ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಈ ಬಾರಿ ಮತ್ತೊಂದು ನೂತನ ಹಾಗೂ ಸಾಂಪ್ರದಾಯಿಕ ಆಕರ್ಷಣೆ ಸೇರ್ಪಡೆಯಾಗುತ್ತಿದೆ. ದಸರಾ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಕರಾವಳಿ ಭಾಗದ ಪ್ರಸಿದ್ಧ ಜಾನಪದ ಕ್ರೀಡೆಯಾದ ‘ಕಂಬಳ’ ಸ್ಪರ್ಧೆಯನ್ನು ವಿಶೇಷ ಆಕರ್ಷಣೆಯಾಗಿ ಆಯೋಜಿಸಲು ತೀರ್ಮಾನಿಸಲಾಗಿದೆ.
ಪೂರ್ವಭಾವಿ ಸಭೆಯಲ್ಲಿ ಡಿಸಿ ಗ್ರೀನ್ ಸಿಗ್ನಲ್
ಮುಖ್ಯಮಂತ್ರಿಗಳ ಆಶಯದಂತೆ ಮೈಸೂರು ದಸರಾ ಉತ್ಸವದ ಅಂಗವಾಗಿ ಕಂಬಳ ಆಯೋಜಿಸುವ ಕುರಿತು ಇಂದು ಮೈಸೂರು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸಿದ್ಧತಾ ಸಭೆ ನಡೆಯಿತು. ಸಭೆಯ ಬಳಿಕ ಮಾತನಾಡಿದ ಮೈಸೂರು ಜಿಲ್ಲಾಧಿಕಾರಿ ಜಿ. ಲಕ್ಷ್ಮಿಕಾಂತ ರೆಡ್ಡಿ, ಕಳೆದ ವರ್ಷವೇ ಕಂಬಳ ಆಯೋಜಿಸಲು ಉದ್ದೇಶಿಸಲಾಗಿತ್ತಾದರೂ ಸೂಕ್ತ ಸ್ಥಳ ಲಭ್ಯವಾಗದ ಕಾರಣ ಸಾಧ್ಯವಾಗಿರಲಿಲ್ಲ. ಆದರೆ ಈ ಬಾರಿ ಮೂರು ತಿಂಗಳ ಮುಂಚಿತವಾಗಿಯೇ ಸಿದ್ಧತೆಗಳನ್ನು ಆರಂಭಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.
ಕಂಬಳಕ್ಕಾಗಿ 3 ಪ್ರಮುಖ ಸ್ಥಳಗಳ ಪರಿಶೀಲನೆ
ಕಂಬಳ ಸ್ಪರ್ಧೆಯನ್ನು ಯಶಸ್ವಿಯಾಗಿ ನಡೆಸಲು ಕನಿಷ್ಠ 7 ರಿಂದ 10 ಎಕರೆ ವಿಸ್ತೀರ್ಣದ ಜಾಗದ ಅಗತ್ಯವಿದೆ. ಈ ನಿಟ್ಟಿನಲ್ಲಿ ಮೈಸೂರು ನಗರದ ಮೂರು ಪ್ರಮುಖ ಸ್ಥಳಗಳನ್ನು ಸದ್ಯ ಗುರುತಿಸಲಾಗಿದೆ. ಸಂಚಾರ ದಟ್ಟಣೆ, ಸಾರ್ವಜನಿಕರ ನಿಲುಗಡೆ ವ್ಯವಸ್ಥೆ, ವೀಕ್ಷಕರ ಗ್ಯಾಲರಿ ಮತ್ತು ಕೋಣಗಳ ಆರೈಕೆಗೆ ಸೂಕ್ತವಾದ ಒಂದು ಜಾಗವನ್ನು ತಜ್ಞರ ತಂಡದ ಪರಿಶೀಲನೆಯ ನಂತರ ಅಂತಿಮಗೊಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:
ಜಾಗತಿಕ ಮಟ್ಟದಲ್ಲಿ ಕರಾವಳಿ ಸಂಸ್ಕೃತಿಯ ಪ್ರಚಾರ
ದಸರಾ ಮಹೋತ್ಸವಕ್ಕೆ ದೇಶ-ವಿದೇಶಗಳಿಂದ ಲಕ್ಷಾಂತರ ಪ್ರವಾಸಿಗರು ಆಗಮಿಸುತ್ತಾರೆ. ಈ ವೇದಿಕೆಯಲ್ಲಿ ಕಂಬಳವನ್ನು ಪ್ರದರ್ಶಿಸುವುದರಿಂದ ತುಳುನಾಡಿನ ಸಂಸ್ಕೃತಿ ಮತ್ತು ಸಾಂಪ್ರದಾಯಿಕ ಕ್ರೀಡೆಗೆ ಅಂತಾರಾಷ್ಟ್ರೀಯ ಮಟ್ಟದ ಮನ್ನಣೆ ಸಿಗಲಿದೆ ಎಂದು ದಕ್ಷಿಣ ಕನ್ನಡ ಕಂಬಳ ಸಮಿತಿಯ ಪ್ರಮುಖರು ಹರ್ಷ ವ್ಯಕ್ತಪಡಿಸಿದ್ದಾರೆ. ಶೀಘ್ರದಲ್ಲೇ ಮುಂದಿನ ಹಂತದ ಸಭೆ ನಡೆಸಿ ಕಂಬಳ ನಡೆಯುವ ಅಧಿಕೃತ ದಿನಾಂಕ ಮತ್ತು ಸ್ಥಳವನ್ನು ಅಂತಿಮಗೊಳಿಸಲಾಗುವುದು.



