ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಷ್ಟ್ರೀಯ ಪಲ್ಸ್ ಪೋಲಿಯೋ ಇಮ್ಯುನೈಸೇಷನ್ ಕಾರ್ಯಕ್ರಮದ ಮೊದಲ ದಿನ ಬೆಂಗಳೂರಿನಲ್ಲಿ 11 ಲಕ್ಷಕ್ಕೂ ಅಧಿಕ ಮಕ್ಕಳಿಗೆ ಪೋಲಿಯೋ ಡ್ರಾಪ್ಸ್ ಹಾಕಲಾಗಿದೆ. ಐದು ವರ್ಷದೊಳಗಿನ ಒಟ್ಟು 11,06,535 ಮಕ್ಕಳಿಗೆ ಯಶಸ್ವಿಯಾಗಿ ಪೋಲಿಯೋ ಹನಿಗಳನ್ನು ಹಾಕಲಾಗಿದ್ದು, ಮೊದಲ ದಿನವೇ ಶೇ 96.4 ರಷ್ಟು ಗುರಿ ತಲುಪಲಾಗಿದೆ.
ಜೂನ್ 28ರಿಂದ ಜುಲೈ 1 ರವರೆಗೆ ಒಟ್ಟಾರೆ ನಾಲ್ಕು ದಿನಗಳ ಕಾಲ ಈ ಅಭಿಯಾನ ನಡೆಯಲಿದೆ. ಈ ಅವಧಿಯಲ್ಲಿ ಒಟ್ಟು 11,47,872 ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಈ ಬಾರಿ ಮನೆ ಮನೆ ಭೇಟಿ ನಡೆಸುವ ಮುನ್ನವೇ ಕೇವಲ ಲಸಿಕಾ ಕೇಂದ್ರಗಳ ಮೂಲಕವೇ ಇಷ್ಟು ಮಕ್ಕಳಿಗೆ ಲಸಿಕೆ ಹಾಕಲಾಗಿದೆ. ಒಟ್ಟು ಲಸಿಕೆ ಪಡೆದ ಮಕ್ಕಳಲ್ಲಿ 10,27,347 ಮಕ್ಕಳು ವಿವಿಧ ವಾರ್ಡ್‌ಗಳಲ್ಲಿ ಸ್ಥಾಪಿಸಲಾಗಿದ್ದ ಪೋಲಿಯೋ ಬೂತ್‌ಗಳು, ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ನಮ್ಮ ಕ್ಲಿನಿಕ್‌ಗಳು, ಹೆರಿಗೆ ಆಸ್ಪತ್ರೆಗಳು, ಅಂಗನವಾಡಿ ಕೇಂದ್ರಗಳು ಹಾಗೂ ಶಾಲೆಗಳಲ್ಲಿ ಪೋಲಿಯೋ ಹನಿಗಳನ್ನು ಪಡೆದಿದ್ದಾರೆ. ಉಳಿದಂತೆ ರೈಲ್ವೆ ನಿಲ್ದಾಣ, ಬಸ್ ನಿಲ್ದಾಣಗಳಂತಹ ಸಾರಿಗೆ ಕೇಂದ್ರಗಳು, ಮಾರುಕಟ್ಟೆಗಳು ಹಾಗೂ ಮೇಳಗಳು ನಡೆದ ಸ್ಥಳಗಳಲ್ಲಿ ಇನ್ನೂ 73,987 ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಲಾಗಿದೆ. ಇನ್ನುಳಿದ ದಿನಗಳಲ್ಲಿ ಲಸಿಕೆಯಿಂದ ವಂಚಿತರಾದ ಮಕ್ಕಳನ್ನು ಪತ್ತೆ ಹಚ್ಚಿ ಪೋಲಿಯೋ ಡ್ರಾಪ್ಸ್ ಹಾಕಲಾಗುತ್ತದೆ.



