ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಂಧ್ರಪ್ರದೇಶದಲ್ಲಿ ದೇಶದ ಮೊದಲ ಖಾಸಗಿ ವಲಯದ ವಾಣಿಜ್ಯ ಚಿನ್ನದ ಗಣಿ ಯೋಜನೆಗೆ ಅಧಿಕೃತ ಚಾಲನೆ ದೊರೆತಿದೆ.
ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಕರ್ನೂಲ್ ಜಿಲ್ಲೆಯ ಜೊನ್ನಗಿರಿಯಲ್ಲಿ 405 ಕೋಟಿ ರೂ. ವೆಚ್ಚದ ಚಿನ್ನದ ಗಣಿಗಾರಿಕೆ ಮತ್ತು ಸಂಸ್ಕರಣಾ ಘಟಕವನ್ನು ಉದ್ಘಾಟಿಸಿದರು.
ಐತಿಹಾಸಿಕ ಯೋಜನೆಗೆ ಚಾಲನೆ
ಸ್ವಾತಂತ್ರ್ಯದ ಬಳಿಕ ಕಾರ್ಯಾಚರಣೆಗೆ ಬಂದಿರುವ ದೇಶದ ಮೊದಲ ಖಾಸಗಿ ಪ್ರಾಥಮಿಕ ಚಿನ್ನದ ಗಣಿ ಎಂಬ ಹೆಗ್ಗಳಿಕೆಗೆ ಈ ಯೋಜನೆ ಪಾತ್ರವಾಗಿದೆ. ಇದರೊಂದಿಗೆ ಆಂಧ್ರಪ್ರದೇಶ ಚಿನ್ನದ ಉತ್ಪಾದನಾ ಕ್ಷೇತ್ರದಲ್ಲಿ ಹೊಸ ಅಧ್ಯಾಯ ಆರಂಭಿಸಿದೆ.
1,500 ಎಕರೆ ಪ್ರದೇಶದಲ್ಲಿ ವಿಸ್ತರಣೆ
ಜಿಯೋ ಮೈಸೂರು ಸರ್ವೀಸಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಹಾಗೂ ಡೆಕ್ಕನ್ ಗೋಲ್ಡ್ ಮೈನ್ಸ್ ಲಿಮಿಟೆಡ್ ಜಂಟಿಯಾಗಿ ಯೋಜನೆಯನ್ನು ಅಭಿವೃದ್ಧಿಪಡಿಸಿವೆ. ಮೊದಲ ಹಂತದಲ್ಲಿ 600 ಎಕರೆ ಪ್ರದೇಶದಲ್ಲಿ ಕಾರ್ಯಾಚರಣೆ ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ 1,500 ಎಕರೆ ವ್ಯಾಪ್ತಿಗೆ ವಿಸ್ತರಣೆಗೊಳ್ಳಲಿದೆ.
ಇದನ್ನೂ ಓದಿ:
ವಾರ್ಷಿಕ ಉತ್ಪಾದನೆ ಹೆಚ್ಚಳದ ನಿರೀಕ್ಷೆ
ಮೇ ತಿಂಗಳಲ್ಲಿ ಪ್ರಾಯೋಗಿಕ ಉತ್ಪಾದನೆ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಇದೀಗ ವಾಣಿಜ್ಯ ಉತ್ಪಾದನೆ ಆರಂಭವಾಗಿದೆ. ಮೊದಲ ವರ್ಷದಲ್ಲಿ ಸುಮಾರು 400 ಕೆಜಿ ಚಿನ್ನ ಉತ್ಪಾದನೆಯ ಗುರಿ ಹೊಂದಲಾಗಿದ್ದು, ಎರಡನೇ ವರ್ಷದಿಂದ ಉತ್ಪಾದನೆ 900 ಕೆಜಿಗೆ ಏರಿಕೆಯಾಗುವ ನಿರೀಕ್ಷೆಯಿದೆ.
ಈ ಯೋಜನೆಯಿಂದ ಸ್ಥಳೀಯ ಮಟ್ಟದಲ್ಲಿ ಉದ್ಯೋಗಾವಕಾಶಗಳು ಹೆಚ್ಚಾಗಲಿದ್ದು, ಗಣಿಗಾರಿಕೆ ಕ್ಷೇತ್ರದಲ್ಲಿ ಹೊಸ ಹೂಡಿಕೆಗಳಿಗೆ ಸಹ ಉತ್ತೇಜನ ಸಿಗಲಿದೆ.



