July 16, 2026
Thursday, July 16, 2026
spot_img

ಬೆಂಗಳೂರಿಗೆ ಎಂಟ್ರಿ ಕೊಟ್ಟ ಮಳೆರಾಯ! ಕರಾವಳಿ ಜಿಲ್ಲೆಗಳಿಗೆ ಮುಂದಿನ 24 ಗಂಟೆ ಸಾಧಾರಣ ಮಳೆಯ ಮುನ್ಸೂಚನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಜುಲೈ ತಿಂಗಳಿನಲ್ಲಿ ಶತಮಾನದ ಬಳಿಕ ದಾಖಲೆಯ ತಾಪಮಾನ ಕಂಡಿದ್ದ ಸಿಲಿಕಾನ್ ಸಿಟಿ ಜನತೆಗೆ ಕೊನೆಗೂ ವರುಣದೇವ ತಂಪೆರೆದಿದ್ದಾನೆ. ನಗರದ ಹಲವೆಡೆ ಏಕಾಏಕಿ ಸುರಿದ ವರ್ಷಧಾರೆಯಿಂದಾಗಿ ಬಿಸಿಲಿನ ಬೇಗೆಯಿಂದ ಕಂಗಾಲಾಗಿದ್ದ ಜನ ನಿರಾಳರಾಗಿದ್ದಾರೆ. ಆದರೆ, ಹಠಾತ್ ಮಳೆಯಿಂದಾಗಿ ಸಾರ್ವಜನಿಕರು ಮತ್ತು ವಾಹನ ಸವಾರರು ಪರದಾಡುವಂತಾಯಿತು.

ರಾಜಧಾನಿಯ ಹಲವೆಡೆ ಜನಜೀವನ ಅಸ್ತವ್ಯಸ್ತ

ಮೆಜೆಸ್ಟಿಕ್, ಮಲ್ಲೇಶ್ವರಂ, ರಾಜಾಜಿನಗರ, ಕುರುಬರಹಳ್ಳಿ ಸೇರಿದಂತೆ ಹಲವು ಭಾಗಗಳಲ್ಲಿ ಭರ್ಜರಿ ಮಳೆಯಾಗಿದೆ. ರಸ್ತೆಗಳಲ್ಲಿದ್ದ ಸಾರ್ವಜನಿಕರು ಬಸ್ ನಿಲ್ದಾಣ ಹಾಗೂ ಅಂಡರ್‌ಪಾಸ್‌ಗಳ ಕೆಳಗೆ ಆಶ್ರಯ ಪಡೆದ ದೃಶ್ಯಗಳು ಕಂಡುಬಂದಿವೆ.

ಕರಾವಳಿ ಮತ್ತು 17 ಜಿಲ್ಲೆಗಳಿಗೆ ಮಳೆ ಮುನ್ಸೂಚನೆ

ನೈಋತ್ಯ ಮುಂಗಾರಿನ ಅಭಾವದಿಂದಾಗಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ತಾಪಮಾನ ಏರಿಕೆಯಾಗಿದ್ದರೂ, ಮುಂದಿನ ಕೆಲ ಗಂಟೆಗಳಲ್ಲಿ ಹಲವೆಡೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಗಂಟೆಗೆ 30-40 ಕಿ.ಮೀ. ವೇಗದ ಬಿರುಗಾಳಿಯೊಂದಿಗೆ ಸಾಧಾರಣ ಮಳೆಯಾಗಲಿದೆ. ಇನ್ನು, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳಲ್ಲೂ ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ.

ಇದನ್ನೂ ಓದಿ:

ದುರ್ಬಲ ಮುಂಗಾರು:

ಮುಂದಿನ ಒಂದು ವಾರದ ಕಾಲ ಕರ್ನಾಟಕದಾದ್ಯಂತ ಮುಂಗಾರು ಮಾರುತಗಳು ದುರ್ಬಲವಾಗಿರಲಿದ್ದು, ಗರಿಷ್ಠ ಉಷ್ಣಾಂಶದಲ್ಲಿ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಜೋರಾದ ಗಾಳಿಯೊಂದಿಗೆ ಹಗುರ ಮಳೆಯಾಗಲಿದ್ದರೆ, ಒಳನಾಡು ಜಿಲ್ಲೆಗಳಲ್ಲಿ ಬಿಸಿಲು ಮತ್ತು ಅಲ್ಲಲ್ಲಿ ಮೋಡ ಕವಿದ ವಾತಾವರಣ ಮುಂದುವರಿಯಲಿದೆ ಎಂದು ಇಲಾಖೆ ತಿಳಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !