ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಶುಕ್ರವಾರ ಮಾರುಕಟ್ಟೆಯ ನಿರೀಕ್ಷೆಗಳನ್ನು ಮೀರಿ ಉತ್ತಮ ಸಾಧನೆ ಮಾಡಿದೆ.
ಜೂನ್ ತ್ರೈಮಾಸಿಕದಲ್ಲಿ ಕಂಪನಿಯ ಕಾರ್ಯಾಚರಣೆಯ ಆದಾಯವು ವರ್ಷದಿಂದ ವರ್ಷಕ್ಕೆ ಶೇ. 25ರಷ್ಟು ಹೆಚ್ಚಾಗಿ, ಕಳೆದ ವರ್ಷದ 2.48 ಲಕ್ಷ ಕೋಟಿ ರೂ.ಗಳಿಂದ 3.11 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. ಆರ್‌ಐಎಲ್‌ನ ಎಲ್ಲಾ ವ್ಯವಹಾರ ವಿಭಾಗಗಳು ಎರಡಂಕಿಯ ಬೆಳವಣಿಗೆಯನ್ನು ಸಾಧಿಸಿವೆ ಮತ್ತು ಈ ತ್ರೈಮಾಸಿಕದಲ್ಲಿ ಇಬಿಐಟಿಡಿಎ (EBITDA) ವರ್ಷದಿಂದ ವರ್ಷಕ್ಕೆ ಶೇ. 10ರಷ್ಟು ಹೆಚ್ಚಾಗಿ 54,067 ಕೋಟಿ ರೂ. ತಲುಪಿದೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಘರ್ಷಗಳು ಮತ್ತು ಅಸ್ಥಿರ ಸರಕು ಮಾರುಕಟ್ಟೆಯ ಹೊರತಾಗಿಯೂ, ರಿಲಯನ್ಸ್ ಇಂಡಸ್ಟ್ರೀಸ್‌ನ ವೈವಿಧ್ಯಮಯ ವ್ಯವಹಾರವು ಮತ್ತೊಮ್ಮೆ ಯಶಸ್ವಿಯಾಗಿ ಸ್ಥಿರ ಅಭಿವೃದ್ಧಿಯನ್ನು ದಾಖಲಿಸಿದೆ. ಎಲ್ಲಾ ವ್ಯವಹಾರಗಳು ಬಲವಾದ ಸಾಧನೆಯನ್ನು ಮಾಡುವ ಮೂಲಕ, ರಿಲಯನ್ಸ್ ಆರ್ಥಿಕ ವರ್ಷ 2027ಕ್ಕೆ ಉತ್ತಮ ಆರಂಭವನ್ನು ಮಾಡಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಕೇಶ್ ಅಂಬಾನಿ ಇದೇ ಸಂಧರ್ಭ ತಿಳಿಸಿದ್ದಾರೆ.
ಮೊದಲ ತ್ರೈಮಾಸಿಕದಲ್ಲಿ Depreciation ವೆಚ್ಚವು ಶೇ. 9ರಷ್ಟು ಏರಿಕೆಯಾಗಿ 15,100 ಕೋಟಿ ರೂ. ಆಗಿದೆ. ಇದಕ್ಕೆ ಮುಖ್ಯ ಕಾರಣ ಡಿಜಿಟಲ್ ಸೇವೆಗಳಲ್ಲಿ 5ಜಿ ಆಸ್ತಿಗಳ ಬಂಡವಾಳೀಕರಣ. ಹಣಕಾಸಿನ ವೆಚ್ಚವು ಶೇ. 18ರಷ್ಟು ಹೆಚ್ಚಾಗಿ 8,337 ಕೋಟಿ ರೂ. (881 ಮಿಲಿಯನ್ ಡಾಲರ್) ತಲುಪಿದೆ, ಇದು ಹೆಚ್ಚಿದ ಹೊಣೆಗಾರಿಕೆಗಳು ಮತ್ತು 5ಜಿ ಆಸ್ತಿಗಳ ಬಂಡವಾಳೀಕರಣದಿಂದಾಗಿದೆ. ರಿಲಯನ್ಸ್ ಇಂಡಸ್ಟ್ರೀಸ್ 20,946 ಕೋಟಿ ರೂ. ನಿವ್ವಳ ಲಾಭವನ್ನು ಗಳಿಸಿದೆ.
