October 6, 2026
Tuesday, October 6, 2026
spot_img

ಏಷ್ಯನ್‌ ಗೇಮ್ಸ್‌ನಲ್ಲಿ ಪದಕ ಗೆದ್ದ ಕ್ರೀಡಾಪಟುಗಳಿಗೆ ಸಿಎಂ ಅಭಿನಂದನೆ : ಬಂಗಾರ ಗೆದ್ದವರಿಗೆ ಒಂದು ಕೋಟಿ ರೂಪಾಯಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಏಷ್ಯನ್‌ ಗೇಮ್ಸ್‌ನಲ್ಲಿ ಪದಕ ಗೆದ್ದು ನಮ್ಮ ದೇಶ ಹಾಗೂ ರಾಜ್ಯಕ್ಕೆ ಕೀರ್ತಿ ತಂದಿರುವ ಕ್ರೀಡಾಪಟುಗಳಿಗೆ ಸಿಎಂ ಡಿ. ಕೆ. ಶಿವಕುಮಾರ್‌, ಉಪ ಮುಖ್ಯಮಂತ್ರಿಗಳು ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವರಾದ ಡಾ. ಜಿ. ಪರಮೇಶ್ವರ ಅವರು ಸನ್ಮಾನ ಮಾಡಿ ಗೌರವ ಸೂಚಿಸಿದ್ದಾರೆ.

ಏಷ್ಯನ್‌ ಗೇಮ್ಸ್‌ನಲ್ಲಿ ರಾಜ್ಯದ ಕ್ರೀಡಾಪಟುಗಳು ಅದ್ಭುತ ಸಾಧನೆ ತೋರಿದಿದ್ದಾರೆ ಎಂದು ಸಿಎಂ ಡಿಕೆಶಿ ಹೊಗಳಿದ್ದಾರೆ. ಇನ್ನು ಕರ್ನಾಟಕದ ಕ್ರೀಡಾ ಪ್ರತಿಭೆಗಳಿಗೆ ಹೆಚ್ಚಿನ ಆರ್ಥಿಕ ಪ್ರೋತ್ಸಾಹ, ಉದ್ಯೋಗ ಭದ್ರತೆ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಿಗೆ ಅಗತ್ಯ ನೆರವು ಕಲ್ಪಿಸುವ ಉದ್ದೇಶದಿಂದ ಹಲವು ಮಹತ್ವದ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಡಾ. ಜಿ. ಪರಮೇಶ್ವರ ಹೇಳಿದ್ದಾರೆ.

ಪದಕವೀರರಿಗೆ ನಗದು ಬಹುಮಾನ

ಏಷ್ಯನ್‌ ಗೇಮ್ಸ್‌ನಲ್ಲಿ ಪದಕ ಗೆದ್ದ ಕ್ರೀಡಾವೀರರಿಗೆ ನಗದು ಬಹುಮಾನವನ್ನು ನೀಡಲಾಗಿದೆ. ಈ ಹಿಂದೆ ಚಿನ್ನದ ಪದಕ ವಿಜೇತರಿಗೆ 5 ಲಕ್ಷ ರೂ, ಬೆಳ್ಳಿ ಪದಕ ವಿಜೇತರಿಗೆ 25 ಲಕ್ಷ ರೂ. ಹಾಗೂ ಕಂಚಿನ ಪದಕ ವಿಜೇತರಿಗೆ 15 ಲಕ್ಷ ರೂ. ನಗದು ಪುರಸ್ಕಾರ ನೀಡಲಾಗುತ್ತಿತ್ತು. ಆದರೆ ಇದೀಗ ಚಿನ್ನದ ಪದಕ ವಿಜೇತರಿಗೆ ಒಂದು ಕೋಟಿ ರೂಪಾಯಿ, ಬೆಳ್ಳಿ ಪದಕ ವಿಜೇತರಿಗೆ 75 ಲಕ್ಷ ರೂ ಮತ್ತು ಕಂಚಿನ ಪದಕ ಗೆದ್ದರೆ 50 ಲಕ್ಷ ರೂ. ನಗದು ಪುರಸ್ಕಾರ ನೀಡಲಾಗುವುದು.

ಈ ಬಾರಿ ಎಂಟು ಮಂದಿಗೆ ಈ ನಗದು ಪುರಸ್ಕಾರ ಸಿಗಲಿದ್ದು, ಜೊತೆಗೆ ಈ ಎಂಟು ಪದಕ ವಿಜೇತರಿಗೆ ಏಷ್ಯನ್ ಗೇಮ್ಸ್ 2026ರಲ್ಲಿ ಭಾಗವಹಿಸಿದ್ದಕ್ಕಾಗಿ, ಪದಕ ಸಾಧನೆಗೆ ನೀಡಲಾಗುವ ನಗದು ಪುರಸ್ಕಾರದ ಹೆಚ್ಚುವರಿಯಾಗಿ ತಲಾ 5 ಲಕ್ಷ ರೂ. ಪ್ರೋತ್ಸಾಹಧನ ನೀಡಲಾಗುವುದು.ರಾಜ್ಯದ ಕ್ರೀಡಾಪಟುಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಲು ಅರ್ಹತೆ ಪಡೆಯುವುದೇ ಮಹತ್ವದ ಸಾಧನೆಯಾಗಿದ್ದು, ಪದಕ ಗಳಿಸಿದವರ ಜೊತೆಗೆ ಕ್ರೀಡಾಕೂಟದಲ್ಲಿ ರಾಜ್ಯವನ್ನು ಪ್ರತಿನಿಧಿಸಿದ ಎಲ್ಲ ಕ್ರೀಡಾಪಟುಗಳನ್ನೂ ಪ್ರೋತ್ಸಾಹಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.

ನೇರ ನೇಮಕಾತಿ

ಇನ್ನು ಏಷ್ಯನ್‌ ಗೇಮ್ಸ್‌ ಹಾಗೂ ಕಾಮನ್‌ವೆಲ್ತ್‌ ಗೇಮ್ಸ್‌ ಪದಕ ವಿಜೇತರಿಗೆ ರಾಜ್ಯ ಸರ್ಕಾರದ ಗ್ರೂಪ್‌ – ಬಿ ಹುದ್ದೆಗಳಿಗೆ ನೇರ ನೇಮಕಾತಿ ಅವಕಾಶ ಇದೆ. ಅರ್ಹ ಹಾಗೂ ಆಸಕ್ತ ಪದಕ ವಿಜೇತ ಕ್ರೀಡಾಪಟುಗಳನ್ನು ರಾಜ್ಯದ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯ ಆಯ್ಕೆ ಸಮಿತಿಯ ಮೂಲಕ ನೇರ ನೇಮಕಾತಿ ಮಾಡಲು ಅವಕಾಶ ನೀಡಲಾಗಿದೆ.

ನಾಲ್ವರು ಕ್ರೀಡಾಪಟುಗಳಿಗೆ ಪ್ರೋತ್ಸಾಹ ಧನ

ಒಲಿಂಪಿಕ್ಸ್‌ನಲ್ಲಿ ಕರ್ನಾಟಕದ ಕ್ರೀಡಾಪಟುಗಳ ಭಾಗವಹಿಸುವಿಕೆ ಮತ್ತು ಸಾಧನೆಯನ್ನು ಹೆಚ್ಚಿಸುವ ಉದ್ದೇಶದಿಂದ ಜಾರಿಗೊಳಿಸಿರುವ ‘ಗುರಿ: ಒಲಿಂಪಿಕ್ಸ್’ ಯೋಜನೆಯಡಿ 2026-27ನೇ ಸಾಲಿಗೆ ಏಷ್ಯನ್ ಗೇಮ್ಸ್ ಹಾಗೂ ಕಾಮನ್‌ವೆಲ್ತ್ ಗೇಮ್ಸ್ ಪದಕ ವಿಜೇತರ ಪೈಕಿ ಆಯ್ದ ನಾಲ್ವರು ಕ್ರೀಡಾಪಟುಗಳನ್ನು (ಎಂ.ಆರ್‌.ಪೂವಮ್ಮ, ಸ್ನೇಹಾ ಎಸ್‌.ಎಸ್‌., ಶ್ರೇಯಾಂಕ ಪಾಟೀಲ್‌, ಶಿಲ್ಪಾ ಕೆ.ಎಸ್‌) ಸೇರ್ಪಡೆ ಮಾಡಲಾಗಿದೆ. ಈ ಕ್ರೀಡಾಪಟುಗಳಿಗೆ ಒಲಿಂಪಿಕ್ಸ್ ಸಿದ್ಧತೆ, ತರಬೇತಿ ಹಾಗೂ ಇತರೆ ಅಗತ್ಯಗಳಿಗೆ ಪ್ರಸಕ್ತ ಸಾಲಿನಲ್ಲಿ ತಲಾ 10 ಲಕ್ಷ ನಗದು ಪ್ರೋತ್ಸಾಹಧನ ನೀಡಲಾಗುವುದು.

Must Read