ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಕ್ಸ್ ಆಫೀಸ್‌ನಲ್ಲಿ ಸಣ್ಣ ಸಿನಿಮಾಗಳು ದೊಡ್ಡ ಕಂಟೆಂಟ್ ಹಿಡಿದುಕೊಂಡು ಬಂದರೆ ಎಂಥಾ ಮ್ಯಾಜಿಕ್ ಮಾಡಬಹುದು ಅನ್ನೋದಕ್ಕೆ ಈಗ ‘ಹನುಮಾನ್ ಅಂಶ್’ ಸಿನಿಮಾನೇ ಸಾಕ್ಷಿ. ರಾಕಿಂಗ್ ಸ್ಟಾರ್ ಯಶ್ ಅವರ ಬಹುನಿರೀಕ್ಷಿತ ‘ಟಾಕ್ಸಿಕ್’ ನಂತಹ ಮೆಗಾ ಬಜೆಟ್ ಸಿನಿಮಾಗಳು ಅಖಾಡದಲ್ಲಿದ್ದರೂ, ಧೃತಿಗೆಡದೆ ಅಖಾಡಕ್ಕಿಳಿದ ‘ಹನುಮಾನ್ ಅಂಶ್’ ಸಿನಿಮಾ ಈಗ ವಿಶ್ವದಾದ್ಯಂತ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದು ಬರೋಬ್ಬರಿ 316.30 ಕೋಟಿ ಬಾಚಿಕೊಂಡು ಇತಿಹಾಸ ಸೃಷ್ಟಿಸಿದೆ.
ವಿಶಾಲ್ ಚತುರ್ವೇದಿ ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರದಲ್ಲಿ ಶೋಭಿನವ್ ಸತ್ಯಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಪ್ರೇಕ್ಷಕರ ಮನಸ್ಸನ್ನು ಗೆದ್ದಿದ್ದಾರೆ. ಸಿನಿಮಾ ಬಿಡುಗಡೆಯಾದ ಹೊಸದರಲ್ಲಿ ಪರಿಸ್ಥಿತಿ ತೀರ ನೆಟ್ಟಗಿರಲಿಲ್ಲ. ಬಿಗ್ ಬಜೆಟ್ ಸಿನಿಮಾಗಳ ಆರ್ಭಟಕ್ಕೆ ಹೆದರಿ ವಿತರಕರು ಚಿತ್ರಮಂದಿರಗಳ ಸಂಖ್ಯೆಯನ್ನು 350 ರಿಂದ ಏಕಾಏಕಿ 25ಕ್ಕೆ ಇಳಿಸಿಬಿಟ್ಟಿದ್ದರು. ಸಿನಿಮಾ ಥಿಯೇಟರ್‌ಗಳಿಂದ ಕಾಲ್ಕಿಳೋ ಹಂತಕ್ಕೆ ಬಂದು ತಲುಪಿತ್ತು. ಆದರೆ, ಜನರ ನಡುವೆ ಹರಿದಾಡಿದ ‘ವರ್ಡ್ ಆಫ್ ಮೌತ್’ ಸಿನಿಮಾವನ್ನು ಕೈಹಿಡಿಯಿತು. ಕಲೆಕ್ಷನ್ ಎಲ್ಲೂ ಕುಗ್ಗದೇ ಇರೋದನ್ನು ನೋಡಿ ನಿರ್ದೇಶಕ ವಿಶಾಲ್ ಹಾಗೂ ನಿರ್ಮಾಪಕಿ ರಾಗಿಣಿ ಸೋನಾ ಅವರು ಧೈರ್ಯ ಮಾಡಿ ವಿತರಕರ ಬಳಿ ಮಾತನಾಡಿ, ಮತ್ತೆ ಶೋಗಳ ಸಂಖ್ಯೆ ಹೆಚ್ಚಿಸಿದರು.
ಈ ಅಭೂತಪೂರ್ವ ಗೆಲುವಿನ ಬಗ್ಗೆ ಮಾತನಾಡಿದ ನಿರ್ಮಾಪಕಿ ರಾಗಿಣಿ, “‘ಟಾಕ್ಸಿಕ್’ ನಂತಹ ದೈತ್ಯ ಸಿನಿಮಾದ ಎದುರು ನಮ್ಮ ಸಣ್ಣ ಚಿತ್ರ ಒಂದು ದಿನವಾದರೂ ತಡೆದು ನಿಲ್ಲುತ್ತಾ ಎಂಬ ಅನುಮಾನವಿತ್ತು. ಮೀಡಿಯಾ ಮತ್ತು ಸೋಶಿಯಲ್ ಮೀಡಿಯಾದಲ್ಲಿ ಇವೆರಡು ಸಿನಿಮಾಗಳ ನಡುವೆ ದೊಡ್ಡ ಫೈಟ್ ಕ್ರಿಯೇಟ್ ಆಗಿತ್ತು. ಆದರೆ ನಾವು ಯಾವುದೇ ಗಲಿಬಿಲಿ ಇಲ್ಲದೆ ಹನುಮಂತನ ಮೇಲೆ ಭಾರ ಹಾಕಿ ಮುಂದೆ ಹೆಜ್ಜೆ ಇಟ್ಟೆವು. ಆ ಧೈರ್ಯಕ್ಕೆ ಈಗ ಅದ್ಭುತ ಪ್ರತಿಫಲ ಸಿಕ್ಕಿದೆ” ಎಂದು ಹರುಷ ವ್ಯಕ್ತಪಡಿಸಿದ್ದಾರೆ.
ಆಗಸ್ಟ್ 7 ರಂದು ಬಿಡುಗಡೆಯಾದ ಈ ಸಿನಿಮಾ ಈಗ ಗ್ಲೋಬಲ್ ಮಟ್ಟದಲ್ಲಿ 316.30 ಕೋಟಿ ಗಳಿಸಿ, ಬಜೆಟ್‌ಗೆ ಹೋಲಿಸಿದರೆ ಅತ್ಯಂತ ಹೆಚ್ಚು ಲಾಭ ತಂದುಕೊಟ್ಟ ಭಾರತೀಯ ಸಿನಿಮಾಗಳ ಸಾಲಿಗೆ ಸೇರಿದೆ. ಕಂಟೆಂಟ್ ಚೆನ್ನಾಗಿದ್ದರೆ ಜನ ಖಂಡಿತ ಚಿತ್ರಮಂದಿರಕ್ಕೆ ಬರ್ತಾರೆ, ಸಿನಿಮಾನ ತಲೆಯ ಮೇಲೆ ಇಟ್ಟುಕೊಂಡು ಮೆರೆಸ್ತಾರೆ ಅನ್ನೋದಕ್ಕೆ ‘ಹನುಮಾನ್ ಅಂಶ್’ ಒಂದು ಸೂಪರ್ ಉದಾಹರಣೆ.



