ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದ ಸರ್ಕಾರಿ ಶಾಲೆಗಳ ಪ್ರೌಢಶಾಲಾ ವಿದ್ಯಾರ್ಥಿಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಬಗ್ಗೆ ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ಶಾಲಾ ಶಿಕ್ಷಣ ಇಲಾಖೆಯು ಮಹತ್ವದ ನಿರ್ಧಾರ ಕೈಗೊಂಡಿದೆ. ಸರ್ಕಾರಿ ಶಾಲೆಗಳಲ್ಲಿ ಇನ್ಮುಂದೆ ‘ಸ್ಟೀಮ್’ (STEAM – Science, Technology, Engineering, Arts, and Mathematics) ಆಧಾರಿತ ತರಗತಿಗಳನ್ನು ಪರಿಚಯಿಸಲಾಗುತ್ತಿದೆ.
ಕೋಡಿಂಗ್ ಮತ್ತು ರೋಬೋಟಿಕ್ಸ್ ತರಬೇತಿ:
ಈ ನೂತನ ಯೋಜನೆಯಡಿ ವಿದ್ಯಾರ್ಥಿಗಳಿಗೆ ಭವಿಷ್ಯದ ತಂತ್ರಜ್ಞಾನಕ್ಕೆ ಪೂರಕವಾದ ರೋಬೋಟಿಕ್ಸ್ ಮತ್ತು ಕೋಡಿಂಗ್ಪಾಠಗಳನ್ನು ಕಲಿಸಲಾಗುತ್ತದೆ. ಇದು ವಿದ್ಯಾರ್ಥಿಗಳಲ್ಲಿ ಕೇವಲ ತಾಂತ್ರಿಕ ಜ್ಞಾನವನ್ನು ಹೆಚ್ಚಿಸುವುದಲ್ಲದೆ, ಅವರಲ್ಲಿ ಸಮಸ್ಯೆಗಳನ್ನು ಬಗೆಹರಿಸುವ ಕೌಶಲ್ಯವನ್ನು ಉತ್ತಮಪಡಿಸಲು ಸಹಕಾರಿಯಾಗಲಿದೆ ಎಂದು ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ:
ಸೃಜನಶೀಲತೆಗೆ ಹೊಸ ವೇದಿಕೆ:
“ವಿದ್ಯಾರ್ಥಿಗಳಲ್ಲಿ ಕೇವಲ ಕಂಠಪಾಠ ಶಿಕ್ಷಣಕ್ಕೆ ಸೀಮಿತವಾಗದೆ, ಸೃಜನಶೀಲ ಮನೋಭಾವವನ್ನು ಜಾಗೃತಗೊಳಿಸುವುದು ಮತ್ತು ವಿಜ್ಞಾನ-ತಂತ್ರಜ್ಞಾನ ಕ್ಷೇತ್ರಗಳಲ್ಲಿ ಅವರ ಆಸಕ್ತಿಯನ್ನು ಬೆಳೆಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ” ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಜಾಗತಿಕ ಮಟ್ಟದ ಶಿಕ್ಷಣ ಶೈಲಿಯನ್ನು ಸರ್ಕಾರಿ ಶಾಲೆಯ ಮಕ್ಕಳಿಗೂ ಉಚಿತವಾಗಿ ತಲುಪಿಸಲು ಈ ಕ್ರಮ ಕೈಗೊಳ್ಳಲಾಗಿದೆ.



