ಹೊಸದಿಗಂತ ವರದಿ ಬೀದರ್:
ಬೀದರ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ (ಪಿ.ಡಿ.) ಹೆಚ್ಚುವರಿ ಪ್ರಭಾರದಲ್ಲಿರುವ ಸೂರ್ಯಕಾಂತ್ ಬಿರಾದಾರ್ ಅವರು ಭ್ರಷ್ಟಾಚಾರ, ಕರ್ತವ್ಯಲೋಪ, ಅಧಿಕಾರ ದುರುಪಯೋಗ ಹಾಗೂ ಸಿಬ್ಬಂದಿಗಳ ಮೇಲೆ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ, ಅವರನ್ನು ತಕ್ಷಣ ಅಮಾನತುಗೊಳಿಸಿ ಎಸ್‌ಐಟಿ ತನಿಖೆ ನಡೆಸುವಂತೆ ವಿಶ್ವಕ್ರಾಂತಿ ದಿವ್ಯಪೀಠದ ಅಧ್ಯಕ್ಷ ಓಂಪ್ರಕಾಶ್ ರೊಟ್ಟೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಸೂರ್ಯಕಾಂತ್ ಬಿರಾದಾರ್ ಅವರು ಮೂಲತಃ ಕೃಷಿ ಇಲಾಖೆಯ ಉಪನಿರ್ದೇಶಕರಾಗಿದ್ದು, ಬರಗಾಲದಂತಹ ಪರಿಸ್ಥಿತಿಯಲ್ಲಿ ಕೃಷಿ ಇಲಾಖೆಯಲ್ಲಿ ಅಧಿಕಾರಿಗಳ ಅವಶ್ಯಕತೆ ಇದ್ದರೂ ಹೆಚ್ಚುವರಿ ಪ್ರಭಾರ ವಹಿಸಿಕೊಂಡು ಜಿಲ್ಲಾ ಪಂಚಾಯತ್‌ನಲ್ಲಿಯೇ ಕಾರ್ಯನಿರ್ವಹಿಸುತ್ತಿದ್ದಾರೆ. ಅವರನ್ನು ಕೂಡಲೇ ಮೂಲ ಇಲಾಖೆಗೆ ವಾಪಸ್ ಕಳುಹಿಸಬೇಕು ಎಂದು ಒತ್ತಾಯಿಸಿದರು.
ಈ ಹಿಂದೆ ಜಿಲ್ಲಾ ಪಂಚಾಯತ್‌ನಲ್ಲಿ ಸೇವೆ ಸಲ್ಲಿಸಿದ್ದ ಸಂದರ್ಭದಲ್ಲಿಯೂ ಅವರ ವಿರುದ್ಧ ಸಿಬ್ಬಂದಿಗಳೊಂದಿಗೆ ದೌರ್ಜನ್ಯ ನಡೆಸಿದ ಆರೋಪಗಳಿದ್ದವು. ಈಗಲೂ ಸಿಬ್ಬಂದಿಗಳ ಮೇಲೆ ಒತ್ತಡ ಹೇರುತ್ತಿದ್ದು, ಉಸ್ತುವಾರಿ ಸಚಿವರು ಅವರನ್ನು ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ:
ಜಿಲ್ಲಾ ಪಂಚಾಯತ್‌ನ ಉದ್ಯೋಗ ಖಾತ್ರಿ ಯೋಜನೆಯಡಿ ತಾಂತ್ರಿಕ ಸಹಾಯಕರ ನೇಮಕಾತಿಯಲ್ಲಿ ಹಾಗೂ ಎನ್‌ಆರ್‌ಎಲ್‌ಎಂ ಯೋಜನೆಯ ಹೊರಗುತ್ತಿಗೆ ಸಂಸ್ಥೆ ಆಯ್ಕೆ ಪ್ರಕ್ರಿಯೆಯಲ್ಲಿ ಭಾರಿ ಪ್ರಮಾಣದ ಅಕ್ರಮ ನಡೆದಿದೆ ಎಂದು ಆರೋಪಿಸಿದರು. ಟೆಂಡರ್‌ನಲ್ಲಿ ಎಲ್-1 ಅರ್ಹತೆ ಪಡೆದ ಸಂಸ್ಥೆಗೆ ಅವಕಾಶ ನೀಡದೆ, ನಿಯಮ ಉಲ್ಲಂಘಿಸಿ ಬೇರೆ ಸಂಸ್ಥೆಗೆ ಗುತ್ತಿಗೆ ನೀಡಲಾಗಿದೆ ಎಂದು ದೂರಿದರು.
ಜಿಲ್ಲಾ ಪಂಚಾಯತ್ ಸಿಬ್ಬಂದಿಗಳೊಂದಿಗೆ ಅಸಭ್ಯವಾಗಿ ವರ್ತಿಸುವುದು, ಮಹಿಳಾ ಸಿಬ್ಬಂದಿಗೆ ಮಾನಸಿಕ ಕಿರುಕುಳ ನೀಡುವುದು, ರಾತ್ರಿ ವೇಳೆ ವಾಟ್ಸಾಪ್ ಸಂದೇಶಗಳನ್ನು ಕಳುಹಿಸುವುದು ಸೇರಿದಂತೆ ಹಲವು ಆರೋಪಗಳನ್ನು ಮಾಡಿರುವ ಅವರು, ಸಂಬಂಧಿತ ಮೊಬೈಲ್ ಕರೆಗಳು ಹಾಗೂ ವಾಟ್ಸಾಪ್ ಸಂದೇಶಗಳ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ದಿಶಾ ಸಭೆಗಳ ವೆಚ್ಚದಲ್ಲಿ ಬೋಗಸ್ ಬಿಲ್‌ಗಳ ಮೂಲಕ ಹಣ ದುರುಪಯೋಗ, ಉದ್ಯೋಗ ಖಾತ್ರಿ ಹಾಗೂ ಎನ್‌ಆರ್‌ಎಲ್‌ಎಂ ಯೋಜನೆಗಳಲ್ಲಿ ಅಕ್ರಮ, ಭ್ರಷ್ಟ ನೌಕರರ ವಿರುದ್ಧ ಕ್ರಮ ಕೈಗೊಳ್ಳದೆ ಅವರನ್ನು ರಕ್ಷಿಸುವ ಕೆಲಸ ನಡೆಯುತ್ತಿದೆ ಎಂದು ಅವರು ಆರೋಪಿಸಿದರು.
ಲೋಕಸಭಾ ಸದಸ್ಯರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಹೆಸರನ್ನು ಬಳಸಿಕೊಂಡು ಸಿಬ್ಬಂದಿಗಳ ಮೇಲೆ ಒತ್ತಡ ಹೇರುತ್ತಿರುವ ಪ್ರಕರಣಗಳೂ ಬೆಳಕಿಗೆ ಬಂದಿದ್ದು, ಈ ಕುರಿತು ಜನಪ್ರತಿನಿಧಿಗಳು ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದರು.
ಈ ಎಲ್ಲಾ ಆರೋಪಗಳ ಕುರಿತು ಎಸ್‌ಐಟಿ ಮೂಲಕ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಲಾಗುವುದು ಎಂದು ಓಂಪ್ರಕಾಶ್ ರೊಟ್ಟೆ ಎಚ್ಚರಿಸಿದರು.



