July 18, 2026
Saturday, July 18, 2026
spot_img

ಶಿವರಾತ್ರಿಯ ದಿನ ಘೋರ ದುರಂತ; 2 ತಿಂಗಳು ಕೋಮಾದಲ್ಲಿದ್ದು ಬದುಕುಳಿದ ಗಟ್ಟಿಗಿತ್ತಿ ಚೆನ್ನಮ್ಮ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಧರ್ಮಪತ್ನಿ, ಜೆಡಿಎಸ್‌ನ ಮಾತೃಶ್ರೀ ಚೆನ್ನಮ್ಮ (85) ಶನಿವಾರ ಸಂಜೆ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಅವರ ಸುದೀರ್ಘ ಜೀವನದಲ್ಲಿ ಎದುರಾಗಿದ್ದ ಭೀಕರ ಆ್ಯಸಿಡ್ ದಾಳಿ ಮತ್ತು ಅದರಿಂದ ಅವರು ಸಾವು ಗೆದ್ದು ಬಂದಿದ್ದ ಧೈರ್ಯದ ಇತಿಹಾಸ ಮತ್ತೆ ಮುನ್ನೆಲೆಗೆ ಬಂದಿದೆ. 25 ವರ್ಷಗಳ ಹಿಂದೆ ನಡೆದಿದ್ದ ಆ ಕರಾಳ ಕೃತ್ಯ ಇಡೀ ದೇಶವನ್ನೇ ನಡುಗಿಸಿತ್ತು.

ಮಹಾಶಿವರಾತ್ರಿಯ ರಾತ್ರಿ ನಡೆದಿದ್ದ ಘೋರ ದುರಂತ

ಅದು 2001ರ ಫೆಬ್ರವರಿ 21ರ ಮಹಾಶಿವರಾತ್ರಿಯ ರಾತ್ರಿ. ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಹರದನಹಳ್ಳಿ ಗ್ರಾಮದಲ್ಲಿರುವ ಐತಿಹಾಸಿಕ ಈಶ್ವರ ದೇವಸ್ಥಾನಕ್ಕೆ ದೇವೇಗೌಡರ ಕುಟುಂಬವು ವಿಶೇಷ ಪೂಜೆ ಸಲ್ಲಿಸಲು ತೆರಳಿತ್ತು. ರಾತ್ರಿ ಸುಮಾರು 8 ಗಂಟೆಯ ಸುಮಾರಿಗೆ ಪೂಜೆ ಮುಗಿಸಿಕೊಂಡು ದೇವಸ್ಥಾನದಿಂದ ಹೊರಬರುತ್ತಿದ್ದಾಗ ಚೆನ್ನಮ್ಮ ಹಾಗೂ ಅವರ ಸೊಸೆ ಭವಾನಿ ರೇವಣ್ಣ ಮೇಲೆ ಏಕಾಏಕಿ ಭೀಕರ ಆ್ಯಸಿಡ್ ಎರಚಲಾಗಿತ್ತು.

ಸತತ 2 ತಿಂಗಳು ಪ್ರಜ್ಞೆಯಿಲ್ಲದೆ ಸಾವು-ಬದುಕಿನ ಹೋರಾಟ

ಆ್ಯಸಿಡ್ ದಾಳಿಯ ತೀವ್ರತೆಗೆ ಚೆನ್ನಮ್ಮ ಅವರ ದೇಹವು ತೀವ್ರವಾಗಿ ಸುಟ್ಟುಹೋಗಿತ್ತು. ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಸತತ ಎರಡು ತಿಂಗಳುಗಳ ಕಾಲ ಅವರು ಪ್ರಜ್ಞೆಯಿಲ್ಲದೆ ಕೋಮಾ ಸ್ಥಿತಿಯಲ್ಲಿದ್ದರು. ವೈದ್ಯರೇ ಕೈಚೆಲ್ಲುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದರೂ, ತಮ್ಮ ಅಪ್ರತಿಮ ಇಚ್ಛಾಶಕ್ತಿ ಹಾಗೂ ಕುಟುಂಬಸ್ಥರ ಪ್ರಾರ್ಥನೆಯ ಫಲವಾಗಿ ಚೆನ್ನಮ್ಮ ಅವರು ಪ್ರಾಣಾಪಾಯದಿಂದ ಪಾರಾಗಿ, ಸಾವು ಗೆದ್ದು ಬಂದಿದ್ದರು.

ದಾಳಿ ಮಾಡಿದ್ದು ಸ್ವಂತ ತಮ್ಮನ ಮಗನೇ!

ಈ ಭೀಕರ ದಾಳಿಯ ಹಿಂದೆ ಯಾವುದೇ ರಾಜಕೀಯ ವ್ಯಕ್ತಿಗಳಿರಲಿಲ್ಲ, ಬದಲಿಗೆ ಕೌಟುಂಬಿಕ ಕಲಹ ಮತ್ತು ಆಸ್ತಿ ಹಗೆತನ ಕಾರಣವಾಗಿತ್ತು. ದೇವೇಗೌಡರ ಸ್ವಂತ ಸೋದರ ಬಸವೇಗೌಡರ ಮಗ ಲೋಕೇಶ್ ಎಂಬಾತನೇ ಈ ಕೃತ್ಯ ಎಸಗಿದ್ದ. ನಂತರದ ದಿನಗಳಲ್ಲಿ ನ್ಯಾಯಾಲಯವು ಈತನಿಗೆ 8 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು.

ಇದನ್ನೂ ಓದಿ;

ಅಪರಾಧಿಯನ್ನೇ ಕ್ಷಮಿಸಿದ ಉದಾರ ಮನಸ್ಸಿನ ಮಹಾತಾಯಿ

ತಮ್ಮ ಮೇಲೆ ಅಷ್ಟೊಂದು ಭೀಕರವಾಗಿ ಆ್ಯಸಿಡ್ ದಾಳಿ ನಡೆಸಿ, ಜೀವನಪರ್ಯಂತ ದೈಹಿಕ ನೋವು ಅನುಭವಿಸುವಂತೆ ಮಾಡಿದ ಸ್ವಂತ ತಮ್ಮನ ಮಗನನ್ನು ಚೆನ್ನಮ್ಮ ಕೊನೆಗೆ ಕ್ಷಮಿಸಿದ್ದರು. ತಮ್ಮನ ಕೊನೆಯ ದಿನಗಳಲ್ಲಿ ಆತನಿಗೆ ಆಸರೆಯಾಗಲಿ ಎಂಬ ಮಾನವೀಯ ದೃಷ್ಟಿಯಿಂದ ದೇವೇಗೌಡರು ಮತ್ತು ಚೆನ್ನಮ್ಮ ಲೋಕೇಶ್‌ನನ್ನು ಜೈಲಿನಿಂದ ಬಿಡಿಸಲು ಉದಾರತೆ ತೋರಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !