November 2, 2026
Monday, November 2, 2026
spot_img

ಕಬ್ಬು ಬೆಲೆ ಸಮರ ತೀವ್ರ: ಗುರ್ಲಾಪುರದಿಂದ ಹಿಂಡಲಗಾ ಜೈಲಿಗೆ ‘ಜೈಲ್ ಚಲೋ’

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಕಬ್ಬಿಗೆ ನ್ಯಾಯಯುತ ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿ ಗುರ್ಲಾಪುರ ಕ್ರಾಸ್‌ನಲ್ಲಿ ನಡೆಯುತ್ತಿರುವ ರೈತರ ಹೋರಾಟ ಮತ್ತಷ್ಟು ತೀವ್ರಗೊಂಡಿದೆ. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ನೇತೃತ್ವದಲ್ಲಿ ಸೋಮವಾರ ರೈತರು ‘ಜೈಲ್ ಚಲೋ’ ಚಳವಳಿ ಆರಂಭಿಸಿ, ಗುರ್ಲಾಪುರದಿಂದ ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹದತ್ತ ರ‍್ಯಾಲಿ ನಡೆಸಿದರು.

ರಾಜ್ಯಾಧ್ಯಕ್ಷ ಚೂನಪ್ಪ ಪೂಜೇರಿ ಹಾಗೂ ಗೌರವಾಧ್ಯಕ್ಷ ಶಶಿಕಾಂತ ಗುರೂಜಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ನೂರಾರು ರೈತರು ಪಾಲ್ಗೊಂಡು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಹಿಂಡಲಗಾ ಜೈಲಿನ ಮುಂಭಾಗದಲ್ಲಿ ಮುತ್ತಿಗೆ ಹಾಕಿ ಬೃಹತ್ ಪ್ರತಿಭಟನೆ ನಡೆಸುವ ಮೂಲಕ ತಮ್ಮ ಬೇಡಿಕೆಗಳತ್ತ ಸರ್ಕಾರದ ಗಮನ ಸೆಳೆಯಲು ಪ್ರಯತ್ನಿಸಿದರು.

ಟನ್ ಕಬ್ಬಿಗೆ 5,500 ನೀಡಲು ಒತ್ತಾಯ

ಕಬ್ಬು ಬೆಳೆಯಲು ಬೀಜ, ಗೊಬ್ಬರ, ಔಷಧ, ಕಾರ್ಮಿಕರ ಕೂಲಿ, ನೀರಾವರಿ ಹಾಗೂ ಸಾಗಾಟದ ವೆಚ್ಚಗಳು ಗಣನೀಯವಾಗಿ ಹೆಚ್ಚಾಗಿವೆ. ಆದರೆ ರೈತರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿ ಟನ್ ಕಬ್ಬಿಗೆ ಸಕ್ಕರೆ ಕಾರ್ಖಾನೆ ಮಾಲೀಕರು 4,500 ಪಾವತಿಸಬೇಕು. ಇದರ ಜೊತೆಗೆ ರಾಜ್ಯ ಸರ್ಕಾರ 1,000 ಪ್ರೋತ್ಸಾಹಧನ ನೀಡಬೇಕು. ಒಟ್ಟಾರೆ 5,500 ಬೆಲೆ ನಿಗದಿಪಡಿಸಬೇಕು ಎಂಬುದು ರೈತರ ಪ್ರಮುಖ ಬೇಡಿಕೆಯಾಗಿದೆ.

ಇದನ್ನೂ ಓದಿ:

ಬೇಡಿಕೆ ಈಡೇರದಿದ್ದರೆ ಹೋರಾಟ ಮುಂದುವರಿಕೆ

ಗುರ್ಲಾಪುರದಲ್ಲಿ ಹಲವು ದಿನಗಳಿಂದ ಧರಣಿ ನಡೆಸುತ್ತಿದ್ದರೂ ಸಮರ್ಪಕ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ಜೈಲ್ ಚಲೋಗೆ ಕರೆ ನೀಡಲಾಗಿದೆ ಎಂದು ಚೂನಪ್ಪ ಪೂಜೇರಿ ತಿಳಿಸಿದ್ದಾರೆ. ರೈತರ ಹಕ್ಕುಗಳಿಗೆ ನ್ಯಾಯ ಸಿಗದಿದ್ದರೆ ಜೈಲು ಸೇರಲೂ ಸಿದ್ಧರಿದ್ದೇವೆ, ಆದರೆ ಬೇಡಿಕೆ ಈಡೇರುವವರೆಗೂ ಹೋರಾಟ ನಿಲ್ಲುವುದಿಲ್ಲ ಎಂದು ಎಚ್ಚರಿಸಿದ್ದಾರೆ.

ರೈತರ ಹೋರಾಟಕ್ಕೆ ಸಾರ್ವಜನಿಕರ ಬೆಂಬಲ

ಪ್ರತಿಭಟನೆಗೆ ಸಾರ್ವಜನಿಕರು ಬೆಂಬಲ ಸೂಚಿಸುತ್ತಿದ್ದು, ಹಣಕಾಸಿನ ನೆರವು, ರೊಟ್ಟಿ ಹಾಗೂ ದವಸಧಾನ್ಯಗಳನ್ನು ಒದಗಿಸುತ್ತಿದ್ದಾರೆ. ಇದರಿಂದ ಹೋರಾಟಗಾರರಿಗೆ ಮತ್ತಷ್ಟು ಬಲ ಬಂದಿದೆ ಎಂದು ರೈತ ಮುಖಂಡರು ತಿಳಿಸಿದ್ದಾರೆ.

Must Read