August 31, 2026
Monday, August 31, 2026
spot_img

ಧಾರವಾಡ ವೈದ್ಯನ ಕೊ*ಲೆ ಪ್ರಕರಣ; ಮಗನ ಮೇಲೂ ಚಾಕುವಿನಿಂದ ದಾಳಿ, ಆತ್ಮಹ*ತ್ಯೆಗೆ ಯತ್ನಿಸಿದ್ದ ಪತ್ನಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಧಾರವಾಡದಲ್ಲಿ ವೈದ್ಯ ಡಾ. ಕಿರಣ್ ಹೊನ್ನಣ್ಣವರ ಹತ್ಯೆ ಪ್ರಕರಣ ದಿನಕ್ಕೊಂದು ಹೊಸ ತಿರುವು ಪಡೆಯುತ್ತಿದೆ. ಪತ್ನಿ ಹಾಗೂ ನೇತ್ರ ತಜ್ಞೆ ಡಾ. ಪ್ರಿಯಾಂಕಾ ವಿರುದ್ಧ ಪತಿ ಹತ್ಯೆ ಮತ್ತು ಎಂಟು ವರ್ಷದ ಮಗನ ಮೇಲೂ ಚಾಕು ದಾಳಿ ನಡೆಸಿದ ಆರೋಪ ಕೇಳಿಬಂದಿದ್ದು, ತನಿಖೆಯಲ್ಲಿ ದಂಪತಿಯ ದಾಂಪತ್ಯ ಜೀವನಕ್ಕೆ ಸಂಬಂಧಿಸಿದ ಹಲವು ಅಂಶಗಳು ಬೆಳಕಿಗೆ ಬರುತ್ತಿವೆ.

ದಾಂಪತ್ಯ ಕಲಹವೇ ದುರಂತಕ್ಕೆ ಕಾರಣ?

ಬೆಳಗಾವಿ ಜಿಲ್ಲೆಯ ಸಂಕೇಶ್ವರ ಮೂಲದ ಡಾ. ಕಿರಣ್ ಮತ್ತು ವಿಜಯಪುರ ಮೂಲದ ಡಾ. ಪ್ರಿಯಾಂಕಾ ಸುಮಾರು ಒಂಬತ್ತು ವರ್ಷಗಳ ಹಿಂದೆ ಪ್ರೀತಿಸಿ ಎರಡನೇ ವಿವಾಹವಾಗಿದ್ದರು. ಆದರೆ ಕಳೆದ ಕೆಲವು ವರ್ಷಗಳಿಂದ ದಂಪತಿಯ ನಡುವೆ ಆಗಾಗ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.

ಇದನ್ನೂ ಓದಿ:

ಪತಿಯ ಕುಟುಂಬದವರೊಂದಿಗೆ ಪ್ರಿಯಾಂಕಾ ಹೆಚ್ಚು ಬೆರೆಯುತ್ತಿರಲಿಲ್ಲ ಹಾಗೂ ಕೌಟುಂಬಿಕ ಕಲಹದಿಂದ ಬೇಸತ್ತಿದ್ದ ಡಾ. ಕಿರಣ್ ಇತ್ತೀಚಿನ ದಿನಗಳಲ್ಲಿ ಮೌನವಾಗಿದ್ದರು ಎಂದು ಕುಟುಂಬದ ಆಪ್ತರು ತಿಳಿಸಿದ್ದಾರೆ. ಆದರೆ ಈ ಬಗ್ಗೆ ಅವರು ಯಾರೊಂದಿಗೂ ಬಹಿರಂಗವಾಗಿ ಮಾತನಾಡಿರಲಿಲ್ಲ ಎನ್ನಲಾಗಿದೆ.

ಮನೆಯೊಳಗಿನ ಭೀಕರ ದೃಶ್ಯ

ನಿನ್ನೆ ಬೆಳಗ್ಗೆ ಸಂಬಂಧಿಕರು ಹಲವು ಬಾರಿ ಕರೆ ಮಾಡಿದಾಗ ಪ್ರಿಯಾಂಕಾ, “ಅವರು ವಿಶ್ರಾಂತಿ ಪಡೆಯುತ್ತಿದ್ದಾರೆ, ಬಳಿಕ ಆಸ್ಪತ್ರೆಗೆ ತೆರಳಿದ್ದಾರೆ” ಎಂದು ಹೇಳಿದ್ದರು ಎನ್ನಲಾಗಿದೆ. ಅನುಮಾನಗೊಂಡ ಕುಟುಂಬಸ್ಥರು ಮನೆಗೆ ತೆರಳಿದಾಗ, ರಕ್ತದ ಮಡುವಿನಲ್ಲಿ ಡಾ. ಕಿರಣ್ ಮೃತದೇಹ ಪತ್ತೆಯಾಗಿದ್ದು, ಎಂಟು ವರ್ಷದ ಪುತ್ರ ನಿಹಿಲ್ ಗಂಭೀರವಾಗಿ ಗಾಯಗೊಂಡ ಸ್ಥಿತಿಯಲ್ಲಿ ಕಂಡುಬಂದಿದ್ದಾನೆ. ಬಾಲಕನನ್ನು ಪೊಲೀಸರು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಮುಂದುವರಿದಿದೆ. ಘಟನೆಯ ವೇಳೆ ಮನೆಯೊಳಗೆ ಪತಿ, ಪತ್ನಿ ಮತ್ತು ಪುತ್ರ ಮಾತ್ರ ಇದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗೆ ಚಿಕಿತ್ಸೆ, ತನಿಖೆ ಮುಂದುವರಿಕೆ

ಪ್ರಾಥಮಿಕ ವಿಚಾರಣೆಯಲ್ಲಿ ತಾನೇ ಕೃತ್ಯ ಎಸಗಿರುವುದಾಗಿ ಪ್ರಿಯಾಂಕಾ ಒಪ್ಪಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಘಟನೆ ಬಳಿಕ ಅವರು ಇನ್ಸುಲಿನ್ ಚುಚ್ಚಿಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ್ದರು ಹೀಗಾಗಿ ಆರೋಗ್ಯದಲ್ಲಿ ಏರುಪೇರಾಗಿದ್ದು, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಕೊಲೆಗೆ ನಿಖರ ಕಾರಣವೇನು, ಘಟನೆ ನಡೆದ ಕ್ರಮ ಹಾಗೂ ಹಿನ್ನೆಲೆಯ ಬಗ್ಗೆ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !