August 14, 2026
Friday, August 14, 2026
spot_img

ದೇರಳಕಟ್ಟೆ ಬಳಿ ಭೀಕರ ಅಪಘಾತ: ಕಮರಿಗಿಳಿದ ಕಾಲೇಜ್ ಬಸ್ ಗೆ ಸಿಲುಕಿ ಇನ್ಫೋಸಿಸ್ ಉದ್ಯೋಗಿ ಸಾ*ವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿದ್ಯಾರ್ಥಿಗಳನ್ನು ಕೆರೆದೊಯ್ಯುತ್ತಿದ್ದ ಖಾಸಗಿ ಇಂಜಿನಿಯರಿಂಗ್ ಕಾಲೇಜು ಬಸ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ಕಮರಿಗೆ ಉರುಳಿದ ಘಟನೆ ಶನಿವಾರ ಸಂಜೆ ಮಂಗಳೂರು ನಗರದ ಹೊರವಲಯ ದೇರಳಕಟ್ಟೆ ಸಮೀಪದ ನಾಟೆಕಲ್ ತಿರುವಿನಲ್ಲಿ ನಡೆದಿದ್ದು ಘಟನೆಯಲ್ಲಿ ಬಸ್ ಕೆಳಗೆ ಸಿಲುಕಿ ಸ್ಕೂಟರ್ ಚಾಲಕ ಯುವಕ, ಇನ್ಫೋಸಿಸ್ ಉದ್ಯೋಗಿ ಸಾವನ್ನಪ್ಪಿದ್ದಾರೆ.

ಮುಡಿಪು, ಕಂಬಳಪದವಿನ ಇನ್ಫೋಸಿಸ್ ನ ಉದ್ಯೋಗಿ ಚಿಕ್ಕಮಂಗಳೂರು ಮೂಲದ ನಿವಾಸಿ ಪ್ರಜ್ವಲ್ ಅರ್ನಾಲ್ಡ್ (30) ಸಾವನ್ನಪ್ಪಿದ ಯುವಕ.

ಪ್ರಜ್ವಲ್ ತನ್ನ ಸಹೋದ್ಯೋಗಿ ಯುವತಿ ಸಾಗರದ ನಿವಾಸಿ ಅಕ್ಷತಾ ಎಂಬವರೊಂದಿಗೆ ಸಂಜೆ ಸ್ಕೂಟರಲ್ಲಿ ಕಂಬಳ ಪದವಿನಿಂದ ಮಂಗಳೂರು ಕಡೆ ತೆರಳುತ್ತಿದ್ದ ವೇಳೆ ಹಿಂದಿನಿಂದ ಬಂದ ನಡುಪದವಿನ ಇಂಜಿನಿಯರಿಂಗ್ ಕಾಲೇಜೊಂದರ ಬಸ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ಕಮರಿಗೆ ಉರುಳಿದೆ. ಈ ವೇಳೆ ಬಸ್ಸಿನ ಅಡಿಗೆ ಸ್ಕೂಟರ್ ಕೂಡ ಸಿಲುಕಿಕೊಂಡಿದೆ.

ಇದನ್ನೂ ಓದಿ:

ಕೂಡಲೇ ಸ್ಥಳದಲ್ಲಿ ಜಮಾಯಿಸಿದ ಸಾರ್ವಜನಿಕರು ತಕ್ಷಣ ಕ್ರೇನ್ ತರಿಸಿ ಬಸ್ಸನ್ನು ಮೇಲಕ್ಕೆತ್ತಿದ್ದು, ಸ್ಕೂಟರ್ ಸವಾರ ಪ್ರಜ್ವಲ್ ಮತ್ತು ಅಕ್ಷತಾರನ್ನು ಹೊರಗೆಳೆದು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಾಹ್ಯವಾಗಿ ದೇಹದಲ್ಲಿ ಗಂಭೀರ ಗಾಯಗಳಿಲ್ಲದಿದ್ದರೂ ಆಂತರಿಕ ಅಂಗಗಳ ನಿಷ್ಕ್ರಿಯತೆಯಿಂದಾಗಿ ಪ್ರಜ್ವಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.

ಸ್ಕೂಟರ್ ಸಹ ಸವಾರೆ ಅಕ್ಷತಾಗೆ ಚಿಕಿತ್ಸೆ ಮುಂದುವರಿದಿದ್ದು ಆಕೆ ಪ್ರಾಣಾಪಾಯದಿಂದ ಪಾರಾಗಿರುವ ಬಗ್ಗೆ ಮಾಹಿತಿ ಲಭಿಸಿದೆ. ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಕಾಲೇಜು ವಿದ್ಯಾರ್ಥಿಗಳು ಸಣ್ಣ ಪುಟ್ಟ ಗಾಯಗಳಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಸ್ಸಿನಡಿಗೆ ಸಿಲುಕಿದ ಸ್ಕೂಟರ್ ಸಂಪೂರ್ಣ ನಜ್ಜುಗುಜ್ಜಾಗಿದೆ. ಘಟನಾ ಸ್ಥಳದಲ್ಲಿ ಭಾರಿ ಸಂಖ್ಯೆಯಲ್ಲಿ ಜನ ಸೇರಿದ ಪರಿಣಾಮ ಕೆಲ ಕಾಲ ರಸ್ತೆ ಸಂಚಾರ ಸ್ತಬ್ದಗೊಂಡಿತು. ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಟ್ಟಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !