ಹೊಸದಿಗಂತ ಡಿಜಿಟಲ್ ಡೆಸ್ಕ್:
ವರ್ಷಗಳ ಕಾಲ ಫೋನ್ ಸಂಖ್ಯೆಯನ್ನೇ ಗುರುತಾಗಿ ಬಳಸುತ್ತಿದ್ದ ವಾಟ್ಸ್‌ಆ್ಯಪ್, ಇದೀಗ ‘ಯೂಸರ್‌ನೇಮ್’ (Username) ಆಧಾರಿತ ಹೊಸ ವೈಶಿಷ್ಟ್ಯವನ್ನು ಪರಿಚಯಿಸಲು ಸಜ್ಜಾಗಿದೆ. ಈ ಹೊಸ ವ್ಯವಸ್ಥೆ ಮೂಲಕ ಬಳಕೆದಾರರು ತಮ್ಮ ಮೊಬೈಲ್ ಸಂಖ್ಯೆ ಹಂಚಿಕೊಳ್ಳದೆ ಇತರರೊಂದಿಗೆ ಸಂಪರ್ಕ ಸಾಧಿಸಬಹುದಾಗಿದೆ. ಆದರೆ ಇದರ ಬೆನ್ನಿಗೇ ಈ ಹೊಸ ಫೀಚರ್ ಗೌಪ್ಯತೆ ಮತ್ತು ಡೇಟಾ ಸುರಕ್ಷತೆ ಕುರಿತು ಹೊಸ ಪ್ರಶ್ನೆಗಳನ್ನೂ ಹುಟ್ಟುಹಾಕಿದೆ!
ಹೊಸ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ಬಳಕೆದಾರರು ತಮ್ಮದೇ ಆದ ಯೂಸರ್‌ನೇಮ್ ಆಯ್ಕೆ ಮಾಡಿಕೊಳ್ಳಬಹುದು. ಇದರಿಂದ ಫೋನ್ ಸಂಖ್ಯೆ ಬಹಿರಂಗಪಡಿಸದೇ ಚಾಟ್ ಆರಂಭಿಸುವ ಅವಕಾಶ ಸಿಗಲಿದೆ. ಭಾರತದಲ್ಲಿ ಮೊಬೈಲ್ ಸಂಖ್ಯೆ ಆಧಾರ್, ಬ್ಯಾಂಕ್ ಖಾತೆ, ಯುಪಿಐ ಸೇರಿದಂತೆ ಹಲವು ಸೇವೆಗಳಿಗೆ ಲಿಂಕ್ ಆಗಿರುವುದರಿಂದ, ಈ ಬದಲಾವಣೆ ಗೌಪ್ಯತೆ ದೃಷ್ಟಿಯಿಂದ ಸಹಾಯಕವಾಗಬಹುದು ಎಂದು ಮೆಟಾ ಅಭಿಪ್ರಾಯಪಟ್ಟಿದೆ. ಆದರೆ ಇದೇ ವೇಳೆ, ವಾಟ್ಸ್‌ಆ್ಯಪ್, ಫೇಸ್‌ಬುಕ್, ಇನ್‌ಸ್ಟಾಗ್ರಾಂ ಮತ್ತು ಥ್ರೆಡ್ಸ್‌ಗಳನ್ನು ಒಂದೇ ‘ಮೆಟಾ ಅಕೌಂಟ್ ಸೆಂಟರ್’ ಅಡಿಯಲ್ಲಿ ಜೋಡಿಸುವ ಪ್ರಕ್ರಿಯೆ ಕುರಿತೂ ಚರ್ಚೆ ಆರಂಭವಾಗಿದೆ. ಇದರಿಂದ ವಿವಿಧ ವೇದಿಕೆಗಳಲ್ಲಿ ಬಳಕೆದಾರರ ಮಾಹಿತಿ ಒಂದೇ ಕೇಂದ್ರದಲ್ಲಿ ಸಂಗ್ರಹವಾಗುವ ಸಾಧ್ಯತೆ ಇದೆ ಎಂಬ ಆತಂಕ ವ್ಯಕ್ತವಾಗಿದೆ.
ತಂತ್ರಜ್ಞಾನ ತಜ್ಞರ ಅಭಿಪ್ರಾಯದಂತೆ, ಈ ವ್ಯವಸ್ಥೆಯಿಂದ ಬಳಕೆದಾರರ ಆಸಕ್ತಿ, ಖರೀದಿ ಅಭ್ಯಾಸ, ಆನ್‌ಲೈನ್ ಚಟುವಟಿಕೆಗಳು, ಜಾಹೀರಾತುಗಳ ಮೇಲಿನ ಪ್ರತಿಕ್ರಿಯೆ ಸೇರಿದಂತೆ ಹಲವು ಮಾಹಿತಿಗಳನ್ನು ಒಟ್ಟುಗೂಡಿಸಿ ವಿಶ್ಲೇಷಿಸುವುದು ಕಂಪನಿಗಳಿಗೆ ಸುಲಭವಾಗಬಹುದು. ಆದರೆ ವಾಟ್ಸ್‌ಆ್ಯಪ್ ತನ್ನ ಸಂದೇಶಗಳು ಎಂಡ್-ಟು-ಎಂಡ್ ಎನ್‌ಕ್ರಿಪ್ಷನ್ ಮೂಲಕ ಸುರಕ್ಷಿತವಾಗಿವೆ ಎಂದು ಹೇಳುತ್ತಿದ್ದರೂ, ಯಾರೊಂದಿಗೆ ಮಾತನಾಡಿದರು, ಯಾವಾಗ ಮಾತನಾಡಿದರು, ಎಷ್ಟು ಸಮಯ ಸಂಪರ್ಕದಲ್ಲಿದ್ದರು ಎಂಬ ಮೆಟಾಡೇಟಾ ಕೂಡ ವ್ಯಕ್ತಿಯ ವೈಯಕ್ತಿಕ ಮಾಹಿತಿಯನ್ನು ಅರ್ಥಮಾಡಿಕೊಳ್ಳಲು ಸಾಕಾಗಬಹುದು ಎಂದು ಗೌಪ್ಯತೆ ತಜ್ಞರು ಎಚ್ಚರಿಸಿದ್ದಾರೆ.
ಇದನ್ನೂ ಓದಿ:
ಈ ಹೊಸ ಫೀಚರ್ ಬಳಕೆದಾರರಿಗೆ ಅನುಕೂಲ ತರುವುದೇ ಅಥವಾ ಮೆಟಾದ ಡೇಟಾ ಸಂಗ್ರಹಣೆಯನ್ನು ಇನ್ನಷ್ಟು ಬಲಪಡಿಸುವುದೇ ಎಂಬ ಚರ್ಚೆ ಈಗಾಗಲೇ ಆರಂಭವಾಗಿದೆ.



