July 5, 2026
Sunday, July 5, 2026
spot_img

ನಾಯಿ ಕಚ್ಚಿದ ಚಪ್ಪಲಿ ಸರಿಪಡಿಸಲು ಉಡಾಫೆ ಉತ್ತರ: ಕಂಪನಿಯಿಂದಲೇ 5 ಸಾವಿರ ರೂ., ಹೊಸ ಚಪ್ಪಲಿ ವಸೂಲಿ ಮಾಡಿದ ಗ್ರಾಹಕ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇವಸ್ಥಾನಕ್ಕೆ ತೆರಳಿದ್ದ ವೇಳೆ ಬೀದಿ ನಾಯಿಯೊಂದು ಹೊಸ ಚಪ್ಪಲಿಯನ್ನು ಕಚ್ಚಿ ಹಾಳು ಮಾಡಿದ ಘಟನೆ ಗ್ರಾಹಕರೊಬ್ಬರ ಜೀವನದಲ್ಲಿ ವಿಭಿನ್ನ ತಿರುವು ತಂದಿದೆ!

ಚಪ್ಪಲಿ ಹಾಳಾಯಿತು ಎಂದು ಸುಮ್ಮನಿರ ಗ್ರಾಹಕ, ಕಂಪನಿಯ ಮಾರಾಟಾನಂತರ ಸೇವೆಯನ್ನು ಪ್ರಶ್ನಿಸಿ ನ್ಯಾಯ ವೇದಿಕೆಯ ಮೊರೆ ಹೋಗಿದ್ದಲ್ಲದೆ, ಅಂತಿಮವಾಗಿ 5,000 ರೂ. ಪರಿಹಾರ ಹಾಗೂ ಹೊಸ ಜೋಡಿ ಚಪ್ಪಲಿಯನ್ನು ವಸೂಲಿ ಮಾಡಿಕೊಂಡಿದ್ದಾರೆ.

ಈ ಘಟನೆ ಕೇರಳದ ಪಾಲಕ್ಕಾಡಿನಲ್ಲಿ ನಡೆದಿದೆ. ಸಾಮಾಜಿಕ ಕಾರ್ಯಕರ್ತ ಬೋಬನ್ ಮಟ್ಟುಮಂತ ಎಂಬವರು 2025ರ ಅಕ್ಟೋಬರ್‌ನಲ್ಲಿ ಪತ್ನಿಯೊಂದಿಗೆ ಹೊಸ ಚಪ್ಪಲಿಯನ್ನು ಖರೀದಿಸಿದ್ದರು. ಅದೇ ದಿನ ಸಂಜೆ ದೇವಸ್ಥಾನಕ್ಕೆ ತೆರಳಿದ ಅವರು, ಸಂಪ್ರದಾಯದಂತೆ ಚಪ್ಪಲಿಯನ್ನು ಹೊರಗಿಟ್ಟು ಒಳಗೆ ಹೋಗಿದ್ದರು. ಪೂಜೆ ಮುಗಿಸಿ ಬಂದಾಗ, ಬೀದಿ ನಾಯಿಯೊಂದು ಚಪ್ಪಲಿಯ ಪಟ್ಟಿಯನ್ನು ಕಚ್ಚಿ ಹಾಳು ಮಾಡಿರುವುದು ಕಂಡುಬಂದಿತ್ತು. ಮೊದಲು ಅವರು ಚಪ್ಪಲಿ ದುರಸ್ತಿಗೆ ಪ್ರಯತ್ನಿಸಿದರು. ಆದರೆ, ಅಗತ್ಯ ವಸ್ತುಗಳು ಇಲ್ಲದ ಕಾರಣ ದುರಸ್ತಿ ಸಾಧ್ಯವಾಗಲಿಲ್ಲ. ಬಳಿಕ ಅವರು ನೇರವಾಗಿ ತಯಾರಕ ಕಂಪನಿಯನ್ನು ಸಂಪರ್ಕಿಸಿ, ದುರಸ್ತಿ ವೆಚ್ಚವನ್ನು ತಾವೇ ಭರಿಸುವುದಾಗಿ ಹೇಳಿ ಚಪ್ಪಲಿಯನ್ನು ಸರಿಪಡಿಸಿಕೊಡುವಂತೆ ಕೋರಿದರು.

ಇದನ್ನೂ ಓದಿ:

ಆದರೆ ಕಂಪನಿ, ಚಪ್ಪಲಿ ಯಂತ್ರದಲ್ಲಿ ತಯಾರಾಗಿರುವುದರಿಂದ ದುರಸ್ತಿ ಅಥವಾ ಬದಲಾವಣೆ ಸಾಧ್ಯವಿಲ್ಲ ಎಂದು ಉಡಾಫೆಯಿಂದ ಉತ್ತರಿಸಿತು. ಕಂಪನಿಯ ಈ ಉಡಾಫೆ ಉತ್ತರದಿಂದ ಅಸಮಾಧಾನಗೊಂಡ ಬೋಬನ್, ಉತ್ಪನ್ನ ಮಾರಾಟವಾದ ನಂತರ ಗ್ರಾಹಕರಿಗೆ ಸೇವೆ ಒದಗಿಸುವ ಹೊಣೆಗಾರಿಕೆ ಕಂಪನಿಗಿದೆ ಎಂದು ವಾದಿಸಿ ಜಿಲ್ಲಾ ಗ್ರಾಹಕ ವಿವಾದ ಪರಿಹಾರ ಆಯೋಗದ ಮೊರೆ ಹೋದರು. ನ್ಯಾಯಾಲಯದ ಸೂಚನೆಯಂತೆ ಎರಡು ಸುತ್ತಿನ ಮಧ್ಯಸ್ಥಿಕೆ ಬಳಿಕ, ಕಂಪನಿ ರಾಜಿ ಮಾಡಿಕೊಂಡಿತು. ಅದರಂತೆ ಬೋಬನ್ ಅವರಿಗೆ 5,000 ರೂ. ಪರಿಹಾರ ನೀಡುವುದರ ಜೊತೆಗೆ 839 ರೂ. ಮೌಲ್ಯದ ಹೊಸ ಜೋಡಿ ಚಪ್ಪಲಿಯನ್ನೂ ಒದಗಿಸಲು ಒಪ್ಪಿಕೊಂಡಿದೆ!

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !