ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳದ ವಯನಾಡು ಜಿಲ್ಲೆಯಲ್ಲಿ ಭಾರೀ ಮಳೆ ಮತ್ತು ಭೂಕುಸಿತದಿಂದ ಉಂಟಾಗಿರುವ ಪರಿಸ್ಥಿತಿಯ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಕೇರಳ ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿ ಪರಿಸ್ಥಿತಿಯ ಮಾಹಿತಿ ಪಡೆದಿದ್ದಾರೆ.
ಸಂಕಷ್ಟದ ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರದಿಂದ ಅಗತ್ಯವಿರುವ ಎಲ್ಲಾ ರೀತಿಯ ನೆರವು ಒದಗಿಸಲಾಗುವುದು ಎಂದು ಅವರು ಈ ಸಂದರ್ಭ ಭರವಸೆ ನೀಡಿದ್ದಾರೆ.
ರಕ್ಷಣಾ ಕಾರ್ಯಾಚರಣೆ, ಪರಿಹಾರ ಶಿಬಿರಗಳ ನಿರ್ವಹಣೆ, ಸಂತ್ರಸ್ತರ ಸ್ಥಳಾಂತರ ಹಾಗೂ ಅಗತ್ಯ ತುರ್ತು ಸೇವೆಗಳ ಬಗ್ಗೆ ಕೂಡಾ ಅವರು ಚರ್ಚೆ ನಡೆಸಿದ್ದಾರೆ. ಪರಿಸ್ಥಿತಿಯನ್ನು ನಿಭಾಯಿಸಲು ಅಗತ್ಯವಿರುವ ಕೇಂದ್ರ ಸಂಸ್ಥೆಗಳ ಸಹಕಾರವನ್ನು ತಕ್ಷಣವೇ ಒದಗಿಸಲು ಕೇಂದ್ರ ಸಿದ್ಧವಾಗಿದೆ ಎಂದು ಅಮಿತ್ ಶಾ ಇದೇ ಸಂದರ್ಭ ಅವರು ಮುಖ್ಯಮಂತ್ರಿಗಳಿಗೆ ತಿಳಿಸಿದ್ದಾರೆ.
ಇದನ್ನೂ ಓದಿ:
ಭಾರೀ ಮಳೆಯಿಂದ ವಯನಾಡಿನ ಹಲವು ಪ್ರದೇಶಗಳಲ್ಲಿ ಭೂಕುಸಿತದ ಭೀತಿ ಮುಂದುವರಿದಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಸೇರಿದಂತೆ ವಿವಿಧ ರಕ್ಷಣಾ ತಂಡಗಳು ಸ್ಥಳದಲ್ಲೇ ಕಾರ್ಯನಿರ್ವಹಿಸುತ್ತಿವೆ. ಹವಾಮಾನ ಇಲಾಖೆ ಮುಂದಿನ ದಿನಗಳಲ್ಲಿಯೂ ಭಾರೀ ಮಳೆಯ ಮುನ್ಸೂಚನೆ ನೀಡಿರುವುದರಿಂದ ಸ್ಥಳೀಯ ಆಡಳಿತವನ್ನು ಹೆಚ್ಚಿನ ಎಚ್ಚರಿಕೆಯಲ್ಲಿ ಇರಿಸಲಾಗಿದೆ. ಕೇಂದ್ರ ಸರ್ಕಾರವು ರಾಜ್ಯ ಸರ್ಕಾರದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ರಕ್ಷಣಾ ಮತ್ತು ಪರಿಹಾರ ಕಾರ್ಯಗಳಿಗೆ ಅಗತ್ಯವಿರುವ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ಕೇಂದ್ರ ಗೃಹ ಸಚಿವರು ಪುನರುಚ್ಚರಿಸಿದ್ದಾರೆ.



