June 20, 2026
Saturday, June 20, 2026
spot_img

ಗ್ರಾಹಕರ ಆರೋಗ್ಯಕ್ಕೆ ಕಂಟಕ ತಂದ ಬ್ರ್ಯಾಂಡ್‌ಗಳಿಗೆ ಬಿಸಿ ಮುಟ್ಟಿಸಿದ FSSAI: ಬಿಕಾನೇರ್‌ವಾಲಾ ಸೇರಿ 14 ಸಂಸ್ಥೆಗಳಿಗೆ ನೋಟಿಸ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ದೇಶದ ಜನಪ್ರಿಯ ಸ್ವೀಟ್ಸ್ ಹಾಗೂ ಸ್ನಾಕ್ಸ್ ಬ್ರ್ಯಾಂಡ್ ಆದ ‘ಬಿಕಾನೇರ್‌ವಾಲಾ’ ಮತ್ತು ಪ್ರಮುಖ ಹಾಲಿನ ಉತ್ಪನ್ನಗಳ ಸಂಸ್ಥೆಯಾದ ‘ಪ್ಯಾರಾಮ್ ಡೈರಿ’ಗೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಬಿಸಿ ಮುಟ್ಟಿಸಿದೆ. ಆಹಾರ ತಯಾರಿಕಾ ಸ್ಥಳಗಳಲ್ಲಿ ಸ್ವಚ್ಛತೆಯ ಕೊರತೆ ಮತ್ತು ಕಳಪೆ ಉತ್ಪನ್ನಗಳ ಸರಬರಾಜು ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ ಎಫ್‌ಎಸ್‌ಎಸ್‌ಎಐ ಈ ಕಠಿಣ ಕ್ರಮ ಕೈಗೊಂಡಿದ್ದು, ಆಹಾರ ಸುರಕ್ಷತಾ ಕಾಯ್ದೆ 2006 ರ ನಿಬಂಧನೆಗಳನ್ನು ಉಲ್ಲಂಘಿಸಿರುವ ಕಾರಣಕ್ಕಾಗಿ ಈ ನೋಟಿಸ್‌ಗಳನ್ನು ನೀಡಲಾಗಿದೆ.

ಬಿಕಾನೇರ್‌ವಾಲಾ ಮೇಲಿರುವ ದೂರುಗಳೇನು?

ಗ್ರಾಹಕರೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದ ದೂರಿನ ಪ್ರಕಾರ, ಬಿಕಾನೇರ್‌ವಾಲಾದ ಔಟ್‌ಲೆಟ್‌ ಒಂದರಲ್ಲಿ ಗ್ರಾಹಕರಿಗೆ ಆಹಾರ ಬಡಿಸುವ ಮತ್ತು ಅಡುಗೆ ಮಾಡುವ ನಿರ್ಬಂಧಿತ ಪ್ರದೇಶದಲ್ಲಿ ಸಿಬ್ಬಂದಿಯೊಬ್ಬರು ತಾವೇ ಆಹಾರದ ತಟ್ಟೆ ಇಟ್ಟುಕೊಂಡು ಊಟ ಮಾಡುತ್ತಿರುವುದು ಕಂಡುಬಂದಿತ್ತು.

ವ್ಯಾಪಾರದ ಅವಧಿಯಲ್ಲಿ ಕಿಚನ್‌ನೊಳಗೆ ಇಂತಹ ವರ್ತನೆ ತೋರಿರುವುದು ಹೋಟೆಲ್‌ಗಳ ನೈರ್ಮಲ್ಯ ಹಾಗೂ ಸ್ವಚ್ಛತೆಯ ನಿಯಮಾವಳಿಗಳಿಗೆ ಧಕ್ಕೆ ತಂದಿದೆ ಎಂದು ಪ್ರಾಧಿಕಾರ ಆಕ್ಷೇಪಿಸಿದೆ. ಈ ಘಟನೆಯ ಬಗ್ಗೆ ಆಂತರಿಕ ತನಿಖೆ ನಡೆಸಿ, ತಪ್ಪಿತಸ್ಥ ಸಿಬ್ಬಂದಿ ವಿರುದ್ಧ ಕೈಗೊಂಡ ಕ್ರಮದ ಕುರಿತು ‘ಆಕ್ಷನ್ ಟೇಕನ್ ರಿಪೋರ್ಟ್’ ಸಲ್ಲಿಸುವಂತೆ ಬಿಕಾನೇರ್‌ವಾಲಾಗೆ ಸೂಚಿಸಲಾಗಿದೆ.

ಪ್ಯಾರಾಮ್ ಡೈರಿ ಮತ್ತು ಐಆರ್‌ಸಿಟಿಸಿ ಲಿಂಕ್?

ರೈಲ್ವೆ ಇಲಾಖೆಯ ಐಆರ್‌ಸಿಟಿಸಿ ಕ್ಯಾಟರಿಂಗ್ ಸೇವೆಗಳ ಮೂಲಕ ಪ್ಯಾರಾಮ್ ಡೈರಿ ಸರಬರಾಜು ಮಾಡಿದ್ದ ‘ಮೊಸರು’ ಮತ್ತು ‘ರಬಡಿ’ ಉತ್ಪನ್ನಗಳಲ್ಲಿ ಫಂಗಸ್ ಇರುವುದು ಪತ್ತೆಯಾಗಿತ್ತು.ರೈಲು ಪ್ರಯಾಣಿಕರ ಆರೋಗ್ಯಕ್ಕೆ ಹಾನಿ ಉಂಟುಮಾಡುವ ಇಂತಹ ಕಳಪೆ ಹಾಲಿನ ಉತ್ಪನ್ನಗಳನ್ನು ವಿತರಿಸಿದ್ದಕ್ಕಾಗಿ ಪ್ಯಾರಾಮ್ ಡೈರಿಗೆ ಎಫ್‌ಎಸ್‌ಎಸ್‌ಎಐ ತೀವ್ರ ತರಾಟೆಗೆ ತೆಗೆದುಕೊಂಡಿದ್ದು, ದಾಸ್ತಾನು ನಿರ್ವಹಣೆ ಮತ್ತು ಗುಣಮಟ್ಟದ ಲೋಪಗಳ ಕುರಿತು ತಕ್ಷಣವೇ ವಿವರಣೆ ನೀಡುವಂತೆ ಆದೇಶಿಸಿದೆ.

ಇದನ್ನೂ ಓದಿ:

ಇತರ ಪ್ರಮುಖ ಬ್ರ್ಯಾಂಡ್‌ಗಳಿಗೂ ಶಾಕ್!

ಕೇವಲ ನೈರ್ಮಲ್ಯ ಮಾತ್ರಲ್ಲದೆ, ದಾರಿ ತಪ್ಪಿಸುವ ಜಾಹೀರಾತು ಮತ್ತು ಸುಳ್ಳು ಪೌಷ್ಟಿಕಾಂಶದ ಭರವಸೆ ನೀಡಿದ್ದಕ್ಕಾಗಿ ಕಿಂಡರ್ ಜಾಯ್, ಸಫೋಲಾ ಮತ್ತು ಮರಿಕೋ ಸೇರಿದಂತೆ ಒಟ್ಟು 14 ಸಂಸ್ಥೆಗಳಿಗೆ ನೋಟಿಸ್ ನೀಡಲಾಗಿದೆ. ಉತ್ಪನ್ನಗಳ ಪ್ಯಾಕೆಟ್ ಮೇಲೆ ‘Rich in Milk Solids’, ‘Heart Pro’ ನಂತಹ ವೈಜ್ಞಾನಿಕವಾಗಿ ಸಾಬೀತಾಗದ ಕ್ಲೈಮ್‌ಗಳನ್ನು ಬಳಸಿ ಗ್ರಾಹಕರನ್ನು ದಿಕ್ಕು ತಪ್ಪಿಸುತ್ತಿರುವುದನ್ನು ನಿಲ್ಲಿಸಬೇಕು ಎಂದು ಎಫ್‌ಎಸ್‌ಎಸ್‌ಎಐ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.

ಎಲ್ಲಾ ಸಂಸ್ಥೆಗಳೂ ತಕ್ಷಣವೇ ತಮ್ಮ ತಪ್ಪುಗಳನ್ನು ಸರಿಪಡಿಸಿಕೊಂಡು ಕಡ್ಡಾಯವಾಗಿ ವರದಿ ಸಲ್ಲಿಸಬೇಕು, ಇಲ್ಲದಿದ್ದರೆ ಪರವಾನಗಿ ರದ್ದುಪಡಿಸುವುದಾಗಿ ಆಹಾರ ನಿಯಂತ್ರಣ ಮಂಡಳಿ ಎಚ್ಚರಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !