June 30, 2026
Tuesday, June 30, 2026
spot_img

ಏಷ್ಯನ್ ಗೇಮ್ಸ್‌ಗೆ ಹರ್ಮನ್ ಪಡೆ ರೆಡಿ: ಕಮಲಿನಿಗೆ ಸಿಕ್ತು ಮೊದಲ ಅವಕಾಶ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚಿನ್ನದ ಪದಕದ ಗುರಿಯೊಂದಿಗೆ 2026ರ ಏಷ್ಯನ್ ಗೇಮ್ಸ್‌ಗೆ ಭಾರತ ಮಹಿಳಾ ಕ್ರಿಕೆಟ್ ತಂಡ ಸಜ್ಜಾಗಿದೆ. ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯಲಿರುವ ಈ ಪ್ರತಿಷ್ಠಿತ ಟೂರ್ನಿಗಾಗಿ 15 ಸದಸ್ಯರ ತಂಡವನ್ನು ಪ್ರಕಟಿಸಲಾಗಿದ್ದು, ಅನುಭವಿಗಳ ಜೊತೆಗೆ ಯುವ ಪ್ರತಿಭೆಗಳಿಗೂ ಅವಕಾಶ ನೀಡಲಾಗಿದೆ. ಹರ್ಮನ್‌ಪ್ರೀತ್ ಕೌರ್ ತಂಡವನ್ನು ಮುನ್ನಡೆಸಲಿದ್ದು, ಸ್ಮೃತಿ ಮಂಧಾನ ಉಪನಾಯಕಿಯಾಗಿ ಜವಾಬ್ದಾರಿ ನಿರ್ವಹಿಸಲಿದ್ದಾರೆ.

ಯುವ ಪ್ರತಿಭೆಗೆ ಮೊದಲ ಅವಕಾಶ

ಈ ಬಾರಿ 17 ವರ್ಷದ ವಿಕೆಟ್‌ಕೀಪರ್-ಬ್ಯಾಟರ್ ಜಿ. ಕಮಲಿನಿ ಮೊದಲ ಬಾರಿಗೆ ಏಷ್ಯನ್ ಗೇಮ್ಸ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಕಳೆದ ಟಿ20 ವಿಶ್ವಕಪ್ ವೇಳೆ ಭಾರತ ತಂಡದಲ್ಲಿದ್ದ ಯಾಸ್ತಿಕಾ ಭಾಟಿಯಾ ಅವರಿಗೆ ಈ ಬಾರಿ ಅವಕಾಶ ಸಿಗಲಿಲ್ಲ. ತಂಡದಲ್ಲಿ ಶಫಾಲಿ ವರ್ಮಾ, ಜೆಮಿಮಾ ರೋಡ್ರಿಗಸ್, ದೀಪ್ತಿ ಶರ್ಮಾ, ರಿಚಾ ಘೋಷ್, ಭಾರತಿ ಫುಲ್ಮಾಲಿ, ಶ್ರೀ ಚರಣಿ, ರೇಣುಕಾ ಠಾಕೂರ್, ಕ್ರಾಂತಿ ಗೌಡ್, ಅರುಂಧತಿ ರೆಡ್ಡಿ, ರಾಧಾ ಯಾದವ್, ನಂದಿನಿ ಶರ್ಮಾ ಹಾಗೂ ಶ್ರೇಯಾಂಕಾ ಪಾಟೀಲ್ ಸ್ಥಾನ ಪಡೆದಿದ್ದಾರೆ.

ಇದನ್ನೂ ಓದಿ:

ಶ್ರೇಯಾಂಕಾಗೆ ಫಿಟ್‌ನೆಸ್ ಪರೀಕ್ಷೆ

ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಶ್ರೇಯಾಂಕಾ ಪಾಟೀಲ್ ಅವರನ್ನು ಷರತ್ತುಬದ್ಧವಾಗಿ ತಂಡಕ್ಕೆ ಆಯ್ಕೆ ಮಾಡಲಾಗಿದೆ. ಟೂರ್ನಿ ಆರಂಭಕ್ಕೂ ಮುನ್ನ ಅವರು ಫಿಟ್‌ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕಿದ್ದು, ವಿಫಲವಾದರೆ ಅವರ ಬದಲಿಗೆ ಮತ್ತೊಬ್ಬ ಆಟಗಾರ್ತಿಗೆ ಅವಕಾಶ ನೀಡಲಾಗುತ್ತದೆ.

ಭಾರತದ ಮೊದಲ ಪಂದ್ಯ ಯಾವಾಗ?

ಏಷ್ಯನ್ ಗೇಮ್ಸ್ ಕ್ರಿಕೆಟ್ ಟೂರ್ನಿ ಸೆಪ್ಟೆಂಬರ್ 17ರಿಂದ ಅಕ್ಟೋಬರ್ 3ರವರೆಗೆ ಟಿ20 ಮಾದರಿಯಲ್ಲಿ ನಡೆಯಲಿದೆ. ಮಹಿಳಾ ವಿಭಾಗದಲ್ಲಿ ಎಂಟು ತಂಡಗಳು ಸ್ಪರ್ಧಿಸಲಿದ್ದು, ಭಾರತ ತನ್ನ ಉನ್ನತ ಶ್ರೇಯಾಂಕದ ಕಾರಣ ನೇರವಾಗಿ ಕ್ವಾರ್ಟರ್ ಫೈನಲ್‌ನಿಂದ ಅಭಿಯಾನ ಆರಂಭಿಸಲಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಕ್ವಾಲಿಫೈಯರ್ ಹಂತದಿಂದ ಬರುವ ಥಾಯ್ಲೆಂಡ್, ಮಲೇಷ್ಯಾ ಅಥವಾ ಚೀನಾ ತಂಡಗಳಲ್ಲಿ ಒಂದರ ವಿರುದ್ಧ ಭಾರತ ಮೊದಲ ಪಂದ್ಯವಾಡುವ ಸಾಧ್ಯತೆ ಇದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !