ಹೊಸದಿಗಂತ ವರದಿ ದಾವಣಗೆರೆ:
ಮರು ಮರಣೋತ್ತರ ಪರೀಕ್ಷೆಗಾಗಿ ಮೂರು ತಿಂಗಳ ಹಿಂದೆ ಮೃತಪಟ್ಟಿದ್ದ ತಾಯಿಯ ಶವವನ್ನು ಮಕ್ಕಳು ಬೈಕ್ ನಲ್ಲಿ ಜಿಲ್ಲಾಸ್ಪತ್ರೆಗೆ ತರುವ ವೇಳೆ ಅಪಘಾತ ಸಂಭವಿಸಿರುವ ವಿಚಿತ್ರ ಘಟನೆ ವರದಿಯಾಗಿದೆ.
ಜಿಲ್ಲೆಯ ಹರಿಹರ ತಾಲೂಕು ಆದಾಪುರ ಗ್ರಾಮದಲ್ಲಿ ಕಳೆದ ಏಪ್ರಿಲ್ 29ರಂದು ಈರಮ್ಮ ಎಂಬ ಮಹಿಳೆ ಅನುಮಾನಸ್ಪದವಾಗಿ ಸಾವನ್ನಪ್ಪಿದ್ದರು. ತಾಯಿಯ ಸಾವಿಗೆ ಅಕ್ಕಪಕ್ಕದ ನಿವಾಸಿಗಳ ಮೇಲೆ ಅನುಮಾನ ವ್ಯಕ್ತಪಡಿಸಿ, ಮಕ್ಕಳಾದ ಮಂಜುನಾಥ, ವೆಂಕಟೇಶ್ 11 ಜನರ ವಿರುದ್ಧ ಮಲೇಬೆನ್ನೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಮಲೇಬೆನ್ನೂರು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಯ ನಂತರ ಮೃತದೇಹದ ಅಂತ್ಯಕ್ರಿಯೆ ಮಾಡಲಾಗಿತ್ತು.
ಇದನ್ನೂ ಓದಿ:
ಪೊಲೀಸ್ ತನಿಖೆಯಿಂದ ತೃಪ್ತರಾಗದ ಅಣ್ಣ-ತಮ್ಮಂದಿರು ಕಳೆದ ರಾತ್ರಿ ಸಮಾಧಿ ಅಗೆದು ತಾಯಿಯ ಶವ ಹೊರತೆಗೆದಿದ್ದಾರೆ. ರಾತ್ರೋರಾತ್ರಿ ತಾಯಿಯ ಮೃತದೇಹವನ್ನು ಬೆಡ್ ಶೀಟ್ ನಲ್ಲಿ ಸುತ್ತಿಕೊಂಡು ಬೈಕ್ ನಲ್ಲಿ ಮರು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ತರುವ ವೇಳೆ ದಾವಣಗೆರೆ ಹೊರವಲಯದಲ್ಲಿ ಅಪಘಾತವಾಗಿದೆ.
ವಿಷಯ ತಿಳಿದ ಸ್ಥಳೀಯ ಪೊಲೀಸರು ಅಪಘಾತ ಸ್ಥಳಕ್ಕೆ ಭೇಟಿ ನೀಡಿ ಶವವನ್ನು ದಾವಣಗೆರೆ ಜಿಲ್ಲಾಸ್ಪತ್ರೆಗೆ ತಂದಿದ್ದಾರೆ. ಸಧ್ಯ ತಾಯಿಯ ಮೃತದೇಹವನ್ನು ದಾವಣಗೆರೆ ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ. ತಾಯಿಯ ಕೊಲೆ ಪ್ರಕರಣವನ್ನು ಮಲೇಬೆನ್ನೂರು ಪೊಲೀಸರು ಮುಚ್ಚಿ ಹಾಕಲು ಯತ್ನಿಸಿದ್ದಾರೆ. ಮರು ಮರಣೋತ್ತರ ಪರೀಕ್ಷೆ ನಡೆಸಿ ಸೂಕ್ತ ತನಿಖೆ ಮೂಲಕ ತಮಗೆ ನ್ಯಾಯ ಒದಗಿಸಬೇಕೆಂದು ಮಕ್ಕಳಾದ ಮಂಜುನಾಥ, ವೆಂಕಟೇಶ್ ಒತ್ತಾಯಿಸಿದ್ದಾರೆ.



