July 22, 2026
Wednesday, July 22, 2026
spot_img

IMF ಬೆಂಬಲವಿದ್ದರೂ ಮುಗಿಯದ ಸಂಕಷ್ಟ: ಅಮೆರಿಕ ಖಜಾನೆ ಬಾಗಿಲು ತಟ್ಟಿದ ಪಾಕಿಸ್ತಾನ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ತೀವ್ರ ಹಣಕಾಸಿನ ಅಭಾವದಿಂದ ಕಂಗೆಟ್ಟಿರುವ ಪಾಕಿಸ್ತಾನ ಸರ್ಕಾರವು ತನ್ನ ಆರ್ಥಿಕತೆಯನ್ನು ಸರಿದೂಗಿಸಲು ಅಮೆರಿಕದ ಮುಂದೆ 10 ಬಿಲಿಯನ್‌ (ಸುಮಾರು ₹85,000 ಕೋಟಿಗೂ ಹೆಚ್ಚು) ತುರ್ತು ಸಾಲದ ನೆರವು ಕೋರಿದೆ. ಅಂತರರಾಷ್ಟ್ರೀಯ ಹಣಕಾಸು ನಿಧಿ (IMF) ವತಿಯಿಂದ ಈಗಾಗಲೇ ಜಾರಿಯಲ್ಲಿರುವ ಬೇಲ್‌ಔಟ್ ಕಾರ್ಯಕ್ರಮದ ಹೊರತಾಗಿಯೂ, ದೇಶವು ಇತ್ತೀಚಿನ ದಶಕಗಳಲ್ಲೇ ಕಾಣದ ಅತಿ ದೊಡ್ಡ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿದೆ.

ಅಮೆರಿಕ ಖಜಾನೆಗೆ ಹೊಸ ಅರ್ಜಿ

ವಾಷಿಂಗ್ಟನ್‌ನಲ್ಲಿ ನಡೆದ ಉನ್ನತ ಮಟ್ಟದ ಭೇಟಿಯಲ್ಲಿ ಪಾಕಿಸ್ತಾನದ ನಿಯೋಗವು ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಅವರಿಗೆ ಈ ಕುರಿತು ಪ್ರಸ್ತಾವನೆ ರವಾನಿಸಿದೆ. ಐದು ವರ್ಷಗಳ ಅವಧಿಗೆ ‘ದ್ವಿಪಕ್ಷೀಯ ವಿನಿಮಯ ಸ್ಥಿರೀಕರಣ ಬೆಂಬಲ ಸೌಲಭ್ಯ’ದ ಅಡಿಯಲ್ಲಿ ಈ ಬೃಹತ್ ಹಣಕಾಸು ನೆರವು ಒದಗಿಸುವಂತೆ ವಿನಂತಿಸಲಾಗಿದೆ.

ರಾಜತಾಂತ್ರಿಕ ಸಂಬಂಧದ ಬಳಕೆಗೆ ತಂತ್ರ

ಇತ್ತೀಚೆಗೆ ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನ ವಾತಾವರಣದ ಸಮಯದಲ್ಲಿ ಪಾಕಿಸ್ತಾನವು ಮಧ್ಯಸ್ಥಿಕೆ ವಹಿಸಿತ್ತು. ಈ ರಾಜತಾಂತ್ರಿಕ ಬೆಳವಣಿಗೆಯು ಜಾಗತಿಕ ಮಟ್ಟದಲ್ಲಿ ತನ್ನ ಇಮೇಜ್ ಹೆಚ್ಚಿಸಿದೆ ಎಂದು ಭಾವಿಸಿರುವ ಪಾಕಿಸ್ತಾನ, ಇದನ್ನೇ ನೆಪವಾಗಿಟ್ಟುಕೊಂಡು ವಾಷಿಂಗ್ಟನ್‌ನಿಂದ ಆರ್ಥಿಕ ಲಾಭ ಪಡೆದುಕೊಳ್ಳಲು ಮುಂದಾಗಿದೆ.

ಆರ್ಥಿಕತೆಗೆ ದೊರೆಯುವುದೇ ಆಸರೆ?

ಒಂದು ವೇಳೆ ಈ ಪ್ರಸ್ತಾವನೆಗೆ ಅಮೆರಿಕ ಒಪ್ಪಿಗೆ ಸೂಚಿಸಿದರೆ, ನಗದು ಕೊರತೆಯಿಂದ ಬಳಲುತ್ತಿರುವ ಪಾಕಿಸ್ತಾನಕ್ಕೆ ದೊಡ್ಡ ರಿಲೀಫ್ ಸಿಗಲಿದೆ. ಇದು ವಿದೇಶಿ ವಿನಿಮಯ ಮೀಸಲನ್ನು ಬಲಪಡಿಸುವುದಲ್ಲದೆ, ಪಾಕಿಸ್ತಾನಿ ರೂಪಾಯಿಯ ಮೌಲ್ಯ ಕುಸಿತಕ್ಕೆ ತಡೆ ನೀಡಲಿದೆ. ಜೊತೆಗೆ ಬಹುಪಕ್ಷೀಯ ಸಾಲ ನೀಡಿಕೆ ಸಂಸ್ಥೆಗಳ ಮೇಲಿನ ಅತಿಯಾದ ಅವಲಂಬನೆಯನ್ನೂ ಕಡಿಮೆ ಮಾಡಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !