October 6, 2026
Tuesday, October 6, 2026
spot_img

ಐಫೋನ್ ಹಿಡಿದ ತಕ್ಷಣ ‘ಸ್ಟೇಟಸ್’ ಸಿಗಲ್ಲ! ಮಧ್ಯಮ ವರ್ಗದ ಜನರಿಗೆ ಸೌತ್ ಸೂಪರ್‌ಸ್ಟಾರ್ ಕೊಟ್ಟ ‘ಕಾಮನ್ ಸೆನ್ಸ್’ ಪಾಠ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇತ್ತೀಚಿನ ದಿನಗಳಲ್ಲಿ ಸಮಾಜದಲ್ಲಿ ತಮ್ಮ ಅಂತಸ್ತನ್ನು ಪ್ರದರ್ಶಿಸಲು, ಸೋಷಿಯಲ್ ಮೀಡಿಯಾದಲ್ಲಿ ಇತರರನ್ನು ಮೆಚ್ಚಿಸಲು ಬೆಲೆಬಾಳುವ ‘ಐಫೋನ್’ ಹೊಂದುವುದು ಒಂದು ದೊಡ್ಡ ಟ್ರೆಂಡ್ ಹಾಗೂ ಕ್ರೇಜ್ ಆಗಿ ಮಾರ್ಪಟ್ಟಿದೆ. ತಮಗಿರುವ ಆರ್ಥಿಕ ಪರಿಸ್ಥಿತಿ, ಕೌಟುಂಬಿಕ ಅಗತ್ಯತೆಗಳನ್ನು ಬದಿಗೊತ್ತಿ, ಸಾಲ ಮಾಡಿ ಅಥವಾ ಇಎಮ್‌ಐ ಮೂಲಕ ಹೊಸ ಮಾಡೆಲ್‌ನ ಐಫೋನ್ ಖರೀದಿಸಲು ಸಾಮಾನ್ಯ ಜನರು ಮುಗಿಬೀಳುತ್ತಿದ್ದಾರೆ. ಆದರೆ, ಈ ರೀತಿಯ ಅನಗತ್ಯ ಪ್ರದರ್ಶನ ಮತ್ತು ಸಮಾಜದ ಮೆಚ್ಚುಗೆಗಾಗಿ ಮಾಡುವ ದುಂದುವೆಚ್ಚಗಳ ಬಗ್ಗೆ ಸೌತ್ ಸೂಪರ್‌ಸ್ಟಾರ್ ವಿಜಯ್ ದೇವರಕೊಂಡ ನೀಡಿರುವ ಹೇಳಿಕೆ ಈಗ ಎಲ್ಲರ ಕಣ್ಣು ತೆರೆಸುವಂತಿದೆ.

ಸಂದರ್ಶನವೊಂದರಲ್ಲಿ ವಿರಾಟ್ ಕೊಹ್ಲಿ ಮತ್ತು ವಿಜಯ್ ದೇವರಕೊಂಡ ಅವರಂತಹ ಪ್ರಸಿದ್ಧ ತಾರೆಯರು ಕೋಟ್ಯಂತರ ರೂಪಾಯಿ ಸಂಪಾದನೆ ಮಾಡುತ್ತಿದ್ದರೂ, ಇಂದಿಗೂ ಹಳೆಯ ಐಫೋನ್ ಮಾಡೆಲ್ ಬಳಸುತ್ತಿರುವ ಕುರಿತು ಪ್ರಶ್ನಿಸಲಾಯಿತು. “ನಿಮ್ಮ ಬಳಿ ಸಾಕಷ್ಟು ಹಣವಿದ್ದರೂ, ಪ್ರಸ್ತುತ ಇರುವ ಫೋನ್ ಸರಿಯಾಗಿ ಕೆಲಸ ಮಾಡುತ್ತಿದೆ ಎಂಬ ಕಾರಣಕ್ಕೆ ಹೊಸ ಐಫೋನ್ ಖರೀದಿಸಿಲ್ಲ ಅಲ್ಲವೇ?” ಎಂದು ಸಂದರ್ಶಕರು ಕೇಳಿದಾಗ, ವಿಜಯ್ ದೇವರಕೊಂಡ ಅತ್ಯಂತ ಸರಳವಾಗಿ, “ನನ್ನ ಬಳಿ ಇರುವ ಫೋನ್ ಇಂದಿಗೂ ಉತ್ತಮವಾಗಿ ಕೆಲಸ ಮಾಡುತ್ತಿದೆ. ಹಾಗಾಗಿ ಹೊಸ ಫೋನ್ ಕೊಳ್ಳುವ ಯಾವುದೇ ಅಗತ್ಯ ನನಗಿಲ್ಲ” ಎಂದು ಉತ್ತರಿಸಿದ್ದಾರೆ. ಹಳೆ ಫೋನ್ ಸರಿಯಾಗಿದ್ದರೂ ಕೇವಲ ಹೊಸ ಮಾಡೆಲ್ ಬಂತು ಎಂಬ ಕಾರಣಕ್ಕೆ ಲಕ್ಷಾಂತರ ರೂಪಾಯಿ ಸುರಿಯುವ ಮಧ್ಯಮ ವರ್ಗದ ಜನರಿಗೆ ವಿಜಯ್ ಅವರ ಈ ಸರಳತೆ ದೊಡ್ಡ ಪಾಠವಾಗಿದೆ.