ಜೂನ್ 2026ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಬಂಡವಾಳ ವೆಚ್ಚವು 38,682 ಕೋಟಿ ರೂ. (4.1 ಬಿಲಿಯನ್ ಡಾಲರ್) ಆಗಿತ್ತು. ಕಂಪನಿಯು ತನ್ನ ಒ2ಸಿ ಮತ್ತು ಹೊಸ ಇಂಧನ ವ್ಯವಹಾರದ ಯೋಜನೆಗಳಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸುತ್ತಿದೆ ಎಂದು ತಿಳಿಸಿದೆ. ಜೊತೆಗೆ, ಗ್ರಾಹಕ ವ್ಯವಹಾರದ ಮೂಲಸೌಕರ್ಯ ಮತ್ತು ವ್ಯಾಪ್ತಿಯನ್ನು ಬಲಪಡಿಸಲು ಹೂಡಿಕೆ ಮಾಡುತ್ತಿದೆ.
ಇಂಧನ ಮಾರುಕಟ್ಟೆಯಲ್ಲಿ ಉಂಟಾದ ಭಾರಿ ಏರಿಳಿತಗಳು ಮತ್ತು ಅದಕ್ಕೆ ಸಂಬಂಧಿಸಿದ ದೊಡ್ಡ ಸವಾಲುಗಳ ಹೊರತಾಗಿಯೂ, ನಮ್ಮ ಇಂಧನ ವ್ಯವಹಾರವು ಅದ್ಭುತ ಪ್ರದರ್ಶನ ನೀಡಿದೆ. ಈ ಫಲಿತಾಂಶಗಳು ನಮ್ಮ ಬಲವಾದ ತೈಲದಿಂದ ರಾಸಾಯನಿಕ ತನಕದ ಕಾರ್ಯಾಚರಣೆಗಳನ್ನು ಮತ್ತು ಮಾರುಕಟ್ಟೆಯ ಬದಲಾಗುತ್ತಿರುವ ಸನ್ನಿವೇಶಕ್ಕೆ ಅನುಗುಣವಾಗಿ ನಾವು ವೇಗವಾಗಿ ಸ್ಪಂದಿಸುವ ಸಾಮರ್ಥ್ಯವನ್ನು ತೋರಿಸುತ್ತವೆ. ಉತ್ತಮ ಆರ್ಥಿಕ ಸಾಧನೆಯೊಂದಿಗೆ, ನಮ್ಮ ವ್ಯವಹಾರವು ಭಾರತೀಯ ಗ್ರಾಹಕರಿಗೆ ಅಗತ್ಯವಿರುವ ಇಂಧನಗಳ ತಡೆರಹಿತ ಪೂರೈಕೆಯನ್ನು ಖಚಿತಪಡಿಸಿಕೊಳ್ಳುವ ಜವಾಬ್ದಾರಿಯನ್ನು ನಿರ್ವಹಿಸಿದೆ ಎಂಬುದು ನನಗೆ ಹೆಮ್ಮೆಯ ವಿಷಯವಾಗಿದೆ. ನಾವು ‘ಹೊಸ ಇಂಧನ’ ವ್ಯವಹಾರದ ಬೆಳವಣಿಗೆಯ ಸಾಧ್ಯತೆಗಳ ಬಗ್ಗೆ ಮತ್ತು ಮುಂಬರುವ ವರ್ಷಗಳಲ್ಲಿ ಭಾರತವನ್ನು ಇಂಧನದ ವಿಷಯದಲ್ಲಿ ಸ್ವಾವಲಂಬಿಯನ್ನಾಗಿ ಮಾಡುವಲ್ಲಿ ಇದರ ಪಾತ್ರದ ಬಗ್ಗೆ ಉತ್ಸುಕರಾಗಿದ್ದೇವೆ.ʼʼ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಕಾರ್ಯನಿರ್ವಾಹಕ ನಿರ್ದೇಶಕ ಅನಂತ್ ಎಂ. ಅಂಬಾನಿ ವಿವರಿಸಿದ್ದಾರೆ.
ಜಿಯೋ ಪ್ಲಾಟ್‌ಫಾರ್ಮ್ಸ್ :
ಜಿಯೋ ಪ್ಲಾಟ್‌ಫಾರ್ಮ್ಸ್ ಮೊದಲ ತ್ರೈಮಾಸಿಕದಲ್ಲಿ 7,764 ಕೋಟಿ ರೂ. ಲಾಭ ಗಳಿಸಿದೆ. ಇಬಿಐಟಿಡಿಎ ಬೆಳವಣಿಗೆಯಾದರೂ, 5ಜಿ ಆಸ್ತಿಗಳ ಬಂಡವಾಳೀಕರಣದಿಂದಾಗಿ ಹೆಚ್ಚಿದ ಹಣಕಾಸಿನ ವೆಚ್ಚ ಮತ್ತು ಸವಕಳಿ ಶುಲ್ಕಗಳ ಕಾರಣದಿಂದ ಲಾಭವು ಶೇ. 9ರಷ್ಟು ಮಾತ್ರ ಹೆಚ್ಚಾಗಿದೆ.
