ಹೊಸದಿಗಂತ ವರದಿ ಬೆಳಗಾವಿ:
ಬೆಳಗಾವಿ: ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ಯುವಕನೋರ್ವನನ್ನು 11 ಜನರ ಗ್ಯಾಂಗ್ ಅತ್ಯಂತ ಭೀಕರವಾಗಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ನಡೆದಿದೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣವಾದ ಹಿಡಕಲ್ ಜಲಾಶಯದ ಬಳಿ ಈ ರಕ್ತಸಿಕ್ತ ಘಟನೆ ಸಂಭವಿಸಿದೆ. ಮೃತ ಯುವಕ, ಫಾಸ್ಕಲ್ ಹೃದಯ್ ರಾಜ್ ಮುತ್ತುಸ್ವಾಮಿ (31 ವರ್ಷ) ಮಾಣಿಕವಾಡಿ ಗ್ರಾಮ, ಗೋಕಾಕ ತಾಲೂಕಿನ ನಿವಾಸಿ ಎಂದು ತಿಳಿದು ಬಂದಿದೆ.
ಮೃತ ಫಾಸ್ಕಲ್ ತನ್ನ ಸ್ನೇಹಿತರೊಂದಿಗೆ ನಿಸರ್ಗ ಸೌಂದರ್ಯವನ್ನು ಸವಿಯಲು ಹಾಗೂ ಪಾರ್ಟಿ ಮಾಡಲು ಹಿಡಕಲ್ ಜಲಾಶಯದ ಬಳಿ ತೆರಳಿದ್ದನು. ಈ ಸಂದರ್ಭವನ್ನು ಹೊಂಚು ಹಾಕಿ ಕಾಯುತ್ತಿದ್ದ ಎದುರಾಳಿ ಗುಂಪು ಏಕಾಏಕಿ ದಾಳಿ ನಡೆಸಿದೆ. ಸುಮಾರು 11 ಜನರಿದ್ದ ಈ ರೌಡಿ ಗ್ಯಾಂಗ್ ಜಲಾಶಯದ ಬಳಿಯೇ ಫಾಸ್ಕಲ್ನನ್ನು ಅಡ್ಡಗಟ್ಟಿ, ಮಾರಕಾಸ್ತ್ರಗಳಿಂದ ಕೊಚ್ಚಿ ಸ್ಥಳದಲ್ಲೇ ಹತ್ಯೆ ಮಾಡಿ ಪರಾರಿಯಾಗಿದೆ.
ಆರೋಪಿಗಳ ವಿವರ: ದಾಳಿ ನಡೆಸಿದವರಲ್ಲಿ ಗಂಗಪ್ಪ ನಾಯಿಕ್, ರಾಹುಲ್, ನಾಗೇಶ್ ನಾಯಿಕ್, ಪ್ರಜ್ವಲ್ ಹಾಗೂ ಇನ್ನುಳಿದವರು ಶಾಮೀಲಾಗಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಇದನ್ನೂ ಓದಿ:
ಪೊಲೀಸ್ ಕಾರ್ಯಾಚರಣೆ: ಘಟನಾ ಸ್ಥಳಕ್ಕೆ ಧಾವಿಸಿದ ಯಮಕನಮರಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದಾರೆ. ಸದ್ಯ ಭರದಿಂದ ಕಾರ್ಯಾಚರಣೆ ನಡೆಸಿರುವ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಜನ ಆರೋಪಿಗಳನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ಸ್ನೇಹಿತರೊಂದಿಗೆ ಸಂತೋಷವಾಗಿ ಕಳೆಯಲು ಹೋಗಿದ್ದ ಯುವಕ ಹಳೇ ದ್ವೇಷಕ್ಕೆ ಹೆಣವಾಗಿ ಮರಳಿದ್ದು, ಆತನ ಕುಟುಂಬಸ್ಥರ ಕಣ್ಣೀರು ಮುಗಿಲು ಮುಟ್ಟಿದೆ. ಕೊಲೆಯ ಹಿಂದಿನ ಅಸಲಿ ರಹಸ್ಯ ಹಾಗೂ ಉಳಿದ ಆರೋಪಿಗಳ ಪತ್ತೆಗಾಗಿ ಯಮಕನಮರಡಿ ಪೊಲೀಸರು ಜಾಲ ಬೀಸಿದ್ದಾರೆ.



