October 8, 2026
Thursday, October 8, 2026
spot_img

ಸೋಷಿಯಲ್ ಮೀಡಿಯಾದಲ್ಲಿ ‘ಮುಕ್ಬಾಂಗ್’ ‘ರಾಕ್ ಪೇಪರ್ ಸಿಸರ್ಸ್’ ಕ್ರೇಜ್: ವೈರಲ್ ವೀಡಿಯೊಗಳ ಕಹಿ ಸತ್ಯ ನಿಮಗೊತ್ತಾ?

ಮೇಘಾ, ಬೆಂಗಳೂರು

ಸಾಮಾಜಿಕ ಜಾಲತಾಣಗಳಾದ ಯೂಟ್ಯೂಬ್, ಇನ್‌ಸ್ಟಾಗ್ರಾಮ್ ಮತ್ತು ಇತರೆ ವೇದಿಕೆಗಳಲ್ಲಿ ಇಂದು ‘ಮುಕ್ಬಾಂಗ್’ ಹಾಗೂ ‘ರಾಕ್ ಪೇಪರ್ ಸಿಸರ್ಸ್’ ಸವಾಲುಗಳ ವಿಡಿಯೋಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಬೆಟ್ಟದಷ್ಟು ಜಂಕ್ ಫುಡ್, ಅಂದರೆ ಬರ್ಗರ್, ಪಿಜ್ಜಾ, ಫ್ರೈಡ್ ಚಿಕನ್, ನೂಡಲ್ಸ್ ಮುಂದೆ ಕುಳಿತು, ರಾಕ್ ಪೇಪರ್ ಸಿಸರ್ಸ್ ಆಟ ಆಡುತ್ತಾ ಸೋತವರು ಪಟಪಟನೆ ತಿನಿಸುಗಳನ್ನು ನುಂಗುವ ದೃಶ್ಯಗಳನ್ನು ನೀವು ನೋಡಿರಬಹುದು. ಇದನ್ನು ನೋಡುವಾಗ ಇಷ್ಟೊಂದು ಆಹಾರವನ್ನು ನಿಜವಾಗಿಯೂ ತಿನ್ನುತ್ತಾರೆಯೇ?, ಇದು ಆರೋಗ್ಯಕ್ಕೆ ಎಷ್ಟು ಅಪಾಯಕಾರಿ? ಎಂಬ ಪ್ರಶ್ನೆಗಳು ಮೂಡುವುದು ಸಹಜ.

1. ಈ ವಿಡಿಯೋಗಳು ನಿಜವೇ? ಅವರು ನಿಜವಾಗಿಯೂ ಅಷ್ಟೊಂದು ತಿನ್ನುತ್ತಾರಾ?

ಬಹಳಷ್ಟು ಜನರಿಗೆ ಈ ವಿಡಿಯೋಗಳು ಸಂಪೂರ್ಣ ಸತ್ಯ ಎಂದು ಅನಿಸುತ್ತದೆ. ಆದರೆ ಇದರ ಹಿಂದಿನ ರಹಸ್ಯ ಬೇರೆಯೇ ಇದೆ.

ಕ್ಯಾಮೆರಾ ಎಡಿಟಿಂಗ್ ಕಟಿಂಗ್: ಅನೇಕ ಕ್ರಿಯೇಟರ್‌ಗಳು ವೀಡಿಯೊದಲ್ಲಿ ಆಹಾರವನ್ನು ಬಾಯಿಗೆ ಹಾಕಿಕೊಳ್ಳುವುದನ್ನು ಮಾತ್ರ ತೋರಿಸುತ್ತಾರೆ. ನಂತರ ಕಟ್ ಮಾಡಿ, ಆ ಆಹಾರವನ್ನು ಉಗುಳಿ ಬಿಡುತ್ತಾರೆ.

ನಿಜವಾಗಿ ತಿನ್ನುವವರು: ಕೆಲವರು ನಿಜವಾಗಿಯೂ ಅಷ್ಟು ಪ್ರಮಾಣದ ಆಹಾರವನ್ನು ತಿನ್ನುತ್ತಾರೆ. ಆದರೆ ವಿಡಿಯೋ ಚಿತ್ರೀಕರಣ ಮುಗಿದ ತಕ್ಷಣ ವಾಂತಿ ಮಾಡಿಕೊಳ್ಳುವುದು ಅಥವಾ ಮರುದಿನ ಉಪವಾಸ ಇರುವುದು, ತೀವ್ರ ವ್ಯಾಯಾಮ ಮಾಡುವುದನ್ನು ಅಭ್ಯಾಸ ಮಾಡಿಕೊಂಡಿರುತ್ತಾರೆ.

