ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರಾಚ್ಯದ ಮಹಾಯುದ್ಧವು ಈಗ ಹೊಸ ರಣರಂಗಕ್ಕೆ ವಿಸ್ತರಿಸಿದ್ದು, ಇಡೀ ಪ್ರಾದೇಶಿಕ ಮತ್ತು ಜಾಗತಿಕ ಇಂಧನ ಮಾರುಕಟ್ಟೆಯನ್ನು ತಲ್ಲಣಗೊಳಿಸಿದೆ. ಕೆಂಪು ಸಮುದ್ರದಲ್ಲಿ (Red Sea) ಸೌದಿ ಅರೇಬಿಯಾದ ತೈಲ ಹಡಗುಗಳ ಮೇಲೆ ಇರಾನ್ ಬೆಂಬಲಿತ ಹೌತಿ ಬಂಡುಕೋರರು ಭೀಕರ ದಾಳಿ ನಡೆಸಿದ್ದಾರೆ. ಇದರ ಬೆನ್ನಲ್ಲೇ, ಅಮೆರಿಕದ ದಾಳಿಗಳಿಗೆ ಪ್ರತಿಯಾಗಿ ತಾವೂ ಹಠಾತ್ ದಾಳಿಗಳನ್ನು ಮುಂದುವರಿಸುವುದಾಗಿ ಇರಾನ್ ಗುರುವಾರ (ಜುಲೈ 23) ಪ್ರತಿಜ್ಞೆ ಮಾಡಿದೆ.
‘ಕಣ್ಣಿಗೆ ಕಣ್ಣು’ ಎಚ್ಚರಿಕೆ ನೀಡಿದ ಇರಾನ್ ಮತ್ತು ಅಮೆರಿಕ
ಕೆಂಪು ಸಮುದ್ರ ಮತ್ತು ಹಾರ್ಮುಜ್ ಜಲಸಂಧಿಯ ನಿಯಂತ್ರಣಕ್ಕಾಗಿ ಅಮೆರಿಕ ಹಾಗೂ ಇರಾನ್ ನಡುವೆ ತೀವ್ರ ಸಂಘರ್ಷ ಏರ್ಪಟ್ಟಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, “ಇರಾನ್ ಏನಾದರೂ ಹಾರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಮೇಲೆ ದಾಳಿ ನಡೆಸಿದರೆ, ಅದಕ್ಕೆ ಪ್ರತಿಯಾಗಿ ನಾವು ಇರಾನ್‌ನ ಒಂದು ಸೇತುವೆ ಅಥವಾ ವಿದ್ಯುತ್ ಸ್ಥಾವರವನ್ನು ಬಾಂಬ್ ಹಾಕಿ ಧ್ವಂಸಗೊಳಿಸುತ್ತೇವೆ” ಎಂದು ಸಾಮಾಜಿಕ ಜಾಲತಾಣದಲ್ಲಿ ಕಠಿಣ ಎಚ್ಚರಿಕೆ ನೀಡಿದ್ದಾರೆ. ಇದಕ್ಕೆ ಪ್ರತಿಯಾಗಿ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ಅವರು, “ನಮ್ಮ ರಕ್ಷಣಾ ನೀತಿ ಸ್ಪಷ್ಟವಾಗಿದೆ; ಅದು ಕಣ್ಣಿಗೆ ಕಣ್ಣು (Eye for an eye)” ಎಂದು ತಿರುಗೇಟು ನೀಡಿದ್ದಾರೆ.
ಸೌದಿ ಹಡಗುಗಳ ಮುಟ್ಟುಗೋಲು; ಹೌತಿಗಳ ಪ್ರವೇಶ
ಸೌದಿ ಅರೇಬಿಯಾದ ಬಂದರುಗಳಿಗೆ ಸಂಪೂರ್ಣ ದಿಗ್ಬಂಧನ ವಿಧಿಸಿರುವುದಾಗಿ ಘೋಷಿಸಿರುವ ಹೌತಿ ಬಂಡುಕೋರರು, ಕೆಂಪು ಸಮುದ್ರದಲ್ಲಿ ಚಲಿಸುತ್ತಿದ್ದ ಸೌದಿಯ ‘ಎನ್ಸಿಲಿಯಾ’ ಮತ್ತು ‘ಲೈಲಾ’ ಎಂಬ ಎರಡು ಬೃಹತ್ ತೈಲ ಟ್ಯಾಂಕರ್‌ಗಳ ಮೇಲೆ ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆಸಿದ್ದಾರೆ. ಬ್ರಿಟಿಷ್ ನೌಕಾ ಭದ್ರತಾ ಸಂಸ್ಥೆ (UKMTO) ಪ್ರಕಾರ, ಅಲ್ ಶುಕೈಕ್ ಬಳಿ ಹಡಗಿಗೆ ನಿಗೂಢ ವಸ್ತುವೊಂದು ಡಿಕ್ಕಿ ಹೊಡೆದಿದ್ದು, ಅದರಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಮತ್ತೊಂದೆಡೆ, ಇರಾನ್‌ನ ರೆವಲ್ಯೂಷನರಿ ಗಾರ್ಡ್ಸ್ ಹಡಗುಗಳು ಹಾರ್ಮುಜ್ ಜಲಸಂಧಿಯಲ್ಲಿ ಮೂರು ತೈಲ ಟ್ಯಾಂಕರ್‌ಗಳನ್ನು ತಡೆದು ನಿಲ್ಲಿಸಿದ್ದು, “ಹಾರ್ಮುಜ್ ನಮ್ಮ ನಿಯಂತ್ರಣದಲ್ಲಿದೆ, ಅಮೆರಿಕದ ಮಾತನ್ನು ಕೇಳಿ ಬರುವ ಹಡಗುಗಳಿಗೆ ಇದೇ ಗತಿ” ಎಂದು ಗುಡುಗಿವೆ.
ಇದನ್ನೂ Oದಿ;
ಬ್ಯಾರೆಲ್ ತೈಲ ಬೆಲೆ $ 97.80 ಕ್ಕೆ ಏರಿಕೆ; ಭಾರತಕ್ಕೆ ಆತಂಕ
ಈ ಭೀಕರ ಜಾಗತಿಕ ಸಂಘರ್ಷದ ನೇರ ಪರಿಣಾಮ ಅಂತಾರಾಷ್ಟ್ರೀಯ ಮಾರುಕಟ್ಟೆಯ ಮೇಲೆ ಬೀರಿದೆ. ಜಾಗತಿಕ ತೈಲ ಬೆಲೆಯ ಮಾನದಂಡವಾಗಿರುವ ಬ್ರೆಂಟ್ ಕಚ್ಚಾ ತೈಲದ ಬೆಲೆ ಗುರುವಾರ ಒಂದೇ ದಿನ ಶೇಕಡಾ 4ರಷ್ಟು ಭಾರಿ ಜಿಗಿತ ಕಂಡಿದ್ದು, ಪ್ರತಿ ಬ್ಯಾರೆಲ್‌ಗೆ 97.80 ಡಾಲರ್ ತಲುಪಿದೆ. ಇದು ಜಾಗತಿಕವಾಗಿ ಹಣದುಬ್ಬರ ಮತ್ತು ಆರ್ಥಿಕ ಹಿಂಜರಿತದ ಭೀತಿಯನ್ನು ಮತ್ತೆ ತಂದಿದೆ.



