ಹಲಸಿನ ಹಣ್ಣು (Jackfruit) ಸಿಹಿ ರುಚಿ ಮತ್ತು ಪರಿಮಳಕ್ಕೆ ಹೆಸರುವಾಸಿ. ಆದರೆ ಹೆಚ್ಚಿನವರು ಹಣ್ಣು ತಿಂದ ಬಳಿಕ ಅದರ ಬೀಜಗಳನ್ನು ಎವೆದುಬಿಡುತ್ತಾರೆ. ವಾಸ್ತವವಾಗಿ, ಹಲಸಿನ ಬೀಜಗಳು ಪೌಷ್ಟಿಕಾಂಶಗಳ ಭಂಡಾರವಾಗಿದ್ದು, ದೇಹಕ್ಕೆ ಅನೇಕ ರೀತಿಯಲ್ಲಿ ಪ್ರಯೋಜನಕಾರಿಯಾಗಿವೆ. ಸರಿಯಾಗಿ ಬೇಯಿಸಿ ಸೇವಿಸಿದರೆ ಇವು ಆರೋಗ್ಯಕ್ಕೆ ಉತ್ತಮ ಪೂರಕ ಆಹಾರವಾಗಬಹುದು.
ಹಲಸಿನ ಬೀಜಗಳಲ್ಲಿ ಉತ್ತಮ ಪ್ರಮಾಣದ ಆಹಾರ ನಾರು (ಫೈಬರ್) ಇರುತ್ತದೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸಿ, ಮಲಬದ್ಧತೆ ಸಮಸ್ಯೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹೊಟ್ಟೆಯನ್ನು ಹೆಚ್ಚು ಸಮಯ ತುಂಬಿರುವ ಅನುಭವ ನೀಡುವುದರಿಂದ ಅತಿಯಾಗಿ ತಿನ್ನುವ ಅಭ್ಯಾಸವನ್ನೂ ನಿಯಂತ್ರಿಸುತ್ತದೆ.
ಸಸ್ಯಾಹಾರಿಗಳಿಗೆ ಹಲಸಿನ ಬೀಜ ಉತ್ತಮ ಪ್ರೋಟೀನ್ ಮೂಲವಾಗಿದೆ. ಜೊತೆಗೆ ಕಾರ್ಬೋಹೈಡ್ರೇಟ್ಗಳೂ ಇರುವುದರಿಂದ ದೇಹಕ್ಕೆ ಅಗತ್ಯವಾದ ಶಕ್ತಿಯನ್ನು ಒದಗಿಸುತ್ತದೆ.
ಪೊಟ್ಯಾಸಿಯಂ, ಮ್ಯಾಗ್ನೀಷಿಯಂ ಮತ್ತು ಆಂಟಿಆಕ್ಸಿಡೆಂಟ್ಗಳು ಇರುವ ಕಾರಣ ರಕ್ತದೊತ್ತಡ ನಿಯಂತ್ರಣಕ್ಕೆ ನೆರವಾಗುತ್ತದೆ.
ಹಲಸಿನ ಬೀಜಗಳಲ್ಲಿ ವಿಟಮಿನ್ಗಳು ಮತ್ತು ಖನಿಜಾಂಶಗಳು ಸಮೃದ್ಧವಾಗಿದ್ದು, ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತವೆ. ಸೋಂಕುಗಳ ವಿರುದ್ಧ ದೇಹದ ಪ್ರತಿರೋಧ ಸಾಮರ್ಥ್ಯವನ್ನು ಬೆಂಬಲಿಸುತ್ತವೆ.
ಆಂಟಿಆಕ್ಸಿಡೆಂಟ್ಗಳು ಮತ್ತು ಅಗತ್ಯ ಪೋಷಕಾಂಶಗಳು ಚರ್ಮದ ಕಾಂತಿ ಕಾಪಾಡಲು ನೆರವಾಗುತ್ತವೆ. ಜೊತೆಗೆ ಕೂದಲಿನ ಆರೋಗ್ಯಕ್ಕೂ ಪೂರಕವಾಗಿದ್ದು, ಕೂದಲು ಬಲವಾಗಿ ಬೆಳೆಯಲು ಸಹಕಾರಿಯಾಗಬಹುದು.
ಹಲಸಿನ ಬೀಜಗಳಲ್ಲಿ ಕ್ಯಾಲ್ಸಿಯಂ, ಫಾಸ್ಫರಸ್ ಮತ್ತು ಮ್ಯಾಗ್ನೀಷಿಯಂ ಇರುವುದರಿಂದ ಎಲುಬುಗಳು ಮತ್ತು ಹಲ್ಲುಗಳನ್ನು ಗಟ್ಟಿಯಾಗಿಡಲು ನೆರವಾಗುತ್ತದೆ. ವಯಸ್ಸಾದವರಿಗೂ ಇದು ಉತ್ತಮ ಪೌಷ್ಟಿಕ ಆಹಾರವಾಗಬಹುದು.
ಹಲಸಿನ ಬೀಜವನ್ನು ಹೇಗೆ ಸೇವಿಸಬಹುದು?
ಹಲಸಿನ ಬೀಜಗಳನ್ನು ಚೆನ್ನಾಗಿ ತೊಳೆದು ಬೇಯಿಸಿ ಅಥವಾ ಹುರಿದು ತಿನ್ನಬಹುದು. ಸಾಂಬಾರ್, ಪಲ್ಯ, ಸಾರು, ಸೂಪ್ ಅಥವಾ ಚಟ್ನಿಯಲ್ಲೂ ಬಳಸಬಹುದು. ಕೆಲವರು ಒಣಗಿಸಿ ಪುಡಿ ಮಾಡಿ ವಿವಿಧ ಅಡುಗೆಗಳಲ್ಲಿ ಬಳಸುತ್ತಾರೆ.



