July 8, 2026
Wednesday, July 8, 2026
spot_img

ಬೆಂಗಳೂರಿನಲ್ಲಿ ಇಂದು ಬೀದಿಬದಿ ವ್ಯಾಪಾರಿಗಳಿಂದ ಬೃಹತ್‌ ಪ್ರತಿಭಟನೆ, ಬೇಡಿಕೆಗಳೇನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬೆಂಗಳೂರಿನಲ್ಲಿ ಫುಟ್‌ಪಾತ್‌ ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರಿಯುತ್ತಿದ್ದು, ಇದರ ವಿರುದ್ಧ ಬೀದಿಬದಿ ವ್ಯಾಪಾರಿಗಳು ಗರಂ ಆಗಿದ್ದಾರೆ.

ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಇಂದು ಬೀದಿಬದಿ ವ್ಯಾಪಾರಿಗಳ ಬೃಹತ್‌ ಪ್ರತಿಭಟನೆ ನಡೆಯಲಿದೆ. ಸರ್ಕಾರದ ಈ ಕ್ರಮ ಕಾನೂನುಬಾಹಿರವಾಗಿದೆ. ನಮಗೆ ಪರ್ಯಾಯ ವ್ಯವಸ್ಥೆ ಆಗುವವರೆಗೂ ವ್ಯಾಪಾರಕ್ಕೆ ಅವಕಾಶ ನೀಡಬೇಕು ಎಂದು ಬೀದಿ ಬದಿ ವ್ಯಾಪಾರಿಗಳು ಒತ್ತಾಯಿಸಿದ್ದಾರೆ.

ಬೇಡಿಕೆಗಳೇನು?

ಬೀದಿಬದಿ ವ್ಯಾಪಾರಿಗಳ ಜಂಟಿ ಹೋರಾಟ ಸಮಿತಿಯು ಸರ್ಕಾರದ ಮುಂದೆ ಪ್ರಮುಖ ಹಕ್ಕೊತ್ತಾಯಗಳನ್ನು ಮಂಡಿಸಿದ್ದು, ತಕ್ಷಣವೇ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿದೆ. ಇನ್ನು ಒಕ್ಕಲೆಬ್ಬಿಸಲಾದ ವ್ಯಾಪಾರಿಗಳಿಗೆ ತಕ್ಷಣವೇ ಅದೇ ಸ್ಥಳದಲ್ಲಿ ವ್ಯಾಪಾರ ಮುಂದುವರಿಸಲು ಅನುವು ಮಾಡಿಕೊಡಬೇಕು ಜೊತೆಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವವರೆಗೆ ರಸ್ತೆ ಬದಿಯಲ್ಲಿ ತಾತ್ಕಾಲಿಕ ವ್ಯಾಪಾರಕ್ಕೆ ಅವಕಾಶ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ.

2014ರ ಬೀದಿಬದಿ ವ್ಯಾಪಾರಿಗಳ ಕಾಯ್ದೆಯನ್ನು ರಾಜ್ಯದಲ್ಲಿ ಸಂಪೂರ್ಣವಾಗಿ ಮತ್ತು ಸಮರ್ಪಕವಾಗಿ ಜಾರಿಗೆ ತರಬೇಕು. ವ್ಯಾಪಾರಿಗಳ ಸ್ಥಳಾಂತರದ ಕುರಿತು ಅಂತಿಮ ತೀರ್ಮಾನವನ್ನು ಪಟ್ಟಣ ವ್ಯಾಪಾರ ಸಮಿತಿಯೇ ತೆಗೆದುಕೊಳ್ಳಬೇಕು. ತೆರವು ಕಾರ್ಯಾಚರಣೆ ವೇಳೆ ಜಪ್ತಿ ಮಾಡಲಾದ ಎಲ್ಲಾ ವ್ಯಾಪಾರ ಸಾಮಗ್ರಿಗಳನ್ನು ತಕ್ಷಣವೇ ಹಿಂತಿರುಗಿಸಬೇಕು ಹಾಗೂ ನಗರಾದ್ಯಂತ ಬಾಕಿ ಇರುವ ಎಲ್ಲಾ ವ್ಯಾಪಾರಿಗಳ ಸಮಗ್ರ ಸಮೀಕ್ಷೆ ನಡೆಸಿ, ಗುರುತಿನ ಚೀಟಿಗಳನ್ನು ವಿತರಿಸಬೇಕು. ಹೊಸದಾಗಿ ಸೇರ್ಪಡೆಯಾಗಿರುವ ನಾಗರಪಾಲಿಕೆ ವ್ಯಾಪ್ತಿಗಳಲ್ಲಿ ಟೌನ್ ವೆಂಡಿಂಗ್ ಸಮಿತಿಗಳನ್ನು ಸ್ಥಾಪಿಸಬೇಕು. ಸಮಿತಿಗಳಲ್ಲಿ ರಾಜಕೀಯ ಹಸ್ತಕ್ಷೇಪವಿಲ್ಲದೆ ವ್ಯಾಪಾರಿಗಳ ನೈಜ ಪ್ರತಿನಿಧಿಗಳಿಗೆ ಅವಕಾಶ ನೀಡಬೇಕು. ನಗರಾದ್ಯಂತ ಪಾದಚಾರಿ ಮಾರ್ಗಗಳನ್ನು ಅಗಲಗೊಳಿಸಿ ಪಾದಚಾರಿಗಳಿಗೂ ಹಾಗೂ ವ್ಯಾಪಾರಿಗಳಿಗೂ ಸೂಕ್ತ ಜಾಗ ಕಲ್ಪಿಸಬೇಕು ಎಂದಿದ್ದಾರೆ.

ಫುಟ್‌ಪಾತ್ ಮೇಲಿರುವ ಅಕ್ರಮ ವಾಹನ ನಿಲುಗಡೆ, ಖಾಸಗಿ ತೋಟಗಳು ಮತ್ತು ಟ್ರಾನ್ಸ್‌ಫಾರ್ಮರ್‌ಗಳನ್ನು ಮೊದಲು ತೆರವುಗೊಳಿಸಬೇಕು. ದೊಡ್ಡ ದೊಡ್ಡ ಅಂಗಡಿ ಮಾಲೀಕರು ಫುಟ್‌ಪಾತ್‌ಗಳನ್ನು ಅಕ್ರಮವಾಗಿ ಬಳಸಿಕೊಳ್ಳುತ್ತಿರುವುದನ್ನು ನಿಲ್ಲಿಸಬೇಕು. ಸರ್ಕಾರ ಹಾಗೂ ಬಿಬಿಎಂಪಿ ಅಧಿಕಾರಿಗಳು ಕೂಡಲೇ ವ್ಯಾಪಾರಿ ಸಂಘಗಳ ಪ್ರತಿನಿಧಿಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಬೇಕು. ಇಡೀ ಪ್ರಕ್ರಿಯೆಯು ಕಾನೂನಾತ್ಮಕ, ನ್ಯಾಯಯುತ ಮತ್ತು ಮಾನವೀಯತೆಯಿಂದ ಕೂಡಿರಬೇಕು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !