ಇತ್ತೀಚಿನ ದಿನಗಳಲ್ಲಿ ಫಿಟ್‌ನೆಸ್ ಕ್ರೇಜ್‌ನಿಂದಾಗಿ ಪ್ರೋಟೀನ್ ಯುಕ್ತ ಆಹಾರ ಹಾಗೂ ಸಪ್ಲಿಮೆಂಟ್‌ಗಳ ಬಳಕೆ ಹೆಚ್ಚಾಗಿದೆ. ಆದರೆ, “ಹೆಚ್ಚು ಪ್ರೋಟೀನ್ ತಿಂದರೆ ಕಿಡ್ನಿ ಹಾಳಾಗುತ್ತದೆಯೇ?” ಎಂಬ ಪ್ರಶ್ನೆ ಅನೇಕರನ್ನು ಕಾಡುತ್ತಿದೆ. ಇದಕ್ಕೆ ಉತ್ತರ ಇಲ್ಲಿದೆ.
ಸಾಮಾನ್ಯ ಜನರಿಗೆ ಅಪಾಯವಿದೆಯೇ?
ನಿಮ್ಮ ಕಿಡ್ನಿಗಳು ಸಂಪೂರ್ಣವಾಗಿ ಆರೋಗ್ಯವಾಗಿದ್ದರೆ, ನಿಗದಿತ ಪ್ರಮಾಣಕ್ಕಿಂತ ಸ್ವಲ್ಪ ಹೆಚ್ಚು ಪ್ರೋಟೀನ್ ಸೇವಿಸಿದರೂ ಯಾವುದೇ ತೊಂದರೆಯಾಗುವುದಿಲ್ಲ. ಕಿಡ್ನಿಗಳು ದೇಹದಲ್ಲಿನ ತ್ಯಾಜ್ಯವನ್ನು ಸುಲಭವಾಗಿ ಹೊರಹಾಕುತ್ತವೆ. ಆದರೆ, ಅತಿಯಾದರೆ ಅಮೃತವೂ ವಿಷ ಎಂಬಂತೆ ಮಿತಿ ಮೀರಿ ಸೇವಿಸುವುದು ಒಳ್ಳೆಯದಲ್ಲ.
ಯಾರಿಗೆ ಅಪಾಯ ಹೆಚ್ಚು?
ನಿಮಗೆ ಈಗಾಗಲೇ ಕಿಡ್ನಿ ಸಮಸ್ಯೆ (CKD) ಇದ್ದರೆ, ಹೆಚ್ಚು ಪ್ರೋಟೀನ್ ತಿನ್ನುವುದು ಖಂಡಿತ ಅಪಾಯಕಾರಿ. ಪ್ರೋಟೀನ್ ಜೀರ್ಣವಾದಾಗ ಉತ್ಪತ್ತಿಯಾಗುವ ‘ಯೂರಿಯಾ’ವನ್ನು ಹೊರಹಾಕಲು ಕಿಡ್ನಿಗಳು ಹೆಚ್ಚು ಶ್ರಮಪಡಬೇಕಾಗುತ್ತದೆ. ಇದು ಕಿಡ್ನಿ ವೈಫಲ್ಯಕ್ಕೆ ಕಾರಣವಾಗಬಹುದು.
ಎಷ್ಟು ಪ್ರೋಟೀನ್ ಸೇವಿಸಬೇಕು?
ಒಬ್ಬ ಸಾಮಾನ್ಯ ವ್ಯಕ್ತಿಗೆ ಅವರ ದೇಹದ ತೂಕದ ಪ್ರತಿ ಕೆಜಿಗೆ 0.8 ರಿಂದ 1 ಗ್ರಾಂ ಪ್ರೋಟೀನ್ ಅಗತ್ಯವಿರುತ್ತದೆ. ನೀವು ಜಿಮ್‌ಗೆ ಹೋಗುವವರಾಗಿದ್ದರೆ ತಜ್ಞರ ಸಲಹೆ ಮೇರೆಗೆ ಮಾತ್ರ ಪ್ರೋಟೀನ್ ಪ್ರಮಾಣವನ್ನು ಹೆಚ್ಚಿಸಿ.
ಆರೋಗ್ಯವಂತ ಕಿಡ್ನಿ ಇರುವವರಿಗೆ ಪ್ರೋಟೀನ್‌ನಿಂದ ತೊಂದರೆಯಿಲ್ಲ. ಆದರೆ, ಯಾವುದೇ ಕಿಡ್ನಿ ಸಮಸ್ಯೆ ಇದ್ದಲ್ಲಿ ವೈದ್ಯರ ಅಥವಾ ಡಯಟೀಶಿಯನ್ ಸಲಹೆ ಪಡೆದೇ ಪ್ರೋಟೀನ್ ಡಯಟ್ ಮುಂದುವರಿಸಿ.



