲಿ ಗುರುತಿಸಿಕೊಂಡ ಹಿರಿಯ ಕಲಾವಿದರು.
ಕರ್ನಾಟಕ ಮೇಳ, ಕದ್ರಿ ಮೇಳ, ಕುಂಬಳೆ ಕಣಿಪುರ ಮೇಳ, ಮಂಗಳಾದೇವಿ ಮೇಳ ಸಹಿತ ದೇಶ ವಿದೇಶದಲ್ಲಿ ಪ್ರದರ್ಶನ ನೀಡಿದ ಹಿರಿಯ ಕಲಾವಿದರು.
ಕೋಟಿ ಚೆನ್ನಯ ಯಕ್ಷಗಾನದ ಕೋಟಿ, ಕಾಡಮಲ್ಲಿಗೆ ಯಕ್ಷಗಾನದ ಮೈಂದ ಗುರಿಕಾರೆ ಪಾತ್ರದ ಮೂಲಕ ಯಕ್ಷಭಿಮಾನಿಗಳನ್ನು ಸೆಳೆದವರು. ಯಕ್ಷಗಾನ ಕಲಾವಿದ ಮಾತ್ರವಲ್ಲದೆ ಸ್ವತಃ ಮೇಳ ನಡೆಸಿ ಮೇಳದ ಯಜಮಾನರಾಗಿಯೂ ಗುರುತಿಸಿಕೊಂಡವರು.
ಇದನ್ನೂ ಓದಿ:
ಭ್ರಾಮರೀ ಯಕ್ಷಸೇವಾ ಪುರಸ್ಕಾರ
ಕಳೆದ ಮೂರು ದಶಕಗಳಿಂದ ಯಕ್ಷಗಾನದ ನೇಪಥ್ಯ ಕಲಾವಿದರಾಗಿ ಗುರುತಿಸಿಕೊಂಡಿರುವ ಮೋನಪ್ಪ ಗೌಡ ಹಾಗೂ ಕಳೆದ 90 ವರ್ಷಕ್ಕೂ ಅಧಿಕ ಕಾಲದಿಂದ ನಿರಂತರವಾಗಿ ಯಕ್ಷಗಾನ ತಾಳಮದ್ದಳೆ ಆಯೋಜಿಸಿಕೊಂಡು, ಯಕ್ಷಗಾನ ತರಬೇತಿಯನ್ನು ನಡೆಸುತ್ತಿರುವ ಮುಡಿಪು ಕುರ್ನಾಡಿನ ಶ್ರೀ ದತ್ತಾತ್ತೇಯ ಯಕ್ಷಗಾನ ಮತ್ತು ಭಜನಾಮಂಡಳಿ ಸಂಸ್ಥೆಗೆ ಈ ಬಾರಿಯ ಭ್ರಾಮರೀ ಯಕ್ಷಸೇವಾ ಪುರಸ್ಕಾರ ನೀಡಿ ಗೌರವಿಸಲಾಗುವುದು.
ಭ್ರಾಮರೀ ಯಕ್ಷಸೇವಾ ಪುರಸ್ಕಾರ ತಲಾ ಆರು ಸಾವಿರ ರೂ. ನಗದು ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಿರಿಯ ಯಕ್ಷಗಾನ ಅರ್ಥಧಾರಿ ಜಿ.ಕೆ ಭಟ್ ಸೇರಾಜೆ, ಶಾಸಕ ವೇದವ್ಯಾಸ ಕಾಮತ್, ಎಸ್.ಸಿ ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಟಿ.ಜಿ. ರಾಜಾರಾಮ್ ಭಟ್, ಕಲ್ಕೂರ ಪ್ರತಿಷ್ಠಾನ ಅಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ, ಉದ್ಯಮಿ ರಾಜಶೇಖರ ಕೋಟ್ಯಾನ್, ಪುಳಿಂಚ ಸೇವಾ ಪ್ರತಿಷ್ಠಾನ ಅಧ್ಯಕ್ಷ ಶ್ರೀಧರ ಶೆಟ್ಟಿ ಪುಳಿಂಚ ಭಾಗವಹಿಸಲಿದ್ದಾರೆ. ಸಭಾ ಕಾರ್ಯಕ್ರಮದ ನಂತರ ಇಡೀ ರಾತ್ರಿ ತೆಂಕುತಿಟ್ಟಿನ ಪ್ರಸಿದ್ದ ಕಲಾವಿದರ ಒಗ್ಗೂಡುವಿಕೆಯಲ್ಲಿ ಅಂಬಾ ಶಪಥ, ಲಕ್ಷ್ಮೀ ಸ್ವಯಂವರ, ತಾಮ್ರಧ್ವಜ ಕಾಳಗ ಯಕ್ಷಗಾನ ಉಚಿತವಾಗಿ ಪ್ರದರ್ಶನಗೊಳ್ಳಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.