ದೃಶ್ಯ ಭ್ರಮೆ: ಕ್ಯಾಮೆರಾವನ್ನು ಆಹಾರಕ್ಕೆ ತೀರಾ ಹತ್ತಿರವಾಗಿಟ್ಟು ವೀಕ್ಷಕರಿಗೆ ಆಹಾರದ ಪ್ರಮಾಣ ಬೆಟ್ಟದಷ್ಟು ದೊಡ್ಡದಾಗಿ ಕಾಣುವಂತೆ ಮಾಡಲಾಗುತ್ತದೆ.

2. ಈ ರೀತಿ ಜಂಕ್ ಫುಡ್ ತಿನ್ನುವುದರಿಂದ ದೇಹಕ್ಕೆ ಎಷ್ಟು ತೊಂದರೆ?

ಅತಿಯಾದ ಜಂಕ್ ಫುಡ್ ಸೇವನೆಯಿಂದ ದೇಹದ ಮೇಲೆ ತೀವ್ರ ಪರಿಣಾಮ ಬೀರುತ್ತದೆ.

ಅತಿಯಾದ ಕ್ಯಾಲರಿ ಮತ್ತು ಕೊಬ್ಬು: ಜಂಕ್ ಫುಡ್‌ನಲ್ಲಿ ಅಧಿಕ ಪ್ರಮಾಣದ ಸಂಸ್ಕರಿಸಿದ ಎಣ್ಣೆ, ಸಕ್ಕರೆ ಮತ್ತು ಉಪ್ಪು ಇರುತ್ತದೆ. ಇದು ತಕ್ಷಣದ ತೂಕ ಹೆಚ್ಚಳ, ಬೊಜ್ಜು ಮತ್ತು ರಕ್ತದೊತ್ತಡಕ್ಕೆ ಕಾರಣವಾಗುತ್ತದೆ.

ಹೃದಯ ಮತ್ತು ಲಿವರ್ ತೊಂದರೆ: ನಿರಂತರ ಜಂಕ್ ಫುಡ್ ಸೇವನೆಯಿಂದ ರಕ್ತನಾಳಗಳಲ್ಲಿ ಕೊಬ್ಬು ಶೇಖರಣೆಯಾಗಿ ಹೃದಯಾಘಾತದ ಅಪಾಯ ಹೆಚ್ಚುತ್ತದೆ. ಜೊತೆಗೆ ‘ಫ್ಯಾಟಿ ಲಿವರ್’ ಸಮಸ್ಯೆಗೆ ದಾರಿಯಾಗುತ್ತದೆ.

ಜೀರ್ಣಾಂಗ ವ್ಯತ್ಯಾಸ: ನಾರಿನಂಶ ಇಲ್ಲದಿರುವುದರಿಂದ ಮಲಬದ್ಧತೆ, ಹೊಟ್ಟೆಯುರಿ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.

3. ಅವಸರದಲ್ಲಿ ಆಹಾರ ತಿನ್ನುವುದು ಸರಿಯೇ?

ಖಂಡಿತವಾಗಿಯೂ ತಪ್ಪು. ರಾಕ್ ಪೇಪರ್ ಸಿಸರ್ಸ್ ಆಟದ ನೆಪದಲ್ಲಿ ಅಥವಾ ಆತುರದಲ್ಲಿ ವೇಗವಾಗಿ ಆಹಾರ ತಿನ್ನುವುದು ಅತ್ಯಂತ ಅಪಾಯಕಾರಿ.

ಉಸಿರುಗಟ್ಟುವ ಅಪಾಯ: ದೊಡ್ಡ ಪ್ರಮಾಣದ ಆಹಾರವನ್ನು ಒಮ್ಮೆಗೆ ನುಂಗಿದಾಗ ಅದು ಶ್ವಾಸಕೋಶದ ದಾರಿಗೆ ಹೋಗಿ ಉಸಿರುಗಟ್ಟಿ ಪ್ರಾಣಾಪಾಯ ಉಂಟಾಗಬಹುದು.

ಮಿದುಳಿಗೆ ಸಂದೇಶ ಸಿಗುವುದಿಲ್ಲ: ನಮಗೆ ಹೊಟ್ಟೆ ತುಂಬಿದೆ ಎಂಬ ಸಂದೇಶ ಮಿದುಳಿಗೆ ತಲುಪಲು ಕನಿಷ್ಠ 20 ನಿಮಿಷಗಳು ಬೇಕು. ಆತುರದಲ್ಲಿ ತಿಂದಾಗ ನಮಗೆ ಅರಿವಿಲ್ಲದೇ ಅತಿಯಾಗಿ ತಿಂದುಬಿಡುತ್ತೇವೆ.

4. ಜಗಿಯದೆ ಆಹಾರ ನುಂಗುವುದು ಸುರಕ್ಷಿತವೇ?

ನಮ್ಮ ಜೀರ್ಣಕ್ರಿಯೆ ಪ್ರಾರಂಭವಾಗುವುದೇ ಬಾಯಿಯಲ್ಲಿ.

ಲಾಲಾರಸದ ಮಹತ್ವ: ಬಾಯಿಯಲ್ಲಿ ಆಹಾರವನ್ನು ಚೆನ್ನಾಗಿ ಜಗಿದಾಗ ಲಾಲಾರಸ ಬೆರೆತು ಆಹಾರದಲ್ಲಿನ ಪಿಷ್ಟ ಜೀರ್ಣವಾಗಲು ಶುರುವಾಗುತ್ತದೆ.

ಹೊಟ್ಟೆಯ ಮೇಲೆ ಒತ್ತಡ: ಜಗಿಯದೆ ನುಂಗಿದಾಗ ಜಠರವು ಆ ಆಹಾರವನ್ನು ಕರಗಿಸಲು ಅತಿಯಾಗಿ ಶ್ರಮಿಸಬೇಕಾಗುತ್ತದೆ. ಇದರಿಂದ ಅಜೀರ್ಣ, ಹೊಟ್ಟೆನೋವು, ಗ್ಯಾಸ್ಟ್ರಿಕ್ ಮತ್ತು ವಾಂತಿ ಉಂಟಾಗುತ್ತದೆ.

5. ನಿಂತುಕೊಂಡು ತಿನ್ನುವುದು ಸರಿಯೇ?

ಆಯುರ್ವೇದ ಮತ್ತು ಆಧುನಿಕ ವಿಜ್ಞಾನ ಎರಡರ ಪ್ರಕಾರವೂ ನಿಂತುಕೊಂಡು ತಿನ್ನುವುದು ಒಳ್ಳೆಯದಲ್ಲ.

ನಿಂತುಕೊಂಡು ತಿಂದಾಗ ಆಹಾರವು ಗುರುತ್ವಾಕರ್ಷಣೆಯ ಬಲದಿಂದ ನೇರವಾಗಿ ಜಠರಕ್ಕೆ ಬೀಳುತ್ತದೆ, ಇದರಿಂದ ಜೀರ್ಣರಸಗಳು ಸರಿಯಾಗಿ ಬೆರೆಯುವುದಿಲ್ಲ.

ನಿಂತುಕೊಂಡಾಗ ದೇಹದ ಸ್ನಾಯುಗಳು ಒತ್ತಡದಲ್ಲಿರುತ್ತವೆ. ಕುಳಿತು ತಿಂದಾಗ ಮಾತ್ರ ದೇಹವು ಶಾಂತ ಸ್ಥಿತಿಯಲ್ಲಿದ್ದು ಜೀರ್ಣಕ್ರಿಯೆಗೆ ಸೂಕ್ತ ವಾತಾವರಣ ನಿರ್ಮಾಣವಾಗುತ್ತದೆ.

ಕುಳಿತು ಧ್ಯಾನಸ್ಥರಾಗಿ ತಿನ್ನುವುದರಿಂದ ಆಹಾರದ ರುಚಿ ಸಿಗುತ್ತದೆ ಮತ್ತು ಸುಲಭವಾಗಿ ಜೀರ್ಣವಾಗುತ್ತದೆ.

ಸೋಶಿಯಲ್ ಮೀಡಿಯಾದಲ್ಲಿ ಲೈಕ್ಸ್ ಮತ್ತು ವ್ಯೂಸ್ ಪಡೆಯಲು ಮಾಡುವ ಇಂತಹ ಸ್ಟಂಟ್‌ಗಳನ್ನು ನೋಡಿ ಅನುಕರಿಸಲು ಹೋಗಬೇಡಿ. ಕ್ಯಾಮೆರಾ ಮುಂದಿರುವ ಗ್ಲಾಮರ್ ನೋಡಿ ನಮ್ಮ ದಿನನಿತ್ಯದ ಆಹಾರ ಪದ್ಧತಿಯನ್ನು ಹಾಳುಮಾಡಿಕೊಳ್ಳಬಾರದು. “ಆಹಾರವನ್ನು ಔಷಧಿಯಂತೆ ತಿಂದರೆ, ಔಷಧಿಯನ್ನು ಆಹಾರದಂತೆ ತಿನ್ನುವ ಪರಿಸ್ಥಿತಿ ಬರುವುದಿಲ್ಲ” ಎಂಬ ಮಾತನ್ನು ಸದಾ ನೆನಪಿಡಿ.

Must Read