ಸಾಮಾನ್ಯವಾಗಿ ಜನರು ಸೆಲೆಬ್ರಿಟಿಗಳು ಬಳಸುವ ಬ್ರ್ಯಾಂಡ್‌ಗಳು, ಬಟ್ಟೆಗಳು ಮತ್ತು ಗ್ಯಾಜೆಟ್‌ಗಳನ್ನು ನೋಡಿ ತಾವೂ ಅವರಂತೆ ಬದುಕಬೇಕು ಎಂದು ಕನಸು ಕಾಣುತ್ತಾರೆ. ಆದರೆ, ಈ ಬಣ್ಣದ ಲೋಕದ ಹಿನ್ನೆಲೆಯಲ್ಲಿರುವ ಅಸಲಿ ಸತ್ಯವನ್ನು ವಿಜಯ್ ದೇವರಕೊಂಡ ತೆರೆದಿಟ್ಟಿದ್ದಾರೆ. “ನಾವು ನಟರಾಗಿರುವುದರಿಂದ ನಮಗೆ ಹಲವು ಬ್ರ್ಯಾಂಡ್‌ಗಳಿಂದ ಅತ್ಯಾಧುನಿಕ ಫೋನ್‌ಗಳು ಹಾಗೂ ಗ್ಯಾಜೆಟ್‌ಗಳು ಉಡುಗೊರೆಯಾಗಿ ಸಿಗುತ್ತವೆ. ನಾವು ಪ್ರತಿಯೊಂದನ್ನೂ ಹಣ ಕೊಟ್ಟು ಖರೀದಿಸುವುದಿಲ್ಲ” ಎಂದು ಉದ್ಯಮದ ವಾಸ್ತವವನ್ನು ಹಂಚಿಕೊಂಡಿದ್ದಾರೆ. ಸೆಲೆಬ್ರಿಟಿಗಳ ಲೈಫ್‌ಸ್ಟೈಲ್ ನೋಡಿ, ತಮ್ಮ ಕಷ್ಟದ ಹಣವನ್ನು ವ್ಯರ್ಥ ಮಾಡುವ ಜನರಿಗೆ ಇದು ಸ್ಪಷ್ಟ ಎಚ್ಚರಿಕೆಯಾಗಿದೆ.

ಇಂತಹ ದುಬಾರಿ ಮೋಹಕ್ಕೆ ಒಳಗಾಗಿರುವ ಜನರ ಮನಸ್ಥಿತಿಯ ಬಗ್ಗೆ ಮಾತನಾಡಿದ ವಿಜಯ್, “ಇಂತಹ ವಿಷಯಗಳಲ್ಲಿ ಜನರು ತಮ್ಮ ‘ಸಾಮಾನ್ಯ ಜ್ಞಾನ’ವನ್ನು ಬಳಸುವುದು ಅತ್ಯಂತ ಮುಖ್ಯ” ಎಂದು ನೇರವಾಗಿ ಹೇಳಿದ್ದಾರೆ. ಜೀವನದಲ್ಲಿ ಸೋಷಿಯಲ್ ಮೀಡಿಯಾ ಪ್ರದರ್ಶನದ ಲೈಫ್‌ಸ್ಟೈಲ್‌ಗಿಂತ ನಮ್ಮ ದಿನನಿತ್ಯದ ನೈಜ ಅಗತ್ಯತೆಗಳು ಮುಖ್ಯವಾಗಿರಬೇಕು. ಫೋನ್ ಎನ್ನುವುದು ಸಂಪರ್ಕ ಸಾಧನವೇ ಹೊರತು ನಮ್ಮ ವ್ಯಕ್ತಿತ್ವ ಅಥವಾ ಅಂತಸ್ತಿನ ಸಂಕೇತವಲ್ಲ. ಕೇವಲ ಶೋ ಆಫ್‌ಗಾಗಿ ಸಾಲ ಮಾಡುವುದು ಬುದ್ಧಿವಂತಿಕೆಯಲ್ಲ ಎಂಬ ಬಲವಾದ ಸಂದೇಶವನ್ನು ಅವರು ತಲುಪಿಸಿದ್ದಾರೆ.

Must Read