ಚಂದಾದಾರರ ಮಾರುಕಟ್ಟೆ ಪಾಲು, ಎಆರ್‌ಪಿಯು ಬೆಳವಣಿಗೆ ಮತ್ತು ಡಿಜಿಟಲ್ ಸೇವೆಗಳ ವಿಸ್ತರಣೆಯಿಂದಾಗಿ ಕಾರ್ಯಾಚರಣೆಯ ಆದಾಯವು ಶೇ. 12ರಷ್ಟು ಹೆಚ್ಚಾಗಿ 39,173 ಕೋಟಿ ರೂ. ತಲುಪಿದೆ. ಬಲವಾದ ಎರಡಂಕಿಯ ಆದಾಯದ ಬೆಳವಣಿಗೆ ಮತ್ತು 150 ಬಿಪಿಎಸ್ ಮಾರ್ಜಿನ್ ವಿಸ್ತರಣೆಯಿಂದಾಗಿ ಇಬಿಐಟಿಡಿಎ ಶೇ. 15ರಷ್ಟು ಜಿಗಿತ ಕಂಡಿದೆ.
ಎಆರ್‌ಪಿಯು 215.6 ರೂ.ಗೆ ಏರಿಕೆಯಾಗಿದೆ. ಪ್ರತಿ ವ್ಯಕ್ತಿಯ ಡೇಟಾ ಬಳಕೆಯು ತಿಂಗಳಿಗೆ 43.7 ಜಿಬಿಯಷ್ಟಿದ್ದು, ಒಟ್ಟು ಡೇಟಾ ಟ್ರಾಫಿಕ್ ಶೇ. 27ರಷ್ಟು ಬೆಳವಣಿಗೆ ಕಂಡಿದೆ. ಮಾಸಿಕ ಚರ್ನ್ ದರವು ಶೇ. 1.6ಕ್ಕೆ ಸುಧಾರಿಸಿದ್ದು, ತ್ರೈಮಾಸಿಕದಲ್ಲಿ 8.9 ಮಿಲಿಯನ್ ಹೊಸ ಚಂದಾದಾರರು ಸೇರ್ಪಡೆಯಾಗಿದ್ದಾರೆ.
ಜಿಯೋ ತನ್ನನ್ನು ತಾನೇ ‘ಡೀಪ್-ಟೆಕ್’ ಕಂಪನಿಯಾಗಿ ಸ್ಥಾಪಿಸಿಕೊಂಡಿದೆ ಮತ್ತು ಹಲವು ಸುಧಾರಿತ ತಂತ್ರಜ್ಞಾನಗಳಲ್ಲಿ ವೇಗವಾಗಿ ಹೊಸತನವನ್ನು (ಇನ್ನೋವೇಶನ್) ತಂದಿದೆ. ಈ ತಂತ್ರಜ್ಞಾನಗಳ ಮೂಲಕ ಭಾರತದ ಪ್ರತಿಯೊಬ್ಬ ನಾಗರಿಕರನ್ನೂ ನಿರಂತರವಾಗಿ ಹೊಸ ಡಿಜಿಟಲ್ ಸೇವೆಗಳು ತಲುಪಬೇಕೆಂಬುದು ನಮ್ಮ ಉದ್ದೇಶ. ಅಲ್ಲದೆ, ಜಿಯೋ ಮುಂದಿನ ಹಲವು ವರ್ಷಗಳವರೆಗೆ ಉದ್ಯಮದಲ್ಲಿ ಅಗ್ರಗಣ್ಯ ಬೆಳವಣಿಗೆಯನ್ನು ಸಾಧಿಸಲಿದೆ. ನಾವು ನಮ್ಮ ‘ಡೀಪ್-ಟೆಕ್’ ಪ್ರಗತಿಯನ್ನು ಮುಂದುವರಿಸುತ್ತೇವೆ. ಜತೆಗೆ ಭಾರತ ಸೇರಿದಂತೆ ಜಾಗತಿಕ ಮಟ್ಟದಲ್ಲಿ ಡಿಜಿಟಲ್ ಸಂಪರ್ಕ ಮತ್ತು ಡಿಜಿಟಲ್ ಸೇವೆಗಳ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತಾರಗೊಳಿಸಿ, ಅವುಗಳನ್ನು ಎಲ್ಲರಿಗೂ ಸುಲಭವಾಗಿ ದೊರೆಯುವಂತೆ ಮಾಡುತ್ತೇವೆʼʼ ಎಂದು ಜಿಯೋ ಪ್ಲಾಟ್‌ಫಾರ್ಮ್ಸ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಆಕಾಶ್ ಎಂ. ಅಂಬಾನಿ ವಿವರಿಸಿದ್ದಾರೆ.
ರಿಲಯನ್ಸ್ ರಿಟೇಲ್ :
ರಿಲಯನ್ಸ್ ರಿಟೇಲ್ 2,806 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಆದಾಯ ಶೇ. 7ರಷ್ಟು ಏರಿಕೆಯಾಗಿ 90,408 ಕೋಟಿ ರೂ. ಗೆ ಏರಿಕೆಯಾಗಿದೆ. ದಿನಸಿ, ಫ್ಯಾಷನ್ ಮತ್ತು ಜೀವನಶೈಲಿ, ಮತ್ತು ಗ್ರಾಹಕ ಎಲೆಕ್ಟ್ರಾನಿಕ್ಸ್ ವಿಭಾಗಗಳಲ್ಲಿ ಉತ್ತಮ ಬೆಳವಣಿಗೆ ಕಂಡುಬಂದಿದೆ.
ರಿಲಯನ್ಸ್ ರಿಟೇಲ್ 2026-27 ರ ಮೊದಲ ತ್ರೈಮಾಸಿಕದಲ್ಲಿ ಅದ್ಭುತ ಪ್ರದರ್ಶನ ನೀಡಿದೆ ಮತ್ತು ಪ್ರಮುಖ ಗ್ರಾಹಕ ವಿಭಾಗಗಳಲ್ಲಿ ಬೆಳವಣಿಗೆಯನ್ನು ಸಾಧಿಸಿದೆ. ಡಿಜಿಟಲ್ ಕಾಮರ್ಸ್‌ನಲ್ಲಿನ ನಮ್ಮ ನಿರಂತರ ಹೂಡಿಕೆಯು ನಮ್ಮ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ಪರಿವರ್ತನಾಶೀಲ ಶಕ್ತಿಯನ್ನು ಪ್ರದರ್ಶಿಸುತ್ತದೆ. ಹೆಚ್ಚುತ್ತಿರುವ ಗ್ರಾಹಕರ ಸಂಖ್ಯೆ, ಅತಿದೊಡ್ಡ ಮಳಿಗೆಗಳ ಜಾಲಗಳೊಂದಿಗೆ ನಾವು ಪ್ರತಿಯೊಬ್ಬ ಭಾರತೀಯನ ಪ್ರತಿ ಅಗತ್ಯವನ್ನೂ ಮತ್ತು ಕನಸನ್ನೂ ಪ್ರತಿದಿನ ಈಡೇರಿಸುವ ಸ್ಥಿತಿಯಲ್ಲಿದ್ದೇವೆ” ಎಂದು ರಿಲಯನ್ಸ್ ರಿಟೇಲ್ ವೆಂಚರ್ಸ್ ಲಿಮಿಟೆಡ್‌ನ ಕಾರ್ಯನಿರ್ವಾಹಕ ನಿರ್ದೇಶಕಿ ಇಶಾ ಎಂ. ಅಂಬಾನಿ ಹೇಳಿದ್ದಾರೆ.
ಜಿಯೋಸ್ಟಾರ್ :
ಜಿಯೋಸ್ಟಾರ್ ಇಬಿಐಟಿಡಿಎ ಶೇ. 31ರಷ್ಟು ಬೆಳವಣಿಗೆ ಸಾಧಿಸಿದೆ. ಜಿಯೋಹಾಟ್‌ಸ್ಟಾರ್ ಸರಾಸರಿ 530 ದಶಲಕ್ಷ ಮಾಸಿಕ ಸಕ್ರಿಯ ಬಳಕೆದಾರರನ್ನು ಹೊಂದಿದ್ದು, ಇದು ಸಾರ್ವಕಾಲಿಕ ದಾಖಲೆಯಾಗಿದೆ. ಐಪಿಎಲ್ 2026 ಡಿಜಿಟಲ್ ಮತ್ತು ಲೀನಿಯರ್ ಟಿವಿಯಲ್ಲಿ 1.2 ಬಿಲಿಯನ್ ಜನರನ್ನು ತಲುಪಿ ಅತಿದೊಡ್ಡ ಟಿ20 ಈವೆಂಟ್ ಎನಿಸಿಕೊಂಡಿದೆ.
ಇದನ್ನೂ ಓದಿ:
ತೈಲದಿಂದ ರಾಸಾಯನಿಕ ತನಕ ವ್ಯವಹಾರ
ಕಚ್ಚಾ ತೈಲ ಬೆಲೆ ಶೇ. 54.1ರಷ್ಟು ಹೆಚ್ಚಾದ ಕಾರಣ, ಒ2ಸಿ ವ್ಯವಹಾರದ ಆದಾಯವು ಶೇ. 30ರಷ್ಟು ಏರಿಕೆಯಾಗಿ 2.01 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. ಇಬಿಐಟಿಡಿಎ ಶೇ. 17ರಷ್ಟು ಹೆಚ್ಚಾಗಿ 17,010 ಕೋಟಿ ರೂ. ವೃದ್ಧಿಸಿದೆ.



